
ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ನಿವಾಸದಲ್ಲಿ ಲೆಕ್ಕಕ್ಕೆ ಸಿಗದ ನಗದು ಪತ್ತೆಯಾದ ಆರೋಪದ ಕುರಿತು ಪ್ರಾಥಮಿಕ ತನಿಖಾ ವರದಿಯನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸಂಜೀವ್ ಖನ್ನಾ ಅವರು ಶನಿವಾರ ರಾತ್ರಿ ಬಹಿರಂಗಪಡಿಸಿದ ನಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಅನುಮಾನಗಳು ಮೂಡಿವೆ.
ಪ್ರಾಮಾಣಿಕ ಮತ್ತು ಸಮರ್ಥ ನ್ಯಾಯಾಧೀಶರೆಂದು ಪರಿಗಣಿಸಲಾದ ನ್ಯಾಯಾಧೀಶರ ವಿರುದ್ಧ ಪಿತೂರಿ ನಡೆದಿದೆಯೇ? ಅಥವಾ ನ್ಯಾಯಮೂರ್ತಿ ವರ್ಮಾ ನಿಜವಾಗಿಯೂ ತಪ್ಪಿತಸ್ಥರೇ ಎಂಬ ಪ್ರಶ್ನೆ ಜನಸಾಮಾನ್ಯರಲ್ಲಿ ಮೂಡಿರುವುದರ ನಡುವೆಯೇ ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ಕೆ ಉಪಾಧ್ಯಾಯ ಅವರ ವರದಿ ಮತ್ತು ನ್ಯಾಯಮೂರ್ತಿ ವರ್ಮಾ ಅವರ ಪ್ರತಿಕ್ರಿಯೆ ಸೇರಿದಂತೆ ವಿವಿಧ ದಾಖಲೆಗಳು ಬೇರೆ ಬಗೆಯ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿವೆ.
ಅರ್ಧ ಸುಟ್ಟ ನೋಟುಗಳು ಸೇರಿದಂತೆ ದಹನಗೊಂಡ ವಸ್ತುಗಳನ್ನು ಯಾರು ತೆಗೆದುಹಾಕಿದರು ಮತ್ತು ಯಾರ ಸೂಚನೆಗಳ ಮೇರೆಗೆ? ಜೊತೆಗೆ ಈಗ ಅವು ಎಲ್ಲಿವೆ?
ಸಿಜೆಐ ಬಹಿರಂಗಪಡಿಸಿರುವ ಪೊಲೀಸ್ ವರದಿ ಪ್ರಕಾರ ನಾಲ್ಕರಿಂದ ಐದು ಅರ್ಧ ಸುಟ್ಟ ಚೀಲಗಳು ಕಂಡುಬಂದಿದ್ದವು. ಹೀಗಾದರೂ ಕೊಠಡಿಗೆ ಸರಿಯಾಗಿ ಮುಚ್ಚಿ ಏಕೆ ಮುದ್ರೆ ಹಾಕಿಲ್ಲ? ಸಂಬಂಧಪಟ್ಟತೆ ಭದ್ರತಾ ಸಿಬ್ಬಂದಿ ಹೇಳಿಕೆಯಲ್ಲಿ ನೋಟು ವಶಪಡಿಸಿಕೊಂಡ ಬಗ್ಗೆ ನಿರ್ದಿಷ್ಟ ಉಲ್ಲೇಖವಿಲ್ಲ.
ಸುಟ್ಟ ನೋಟುಗಳು ಅವಶೇಷಗಳನ್ನು ರಾತ್ರಿಯೇ ತೆಗೆದುಹಾಕಲಾಯಿತೇ ಅಥವಾ ಬೆಳಿಗ್ಗೆಯೇ?
ವಿಡಿಯೋದಲ್ಲಿ ಸತ್ಯಾಂಶ ಇದೆಯೇ ನಿಜವಾಗಿಯೂ ಸ್ಥಳದಲ್ಲಿ ಹಣ ದೊರೆತಿತ್ತೇ?
ಘಟನೆಯ ನಂತರ ಹಣವನ್ನು ಕುಟುಂಬ ಸದಸ್ಯರು ಅಥವಾ ಸಿಬ್ಬಂದಿಗೆ ಏಕೆ ತೋರಿಸಲಿಲ್ಲ?
ಕಾರ್ಯದರ್ಶಿಯವರ ವರದಿಯು ಸ್ಥಳದಲ್ಲಿನ ಅವಶೇಷಗಳ ಸ್ವರೂಪದ ಬಗ್ಗೆ ಏಕೆ ಮೌನವಾಗಿದೆ?
ಕಾರ್ಯದರ್ಶಿಯವರ ವರದಿಯಲ್ಲಿ ಸ್ಥಳದಲ್ಲಿ ಸುಟ್ಟ ವಸ್ತುಗಳು/ ಅವಶೇಷಗಳು ಇದ್ದ ಬಗ್ಗೆ ಉಲ್ಲೇಖಿಸಲಾಗಿದೆ. ಕುತೂಹಲಕಾರಿ ಅಂಶವೆಂದರೆ, ಮಾರ್ಚ್ 15 ರ ಬೆಳಗ್ಗೆಯೇ ವಸ್ತುಗಳು/ಅವಶೇಷಗಳನ್ನು ತೆಗೆದುಹಾಕಲಾಗಿದೆ ಎಂಬ ಭದ್ರತಾ ಸಿಬ್ಬಂದಿಯ ಹೇಳಿಕೆಗೆ ಇದು ವ್ಯತಿರಿಕ್ತವಾಗಿದೆ.
