
ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಅವರನ್ನು ಬಹ್ರೇನ್ ಅಂತಾರಾಷ್ಟ್ರೀಯ ವಾಣಿಜ್ಯ ನ್ಯಾಯಾಲಯದ (ಬಿಐಸಿಸಿ) ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.
ಬಹ್ರೇನ್‌ನ ʼಟೀಮ್ ಬಹ್ರೇನ್ʼ ಯೋಜನೆಯು ಬಿಐಸಿಸಿ ಉಪಕ್ರಮವಾಗಿದ್ದು, ಪಕ್ಷಕಾರರ ನಡುವೆ ವಿವಾದ ಇತ್ಯರ್ಥಪಡಿಸಿ ಖಾಸಗಿ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ವಿಶೇಷ ವೇದಿಕೆಯಾಗಿದೆ.
ಬಹ್ರೇನ್‌ನ ರಾಜ ಹಮದ್ ಬಿನ್ ಇಸಾ ಅಲ್ ಖಾಲಿಫಾ ಅವರು ನೂತನವಾಗಿ ಸೃಷ್ಟಿಸಿರುವ ಬಿಐಸಿಸಿನಲ್ಲಿ ಒಂಭತ್ತು ಸದಸ್ಯರಿದ್ದು, ನ್ಯಾ. ಕೌಲ್ ಒಬ್ಬರಾಗಿದ್ದಾರೆ. ಖ್ಯಾತ ಮಧ್ಯಸ್ಥಿಕೆದಾರ ಜಾನ್ ಪೌಲ್‌ಸನ್ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದ್ದು, ಮಾಜಿ ಬ್ರಿಟಿಷ್ ನ್ಯಾಯಾಧೀಶರಾದ ಕ್ರಿಸ್ಟೋಫರ್ ಗ್ರೀನ್‌ವುಡ್ ಅವರು ಉಪಾಧ್ಯಕ್ಷರಾಗಿ ಕೆಲಸ ಮಾಡಲಿದ್ದಾರೆ.
ಡಿಸೆಂಬರ್ 26, 1958ರಂದು ಜನಿಸಿದ ನ್ಯಾ. ಕೌಲ್, ದೆಹಲಿಯ ಮಾಡರ್ನ್ ಶಾಲೆಯಲ್ಲಿ ಶಿಕ್ಷಣ ಪೂರೈಸಿದರು. 1979ರಲ್ಲಿ ದೆಹಲಿಯ ಸೇಂಟ್ ಸ್ಟೀಫನ್ ಕಾಲೇಜಿನಲ್ಲಿ ಅರ್ಥಶಾಸ್ತ್ರ ಪದವಿ ಪಡೆದರು. ದೆಹಲಿ ವಿಶ್ವವಿದ್ಯಾಲಯದ ಕ್ಯಾಂಪಸ್ ಲಾ ಸೆಂಟರ್‌ನಲ್ಲಿ 1982ರಲ್ಲಿ ಎಲ್‌ಎಲ್‌ಬಿ ಪೂರ್ಣಗೊಳಿಸಿದ ನ್ಯಾ.ಕೌಲ್ ಅವರು ಅದೇ ವರ್ಷ ದೆಹಲಿ ವಕೀಲರ ಸಂಘದಲ್ಲಿ ವಕೀಲರಾಗಿ ನೋಂದಾಯಿಸಿಕೊಂಡರು.
1987ರಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಅಡ್ವೊಕೇಟ್ ಆನ್ ರೆಕಾರ್ಡ್ ಆದ ನ್ಯಾ. ಕೌಲ್ ಅವರು 1999ರಲ್ಲಿ ಹಿರಿಯ ವಕೀಲರಾಗಿ ಪದೋನ್ನತಿ ಪಡೆದರು. ದೆಹಲಿ ಹೈಕೋರ್ಟ್ ಮತ್ತು ದೆಹಲಿ ವಿಶ್ವವಿದ್ಯಾಲಯದಲ್ಲಿ ಹಿರಿಯ ವಕೀಲರಾಗಿ ಕೆಲಸ ನಿರ್ವಹಿಸಿದ ನ್ಯಾ. ಕೌಲ್ ಅವರು ಭಾರತ ಸರ್ಕಾರ ಮತ್ತು ಡಿಡಿಎಗೆ ಕಾನೂನು ಸಲಹೆಗಾರರಾಗಿಯೂ ಕಾರ್ಯನಿರ್ವಹಿಸಿದ್ದರು.
2001ರಲ್ಲಿ ದೆಹಲಿ ಹೈಕೋರ್ಟ್‌ಗೆ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡ ನ್ಯಾ. ಕೌಲ್ ಅವರು 2003ರಲ್ಲಿ ಕಾಯಂಗೊಂಡರು. ಆನಂತರ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಕೆಲಸ ಮಾಡಿದರು. 2017ರ ಫೆಬ್ರವರಿ 17ರಂದು ನ್ಯಾ. ಕೌಲ್ ಅವರು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಂಡರು. 2023ರ ಡಿಸೆಂಬರ್‌ನಲ್ಲಿ ಸರ್ವೋಚ್ಚ ನ್ಯಾಯಾಲಯದಿಂದ ನಿವೃತ್ತರಾದರು.