ಕರ್ನಾಟಕ ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿಗಳಾಗಿರುವ ಅನಂತ್ ರಾಮನಾಥ್ ಹೆಗ್ಡೆ ಮತ್ತು ಕೆ ಎಸ್ ಹೇಮಲೇಖಾ ಅವರ ಸೇವೆಯನ್ನು ಕಾಯಂಗೊಳಿಸಿ ಕೇಂದ್ರ ಸರ್ಕಾರ ಸೆಪ್ಟೆಂಬರ್ 12ರಂದು ಅಧಿಸೂಚನೆ ಹೊರಡಿಸಿದೆ.
ಇದೇ ವೇಳೆ ಮತ್ತೊಬ್ಬರು ಹೆಚ್ಚುವರಿ ನ್ಯಾಯಮೂರ್ತಿಯಾಗಿರುವ ಎಸ್ ರಾಚಯ್ಯ ಅವರನ್ನು ಹೊಸದಾಗಿ ಅಂದರೆ ನವೆಂಬರ್ 8ರಿಂದ ಮತ್ತೊಂದು ವರ್ಷ ಹೆಚ್ಚುವರಿ ನ್ಯಾಯಮೂರ್ತಿಯನ್ನಾಗಿ ಕರ್ತವ್ಯ ನಿರ್ವಹಿಸಲು ಆದೇಶಿಸಲಾಗಿದೆ. ಈ ಕುರಿತಂತೆ ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯದ ವಿಶೇಷ ಕಾರ್ಯದರ್ಶಿಗಳು ಅಧಿಸೂಚನೆ ಹೊರಡಿಸಿದ್ದಾರೆ.
ನ್ಯಾಯಮೂರ್ತಿಗಳಾದ ಅನಂತ್ ರಾಮನಾಥ್ ಹೆಗ್ಡೆ ಮತ್ತು ಕೆ ಎಸ್ ಹೇಮಲೇಖಾ ಅವರ ಸೇವೆಯನ್ನು ಕಾಯಂಗೊಳಿಸಲು ಮತ್ತು ನ್ಯಾಯಮೂರ್ತಿ ಎಸ್ ರಾಚಯ್ಯ ಅವರನ್ನು ಮತ್ತೊಂದು ವರ್ಷ ಹೆಚ್ಚುವರಿ ನ್ಯಾಯಮೂರ್ತಿಯಾಗಿ ಹೊಸದಾಗಿ ನೇಮಕ ಮಾಡಲು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ 2023ರ ಆಗಸ್ಟ್ 31ರಂದು ಶಿಫಾರಸ್ಸು ಮಾಡಿತ್ತು. ಅದರಂತೆ ಕೇಂದ್ರ ಸರ್ಕಾರವು ಅಧಿಸೂಚನೆ ಹೊರಡಿಸಿದೆ.