ಆರೋಪಿಯು ಕೃತ್ಯದ ವೇಳೆ ತಾನು ಅಪ್ರಾಪ್ತನಾಗಿದ್ದೆ ಎಂದು ವಿಚಾರಣೆಯ ಯಾವುದೇ ಹಂತದಲ್ಲಿ ಮನವಿ ಸಲ್ಲಿಸಬಹುದು: ಹೈಕೋರ್ಟ್‌

ಬಾಲಾ ನ್ಯಾಯ ಕಾಯಿದೆ ಅಡಿ ತನ್ನನ್ನು ವಿಚಾರಣೆಗೊಳಪಡಿಸಬೇಕು ಎಂಬ ಅರ್ಜಿದಾರನ ಕೋರಿಕೆಯನ್ನು ಮೂರು ತಿಂಗಳಲ್ಲಿ ಹೊಸದಾಗಿ ಪರಿಗಣಿಸಿ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಬಾಲ ನ್ಯಾಯ ಮಂಡಳಿಗೆ ನಿರ್ದೇಶಿಸಿದ ಪೀಠ.
Child in conflict with law, Juvenile Justice Act
Child in conflict with law, Juvenile Justice Act

ಅಪರಾಧ ಪ್ರಕರಣದ ಆರೋಪಿಯು ಯಾವಾಗಲಾದರೂ ಕೃತ್ಯ ಎಸಗಿದ ಸಮಯದಲ್ಲಿ ತಾನು ಬಾಲಾಪರಾಧಿ ಎಂದು ಬಾಲ ನ್ಯಾಯ ಕಾಯಿದೆ ಅಡಿ ವಿಚಾರಣೆಗೆ ಕೋರಬಹುದು ಎಂದು ಕರ್ನಾಟಕ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಅಪ್ರಾಪ್ತೆ ಮೇಲಿನ ಲೈಂಗಿಕ ದೌರ್ಜನ್ಯ ಘಟನೆ ನಡೆದಾಗ ನಾನು ಅಪ್ರಾಪ್ತನಾಗಿದ್ದರೂ ಪ್ರಕರಣವನ್ನು ಪೋಕ್ಸೊ ವಿಶೇಷ ನ್ಯಾಯಾಲಯದ ವಿಚಾರಣೆಗೆ ವರ್ಗಾಯಿಸಿದ ಬಳ್ಳಾರಿ ಜಿಲ್ಲಾ ಪ್ರಧಾನ ಮತ್ತು ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್‌ (ಸಿಜೆಎಂ) ನ್ಯಾಯಾಲಯದ ಕ್ರಮ ಸರಿಯಿಲ್ಲ ಎಂದು ಆಕ್ಷೇಪಿಸಿ ಆರೋಪಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಪೀಠ ಪುರಸ್ಕರಿಸಿದೆ.

ಬಾಲಾ ನ್ಯಾಯ ಕಾಯಿದೆ ಅಡಿ ತನ್ನನ್ನು ವಿಚಾರಣೆಗೊಳಪಡಿಸಬೇಕು ಎಂಬ ಅರ್ಜಿದಾರನ ಕೋರಿಕೆಯನ್ನು ಮೂರು ತಿಂಗಳಲ್ಲಿ ಹೊಸದಾಗಿ ಪರಿಗಣಿಸಿ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಬಾಲ ನ್ಯಾಯ ಮಂಡಳಿಗೆ ಪೀಠ ನಿರ್ದೇಶಿಸಿದೆ.

ಬಳ್ಳಾರಿ ಕಂಪ್ಲಿ ನಿವಾಸಿಯಾದ ಅರ್ಜಿದಾರ 2016ರಲ್ಲಿ ಪಕ್ಕದ ಮನೆಯ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಎದುರಿಸುತ್ತಿದ್ದಾನೆ. ಸಂತ್ರಸ್ತೆಯ ಅಜ್ಜಿ ನೀಡಿದ್ದ ದೂರು ಆಧರಿಸಿ ಅತ್ಯಾಚಾರ ಪ್ರಕರಣದಡಿ ಅರ್ಜಿದಾರನನ್ನು ಬಂಧಿಸಲಾಗಿತ್ತು. ಅರ್ಜಿದಾರನ ವಯಸ್ಸಿನ ಬಗ್ಗೆ ನಿಖರ ಪುರಾವೆ ಇಲ್ಲದಕ್ಕೆ ಆತನನ್ನು ಒಸಿಫಿಕೇಶನ್ (ವಯಸ್ಸು ನಿರ್ಧರಣ ಪರೀಕ್ಷೆಗೆ) ಒಳಪಡಿಸಲಾಯಿತು. ಅದರಲ್ಲಿ ಆತನಿಗೆ 16 ರಿಂದ 18 ವರ್ಷ ವಯಸ್ಸಿರಬಹುದು ಎಂದು ತಿಳಿದು ಬಂದ ಹಿನ್ನೆಲೆಯಲ್ಲಿ ಪ್ರಕರಣವನ್ನು ಪೋಕ್ಸೊ ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಿ, ಬಳ್ಳಾರಿ ಜಿಲ್ಲಾ ಪ್ರಧಾನ ಮತ್ತು ಸಿಜೆಎಂ ನ್ಯಾಯಾಲಯವು 2017ರ ಜನವರಿ 19ರಂದು ಆದೇಶಿಸಿತ್ತು.

