ಎಂಬತ್ತರ ದಶಕದಿಂದ ಕಾಶ್ಮೀರದಲ್ಲಿ ಮಾನವ ಹಕ್ಕು ಉಲ್ಲಂಘನೆ: ಸತ್ಯ ಮತ್ತು ಸಮನ್ವಯ ಸಮಿತಿ ರಚನೆಗೆ ನ್ಯಾ. ಕೌಲ್ ಶಿಫಾರಸು

ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಮೊದಲ ಹೆಜ್ಜೆ ಎಂದರೆ ಈ ಪ್ರದೇಶದ ಜನರ ವಿರುದ್ಧ ಪ್ರಭುತ್ವ ಮತ್ತು ಪ್ರಭುತ್ವೇತರ ಶಕ್ತಿಗಳು ನಡೆಸಿದ ಮಾನವ ಹಕ್ಕು ಉಲ್ಲಂಘನೆ ಬಗ್ಗೆ ಸಾಮೂಹಿಕ ಅರಿವು ಪಡೆಯುವುದಾಗಿದೆ ಎಂದು ಅವರು ಹೇಳಿದರು.
ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್
ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್
Published on

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ಸೋಮವಾರ ಎತ್ತಿಹಿಡಿದಿರುವ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಸಂಜಯ್‌ ಕಿಶನ್‌ ಕೌಲ್‌, 1980ರ ದಶಕದಿಂದ ಇಲ್ಲಿ ಪ್ರಭುತ್ವ ಮತ್ತು ಪ್ರಭುತ್ವೇತರ ಶಕ್ತಿಗಳು ನಡೆಸಿದ ಮಾನವ ಹಕ್ಕುಗಳ ಉಲ್ಲಂಘನೆಗೆ ಪರಿಹಾರ ಕಂಡುಕೊಳ್ಳುವುದಕ್ಕಾಗಿ ಸತ್ಯ ಮತ್ತು ಸಮನ್ವಯ ಸಮಿತಿ ರಚಿಸುವಂತೆ ಶಿಫಾರಸು ಮಾಡಿದ್ದಾರೆ.

ತೀರ್ಪಿಗೆ ಬರೆದಿರುವ ಹೃದಯಸ್ಪರ್ಶಿ ಮುನ್ನುಡಿಯಲ್ಲಿ ಅವರು ಸಾಮಾಜಿಕ ಸಂದರ್ಭ ಮತ್ತು ಕಾಶ್ಮೀರದ ಐತಿಹಾಸಿಕ ಹೊರೆಯನ್ನು ಗಣನೆಗೆ ತೆಗೆದುಕೊಳ್ಳುವುದು ಅತ್ಯಗತ್ಯ ಎಂದಿದ್ದಾರೆ.

ನ್ಯಾ. ಕೌಲ್‌ ಅವರ ಅವಲೋಕನದ ಪ್ರಮುಖಾಂಶಗಳು

  • ಸತ್ಯ ಮತ್ತು ಸಮನ್ವಯ ಸಮಿತಿಯನ್ನು ತ್ವರಿತವಾಗಿ ಸ್ಥಾಪಿಸಬೇಕು. ಈ ಕ್ರಿಯೆ ಕಾಲಮಿತಿಯೊಳಗೆ ನಡೆಯಬೇಕು. ಅಪನಂಬಿಕೆಯ ಭಾವನೆಯೊಂದಿಗೆ ಪೀಳಿಗೆಯ ಯುವಕರು ಈಗಾಗಲೇ ಬೆಳೆದಿದ್ದು ಅವರಿಗೆ ನಾವು ಪರಿಹಾರ ನೀಡಬೇಕಿದೆ.

  • ಸಮಿತಿ ಸ್ಥಾಪಿಸುವ ವಿಧಾನ ಕಂಡುಕೊಂಡು ಅದಕ್ಕೆ ಉತ್ತಮ ಮಾರ್ಗ ನಿರ್ಧರಿಸುವುದು ಸರ್ಕಾರಕ್ಕೆ ಬಿಟ್ಟ ವಿಚಾರ.