ಔಟ್ ಹೌಸ್‌ನಲ್ಲಿ ಯಾರಾದರೂ ಹಣ ಸಂಗ್ರಹಿಸಿಡುತ್ತಾರೆಯೇ? ಔಟ್‌ಹೌಸ್ ಎಲ್ಲರಿಗೂ ಮುಕ್ತ ಮತ್ತು ಕಾವಲು ಕೋಣೆಯ ಬಳಿ ಇದೆ ಎಂಬುದನ್ನು ಪರಿಗಣಿಸಿದರೆ ನ್ಯಾ. ವರ್ಮಾ ಅವರ ಈ ವಾದ ಮಹತ್ವ ಪಡೆಯುತ್ತದೆ.
2018ರ ಅಕ್ರಮ ಹಣ ಬಳಕೆಗೆ ಸಂಬಂಧಿಸಿದ ಸಿಬಿಐ ಪ್ರಕರಣವೊಂದರಲ್ಲಿ ನ್ಯಾ. ವರ್ಮಾ ಅವರ ಹೆಸರು ತಳಕು ಹಾಕಿಕೊಂಡಿರುವ ಬಗ್ಗೆ ಅನಿರೀಕ್ಷಿತವಾಗಿ ಕೆಲ ತಿಂಗಳ ಹಿಂದೆ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಒಂದು ಪ್ರಸಾರವಾಗಿತ್ತು. ಹೀಗಿರುವಾಗ ಯಾರಾದರೂ ಏಕೆ ಈ ರೀತಿಯಲ್ಲಿ ಹಣ ಸಂಗ್ರಹಿಸಿಡುತ್ತಾರೆ? ಈ ಪ್ರಶ್ನೆಯನ್ನು ನ್ಯಾ. ವರ್ಮಾ ವಿಚಾರಣೆ ವೇಳೆ ತಮ್ಮ ಸಮರ್ಥನೆಗೆ ಕೇಳುವ ಸಾಧ್ಯತೆ ಇರಲಿದೆ.
ನ್ಯಾ. ವರ್ಮಾ ವಿಡಿಯೋದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು ಆ ವಿಡಿಯೋ ತೆಗೆದ ಫೋನ್‌ಗಳನ್ನು ಸಾಕ್ಷ್ಯ ಸಂರಕ್ಷಣೆಗಾಗಿ ವಶಪಡಿಸಿಕೊಳ್ಳಲಾಗಿದೆಯೇ? ಈ ಬಗ್ಗೆ ಸಿಜೆಐ ಮತ್ತು ದೆಹಲಿ ಹೈಕೋರ್ಟ್ ಸಿಜೆ ಅವರು ಯಾವುದೇ ಸೂಚನೆ ನೀಡಿಲ್ಲ ಎಂಬ ಮಾತುಗಳಿವೆ.
ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯವರಿಗೆ ಮಾಹಿತಿ ನೀಡಲು ಪೊಲೀಸರಿಗೆ 17 ಗಂಟೆಗಳಿಗಿಂತ ಹೆಚ್ಚು ಸಮಯ ಏಕೆ ಬೇಕಾಯಿತು? ಪೊಲೀಸ್ ಆಯುಕ್ತರು ಈಗಾಗಲೇ ನಗದು ಪತ್ತೆಯ ವಿಡಿಯೋ ಹೊಂದಿದ್ದರೂ, ಮುಖ್ಯ ನ್ಯಾಯಮೂರ್ತಿಯವರಿಗೆ ಆ ವಿಚಾರ ತಿಳಿಸುವಲ್ಲಿ ಇಷ್ಟೊಂದು ವಿಳಂಬ ಉಂಟಾಗಿದ್ದು ಏಕೆ?
ಈ ಅವಧಿಯಲ್ಲಿಯೇ ಔಟ್‌ಹೌಸ್‌ನಿಂದ ಅವಶೇಷಗಳನ್ನು ತೆಗೆದುಹಾಕಲಾಯಿತೇ?
ನ್ಯಾ. ವರ್ಮಾ ಅವರ ನಿವಾಸದ ಸಿಸಿಟಿವಿ ದೃಶ್ಯಾವಳಿ ಎಲ್ಲಿ?
ಘಟನೆಯ ಹಿಂದೆ ಪಿತೂರಿ ಇದೆ ಎಂದು ನ್ಯಾ. ವರ್ಮಾ ಆರೋಪಿಸಿರುವುದರಿಂದ, ಇದು ಶಾರ್ಟ್ ಸರ್ಕ್ಯೂಟ್‌ನಿಂದ ಉಂಟಾದ ಅಗ್ನಿ ಅವಘಡದ ಸರಳ ಪ್ರಕರಣವೇ?