ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ (ಎನ್ಎಎಲ್ಎಸ್ಎ- ನಾಲ್ಸಾ) ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರನ್ನು ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ನಾಮನಿರ್ದೇಶನ ಮಾಡಿದ್ದಾರೆ.
ಕಾನೂನು ಸೇವೆಗಳ ಪ್ರಾಧಿಕಾರ ಕಾಯಿದೆ- 1987ರ ಪ್ರಕಾರ, ಭಾರತದ ಮುಖ್ಯ ನ್ಯಾಯಮೂರ್ತಿಗಳು ನಾಲ್ಸಾದ ಪ್ರಧಾನ ಪೋಷಕರು. ಭಾರತದ ಮುಖ್ಯ ನ್ಯಾಯಮೂರ್ತಿಗಳ ಸಹಯೋಗದೊಂದಿಗೆ ರಾಷ್ಟ್ರಪತಿ ಅವರು ಸುಪ್ರೀಂ ಕೋರ್ಟ್ ಹಾಲಿ ಅಥವಾ ನಿವೃತ್ತ ನ್ಯಾಯಮೂರ್ತಿಗಳನ್ನು ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ನೇಮಕ ಮಾಡುತ್ತಾರೆ.
ಸಂಪ್ರದಾಯದ ಪ್ರಕಾರ, ನಾಲ್ಸಾದ ಕಾರ್ಯನಿರ್ವಾಹಕ ಅಧ್ಯಕ್ಷ ಸ್ಥಾನವನ್ನು ಸುಪ್ರೀಂ ಕೋರ್ಟ್‌ನ ಎರಡನೇ ಅತಿ ಹಿರಿಯ ನ್ಯಾಯಮೂರ್ತಿ ಅಲಂಕರಿಸುತ್ತಾರೆ. ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷರಾದ ನ್ಯಾ. ಸಂಜಯ್ ಕಿಶನ್ ಕೌಲ್ ಅವರು ಡಿಸೆಂಬರ್ 25ರಂದು ನಿವೃತ್ತರಾಗಿದ್ದಾರೆ.
ಪ್ರಸ್ತುತ, ಸುಪ್ರೀಂ ಕೋರ್ಟ್‌ನ ಅತ್ಯಂತ ಹಿರಿಯ ನ್ಯಾಯಮೂರ್ತಿಯಾಗಿರುವ ಖನ್ನಾ ಅವರು ದೆಹಲಿ ಹೈಕೋರ್ಟ್ ನ್ಯಾಯಮೂರ್ತಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಅವರ ತಂದೆ ನ್ಯಾ. ದೇವ್ ರಾಜ್ ಖನ್ನಾ ಕೂಡ ಈ ಹುದ್ದೆ ಅಲಂಕರಿಸಿದ್ದರು. ನ್ಯಾಯಮೂರ್ತಿ ಖನ್ನಾ ಅವರು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಚ್. ಆರ್ ಖನ್ನಾ ಅವರ ಸೋದರಳಿಯ.
ಜೈಲುಗಳಿಂದ ಬಿಡುಗಡೆಗೆ ಅರ್ಹರಾದ ಕೈದಿಗಳನ್ನು ಗುರುತಿಸಲು ಸುಪ್ರೀಂ ಕೋರ್ಟ್ ಮತ್ತು ನಾಲ್ಸಾ ರಾಷ್ಟ್ರವ್ಯಾಪಿ ಅಭಿಯಾನ ಆರಂಭಿಸಿದ್ದವು.
[ಅಧಿಸೂಚನೆ ಓದಿ]