ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಬರೆದಿದ್ದ 2021ನೇ ಸಾಲಿನ ಪುನರಾವರ್ತಿತ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ರ‍್ಯಾಂಕ್ ಪಟ್ಟಿ ತಯಾರಿಕೆಗೆ ತಜ್ಞರ ಸಮಿತಿಯು ಸೂಚಿಸಿದ ಅಂಕಗಳ ಲೆಕ್ಕಾಚಾರದ ಕುರಿತು ಪಕ್ಷಕಾರರಲ್ಲಿ ಒಮ್ಮತ ವ್ಯಕ್ತವಾಗಿರುವುದನ್ನು ಪರಿಗಣಿಸಿದ ಕರ್ನಾಟಕ ಹೈಕೋರ್ಟ್ ಶುಕ್ರವಾರ ಮೇಲ್ಮನವಿಯನ್ನು ಇತ್ಯರ್ಥಪಡಿಸಿದೆ.
ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ರ‍್ಯಾಂಕ್ ಪಟ್ಟಿ ತಯಾರಿಸಲು 2021ರ ಪುನರಾವರ್ತಿತ ವಿದ್ಯಾರ್ಥಿಗಳು ಪಿಯುಸಿಯಲ್ಲಿ ಪಡೆದಿರುವ ಶೇ.50 ಅಂಕ ಹಾಗೂ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ (ಸಿಇಟಿ) ಪಡೆದಿರುವ ಶೇ.50 ಅಂಕಗಳನ್ನು ಪರಿಗಣಿಸಿ ಹೊಸದಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ರ‍್ಯಾಂಕ್ ಪಟ್ಟಿ ಪ್ರಕಟಿಸಬೇಕು ಎನ್ನುವ ಏಕಸದಸ್ಯ ಪೀಠದ ಆದೇಶವನ್ನು ಬದಿಗೆ ಸರಿಸಬೇಕು ಎಂದು ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಅರಾಧೆ ಮತ್ತು ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರ ನೇತೃತ್ವದ ಪೀಠವು ನಡೆಸಿತು.
2021ನೇ ಸಾಲಿನ ಸಿಇಟಿ ಪುನರಾವರ್ತಿತ ವಿದ್ಯಾರ್ಥಿಗಳ ಭೌತ ವಿಜ್ಞಾನ, ರಸಾಯನ ವಿಜ್ಞಾನ ಮತ್ತು ಗಣಿತ ವಿಷಯಗಳಲ್ಲಿ ಸರಾಸರಿ ಆರು ಅಂಕಗಳನ್ನು ಕಡಿತಗೊಳಿಸಿ ಸಾಮಾನ್ಯೀಕರಿಸುವ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ನೇಮಿಸಿದ್ದ ತಜ್ಞರ ಸಮಿತಿಯು ಸೂಚಿಸಿತ್ತು. ಇದಕ್ಕಾಗಿ ಕರ್ನಾಟಕ ರಾಜ್ಯ ಶೈಕ್ಷಣಿಕ ಮಂಡಳಿಯ ಅಧ್ಯಕ್ಷ ಬಿ ತಿಮ್ಮೇಗೌಡ ಅವರ ನೇತೃತ್ವದ ಸಮಿತಿಯು ರೂಟ್ ಮೀನ್ ಸ್ಕ್ವೇರ್ (ಆರ್‌ಎಂಎಸ್) ಸೂತ್ರವನ್ನು ಅಳವಡಿಸಿಕೊಂಡಿತ್ತು.
“ಆರ್‌ಎಂಎಸ್ ಸೂತ್ರದ ಆಧಾರದಲ್ಲಿ ರ‍್ಯಾಂಕ್ ನೀಡಲು ರಾಜ್ಯ ಸರ್ಕಾರಕ್ಕೆ ಅನುಮತಿಸಲಾಗಿದೆ. ಯುಜಿಸಿಇಟಿ 2022-23ನೇ ಸಾಲಿಗೆ 2021ನೇ ಸಾಲಿನ ದ್ವಿತೀಯ ಪಿಯು ಅಂಕಗಳನ್ನು ಸಿಇಟಿ ಉದ್ದೇಶಕ್ಕಾಗಿ ಮಾತ್ರ ಲೆಕ್ಕಹಾಕಲಾಗುತ್ತದೆ. ಆನಂತ ಅದಕ್ಕೆ ಯಾವುದೇ ಮಾನ್ಯತೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ” ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.
ಆರ್‌ಎಂಎಸ್ ಸೂತ್ರ ಅನ್ವಯಿಸಿದ ಬಳಿಕ 2021ನೇ ಸಾಲಿನ ವಿದ್ಯಾರ್ಥಿಗಳ ಅರ್ಹತಾ ಅಂಕಗಳನ್ನು ಸರಾಸರಿ ಭೌತ ವಿಜ್ಞಾನದಲ್ಲಿ ಆರು ಅಂಕ, ರಸಾಯನ ವಿಜ್ಞಾನದಲ್ಲಿ ಐದು ಅಂಕ ಮತ್ತು ಗಣಿತದಲ್ಲಿ ಏಳು ಅಂಕ ಕಡಿತಗೊಳಿಸಲು ಸಮಿತಿಯು ಸಲಹೆ ಮಾಡಿತ್ತು. ಇದರಿಂದಾಗಿ 100 ಅರ್ಹತಾ ಅಂಕಗಳಿಗೆ ಒಟ್ಟು ಆರು ಅಂಕಗಳ ಕಡಿತಕ್ಕೆ ಕಾರಣವಾಗಿದೆ. ಸಾಮಾನ್ಯೀಕರಣದ ನಂತರವೂ ಕೋವಿಡ್-19 ಬ್ಯಾಚ್‌ನ ಶ್ರೇಯಾಂಕವು 2022ನೇ ಸಾಲಿನ ಬ್ಯಾಚ್‌ನ ಮೇಲೆ ಪರಿಣಾಮ ಬೀರಬಹುದು ಎಂದು ಸಮಿತಿಯು ಐಟಿ-ಸಂಬಂಧಿತ ವಿಭಾಗಗಳಲ್ಲಿ ಸುಮಾರು ಶೇ. 10ರಷ್ಟು ಸೀಟುಗಳನ್ನು ಹೆಚ್ಚಿಸುವಂತೆ ಸಲಹೆ ನೀಡಿದೆ.
ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲಿ ಪುನರಾವರ್ತಿತ ವಿದ್ಯಾರ್ಥಿಗಳಿಗೆ ದ್ವಿತೀಯ ಪಿಯುಸಿಯಲ್ಲಿ ಧಾರಾಳವಾಗಿ ಅಂಕಗಳನ್ನು ನೀಡಲಾಗಿತ್ತು. ಆದರೆ, 2022ನೇ ಸಾಲಿನ ದ್ವಿತೀಯ ಪಿಯು ವಿದ್ಯಾರ್ಥಿಗಳು ಪರೀಕ್ಷೆ ಬರೆದು ಅಂಕಗಳಿಸಿದ್ದಾರೆ ಎಂಬುದು ರಾಜ್ಯ ಸರ್ಕಾರದ ವಾದವಾಗಿತ್ತು.