ಇದನ್ನು ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ್ದ ಅರ್ಜಿದಾರ, 2016ರಲ್ಲಿ ಘಟನೆ ನಡೆದಾಗ ತನಗೆ 15 ವರ್ಷ ವಯಸ್ಸಾಗಿತ್ತು. ಇದನ್ನು ಪರಿಗಣಿಸಿ ಬಾಲಾ ನ್ಯಾಯ ಕಾಯಿದೆ ಅಡಿ ಬಾಲ ನ್ಯಾಯಮಂಡಳಿಯೇ ತನ್ನ ವಿರುದ್ಧದ ಪ್ರಕರಣವನ್ನು ವಿಚಾರಣೆಗೊಳಪಡಿಸಬೇಕು ಎಂದು ಕೋರಿದ್ದರು.

ಇದಕ್ಕೆ ಆಕ್ಷೇಪಿಸಿದ್ದ ಸರ್ಕಾರದ ಪರ ವಕೀಲರು, ಪ್ರಕರಣ ಸದ್ಯ ವಾದ-ಪ್ರತಿವಾದ ಹಂತದಲ್ಲಿದ್ದು, ಈ ಸಂದರ್ಭದಲ್ಲಿ ಆರೋಪಿಯ ಮನವಿ ಪುರಸ್ಕರಿಸಲಾಗದು ಎಂದು ವಾದಿಸಿದ್ದರು.

ವಾದ -ಪ್ರತಿವಾದ ಆಲಿಸಿದ ಹೈಕೋರ್ಟ್‌, ಅರ್ಜಿದಾರ ಅವಿದ್ಯಾವಂತ ಹುಡುಗ. ಆತನ ಜೀವನದ ಯಾವುದೇ ಹಂತದಲ್ಲೂ ಶಾಲೆಗೆ ಹಾಜರಾಗಿಲ್ಲ. ಆದ್ದರಿಂದ ಆತನ ಶಾಲಾ ದಾಖಲೆಗಳು ಲಭ್ಯವಿಲ್ಲ. ಮತ್ತೊಂದೆಡೆ ವಯಸ್ಸು ದೃಢಪಡಿಸುವ ವಿಚಾರದಲ್ಲಿ ಒಸಿಫಿಕೇಶನ್ ಪರೀಕ್ಷೆ ನಿರ್ಣಾಯಕವಾಗಿಲ್ಲ. ಅದರಿಂದ ನಿಖರವಾದ ವಯಸ್ಸು ನಿರ್ಣಯಿಸಲಾಗದು. ಆ ಪರೀಕ್ಷೆಯು ನಿರ್ದಿಷ್ಟ ವಯಸ್ಸಿಗಿಂತ ಒಂದು ಅಥವಾ ಎರಡು ವರ್ಷ ಹೆಚ್ಚು ಅಥವಾ ಕಡಿಮೆ ತೋರಿಸಬಹುದು ಎಂದು ಅಭಿಪ್ರಾಯಪಟ್ಟಿದೆ.

ಅಲ್ಲದೆ, ಪ್ರಕರಣವು ವಾದ-ಪ್ರತಿವಾದ ಹಂತದಲ್ಲಿದೆ ಎಂಬ ಕಾರಣಕ್ಕೆ ಅರ್ಜಿದಾರನ ಮನವಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಲಾಗದು. ಆರೋಪಿ ಯಾವುದೇ ಸಮಯದಲ್ಲಾದರೂ ಕೃತ್ಯ ಎಸಗಿದ ಸಮಯದಲ್ಲಿ ತಾನು ಅಪ್ರಾಪ್ತನಾಗಿದ್ದೆ ಎಂಬುದಾಗಿ ತಿಳಿಸಿ ಬಾಲ ನ್ಯಾಯ ಕಾಯಿದೆ ಅಡಿ ವಿಚಾರಣೆಗೆ ಕೋರಬಹುದಾಗಿದೆ ಎಂದು ಅಭಿಪ್ರಾಯಪಟ್ಟಿದೆ.

ಅಲ್ಲದೇ, ಪೋಕ್ಸೋ ವಿಶೇಷ ಕೋರ್ಟ್‌ ವಿಚಾರಣೆ ಅಮಾನತುಪಡಿಸಿ,  ಅರ್ಜಿದಾರನ ಮನವಿಯನ್ನು ಬಾಲ ನ್ಯಾಯಮಂಡಳಿಯು ಮೂರು ತಿಂಗಳಲ್ಲಿ ಪರಿಗಣಿಸಿ ನಿರ್ಧರಿಸಬೇಕು. ಆ ನಿರ್ಧಾರವನ್ನು ಅಗತ್ಯವಿದ್ದರೆ ಸಂಬಂಧಪಟ್ಟ ನ್ಯಾಯಾಲಯ ಮುಂದೆ ಇಡಬಹುದು. ಮಂಡಳಿ ಅಗತ್ಯ ಆದೇಶ ಹೊರಡಿಸಿದ ನಂತರ ಪ್ರಕರಣದಲ್ಲಿ ಎತ್ತಲಾಗಿರುವ ಇತರೆ ಅಂಶಗಳನ್ನು ಪರಿಗಣಿಸಬಹುದು ಎಂದು ಆದೇಶಿಸಿ ಅರ್ಜಿಯನ್ನು ವಿಲೇವಾರಿ ಮಾಡಿದೆ.

Related Stories

No stories found.
Kannada Bar & Bench
kannada.barandbench.com