  • ವರ್ಣಭೇದ ನೀತಿಯಿಂದಾದ ಮಾನವ ಹಕ್ಕುಗಳ ಉಲ್ಲಂಘನೆಯ ಬಗ್ಗೆ ತನಿಖೆ ನಡೆಸಲು ದಕ್ಷಿಣ ಆಫ್ರಿಕಾದಲ್ಲಿ ಅಂತಹ ಸಮಿತಿ ರಚಿಸಲಾಗಿತ್ತು. ಈ ಹಿಂದೆ, ಅಂತಹ ಸಮಿತಿ ರಚಿಸಬೇಕೆಂಬ ಕೂಗು ಕಾಶ್ಮೀರದ ವಿವಿಧ ಸ್ತರಗಳಿಂದಲೇ ಕೇಳಿ ಬಂದಿತ್ತು.

  • ಜಮ್ಮು ಮತ್ತು ಕಾಶ್ಮೀರದ ಕೆಲ ಭಾಗಗಳನ್ನು ಇತರ ದೇಶಗಳು ಆಕ್ರಮಿಸಿಕೊಂಡ 1947ರ ಆಕ್ರಮಣ ಮತ್ತು 1980ರ ದಶಕದಲ್ಲಿ ಉಂಟಾದ ಬಂಡಾಯದಿಂದಾಗಿ 1990ರ ವೇಳೆಗೆ ರಾಜ್ಯದ ಜನಸಂಖ್ಯೆಯ ಒಂದು ಭಾಗದ ವಲಸೆ ಹೋಗಿದ್ದು ಅವರಿಗೆ ಪೂರ್ಣ ಪ್ರಮಾಣದ ಪರಿಹಾರ ನೀಡಿಲ್ಲ.

  • ಮಹಿಳೆಯರು ಮಕ್ಕಳು ಸೇರಿದಂತೆ ಈ ಪ್ರದೇಶದ ಜನ ತೊಂದರೆ ಅನುಭವಿಸಿದ್ದು ಗಾಯಗಳನ್ನು ಗುಣಪಡಿಸುವ ಅಗತ್ಯವಿದೆ.

  • ಸಮಸ್ಯೆ ಪರಿಹರಿಸುವ ಮೊದಲ ಹೆಜ್ಜೆ ಎಂದರೆ ಈ ಪ್ರದೇಶದ ಜನರ ವಿರುದ್ಧ ಪ್ರಭುತ್ವ ಮತ್ತು ಪ್ರಭುತ್ವೇತರ ಶಕ್ತಿಗಳು ನಡೆಸಿದ ಮಾನವ ಹಕ್ಕು ಉಲ್ಲಂಘನೆ ಬಗ್ಗೆ ಸಾಮೂಹಿಕ ಅರಿವು ಪಡೆಯುವುದಾಗಿದೆ.

  • ಸತ್ಯ ನುಡಿಯುವುದರಿಂದ ಸಂತ್ರಸ್ತರಿಗೆ ತಮ್ಮ ಕಥೆ ಹೇಳಿಕೊಳ್ಳಲು ಅವಕಾಶ ಮಾಡಿಕೊಡಲಿದ್ದು ತಪ್ಪನ್ನು ಶಾಶ್ವತವಾಗಿಸಿದವರು ಮತ್ತು ಇಡೀ ಸಮಾಜ ನಡೆದಿದ್ದನ್ನು ಒಪ್ಪಿಕೊಳ್ಳಲು ಅನುವಾಗಲಿದೆ. ಇದು ಸಾಮರಸ್ಯಕ್ಕೆ ಹಾದಿ ಮಾಡಿಕೊಡುತ್ತದೆ.

  • ರಚನೆಯಾಗುವ ಸಮಿತಿ ಕ್ರಿಮಿನಲ್‌ ನ್ಯಾಯಾಲಯವಾಗಿ ಬದಲಾಗಬಾರದು. ಬದಲಿಗೆ ಮಾನವೀಯ ಮತ್ತು ವೈಯಕ್ತಿಕ ಪ್ರಕ್ರಿಯೆಯೊಂದಿಗೆ ಸಾಗಬೇಕು. ಜನ ತಾವು ಅನುಭವಿಸಿದ್ದನ್ನು ಹಂಚಿಕೊಳ್ಳಲು ಅದು ಅವಕಾಶ ಮಾಡಿಕೊಡಬೇಕು. ಎಲ್ಲಾ ನಿಟ್ಟಿನಿಂದಲೂ ಸಂವಾದಕ್ಕೆ ಅವಕಾಶ ಮಾಡಿಕೊಡಬೇಕು.

Kannada Bar & Bench
kannada.barandbench.com