
ಕಲಬುರಗಿ ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್ ಅವರನ್ನು ಪಾಕಿಸ್ತಾನಿ ಎಂದು ಜರಿದಿದ್ದ ಆರೋಪಕ್ಕೆ ಗುರಿಯಾಗಿರುವ ವಿಧಾನ ಪರಿಷತ್‌ನ ಬಿಜೆಪಿ ಸದಸ್ಯ ಎನ್ ರವಿಕುಮಾರ್ ನಡೆಗೆ ತೀವ್ರ ಅತೃಪ್ತಿ ದಾಖಲಿಸಿರುವ ಕರ್ನಾಟಕ ಹೈಕೋರ್ಟ್, ತನಿಖೆಗೆ ಸಹಕರಿಸುವಂತೆ ಆದೇಶಿಸಿದೆ. ಅಲ್ಲದೇ, ತರನ್ನುಮ್ ಅವರಿಗೆ ಕ್ಷಮೆ ಕೋರಿರುವ ಸಂಬಂಧ ಅಫಿಡವಿಟ್ ಸಲ್ಲಿಸುವಂತೆ ಗುರುವಾರ ನಿರ್ದೇಶಿಸಿದೆ.
ಕಲಬುರ್ಗಿಯ ಸ್ಟೇಷನ್ ಬಜಾರ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ರದ್ದತಿ ಕೋರಿ ರವಿಕುಮಾರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ರಜಾಕಾಲೀನ ಏಕಸದಸ್ಯ ಪೀಠ ನಡೆಸಿತು.
“ಸರ್ಕಾರದ ವಕೀಲರು ರವಿಕುಮಾರ್ ಭಾಷಣ ಒಳಗೊಂಡಿರುವ ವಿಡಿಯೊವನ್ನು ಮುಂದಿನ ವಿಚಾರಣೆ ವೇಳೆಗೆ ಪೆನ್‌ಡ್ರೈವ್‌ನಲ್ಲಿ ಸಲ್ಲಿಸಬೇಕು. ಜಿಲ್ಲಾಧಿಕಾರಿ ತರನ್ನುಮ್ ಅವರಿಗೆ ರವಿಕುಮಾರ್ ಅವರು ಕ್ಷಮೆ ಕೋರಿರುವುದನ್ನು ಅಫಿಡವಿಟ್‌ನಲ್ಲಿ ಸಲ್ಲಿಸಬೇಕು. ರವಿಕುಮಾರ್ ತನಿಖೆಗೆ ಸಹಕರಿಸಿದರೆ ಅವರನ್ನು ಬಂಧಿಸುವುದಿಲ್ಲ ಎಂದು ಪ್ರಾಸಿಕ್ಯೂಷನ್ ತಿಳಿಸಿದೆ. ಹೀಗಾಗಿ, ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ” ಎಂದು ನ್ಯಾಯಾಲಯ ಆದೇಶಿಸಿತು.
ಇದಕ್ಕೂ ಮುನ್ನ, ಅರ್ಜಿದಾರರ ಪರ ವಕೀಲ ವಿನೋದ್ ಕುಮಾರ್ ಅವರು”ಇದು ರಾಜಕೀಯಪ್ರೇರಿತ ಪ್ರಕರಣ. ಪರಿಶಿಷ್ಟ ಜಾತಿ ಸಮುದಾಯವನ್ನು ನಿಂದಿಸಿರುವ ಒಂದೇ ಒಂದು ಪದವನ್ನು ರವಿಕುಮಾರ್ ಬಳಕೆ ಮಾಡಿಲ್ಲ. ಡಿವೈಎಸ್‌ಪಿ ಅವರು ರವಿಕುಮಾರ್ ಅವರನ್ನು ಬಂಧಿಸಲು ಅವರ ಮನೆ ಮತ್ತು ಕಚೇರಿಗೆ ತೆರಳಿದ್ದಾರೆ. ಬಂಧನದಿಂದ ವಿನಾಯಿತಿ ಕಲ್ಪಿಸಬೇಕು” ಎಂದು ಕೋರಿದರು.
ಆಗ ಪೀಠವು “ಮಧ್ಯಪ್ರದೇಶದಲ್ಲಿ (ಕರ್ನಲ್ ಸೋಫಿಯಾ ಕುರೇಷಿ ವಿರುದ್ಧ ಮಧ್ಯಪ್ರದೇಶದ ಸಚಿವ ನೀಡಿದ ಆಕ್ಷೇಪಾರ್ಹ ಹೇಳಿಕೆ) ಏನಾಗಿದೆ. ಮತ್ತದೇ ಆಗಬೇಕೆ? ಸುಪ್ರೀಂ ಕೋರ್ಟ್‌ನಲ್ಲಿ ಏನಾಗಿದೆ ಗೊತ್ತೇ? ಈ ಥರದ ಹೇಳಿಕೆಗಳನ್ನು ನೀವು ನೀಡುವಂತಿಲ್ಲ. ನೀವು ಕ್ಷಮೆ ಕೇಳಿದ್ದನ್ನು ಆ ವ್ಯಕ್ತಿ ಒಪ್ಪಬೇಕು. ಎಸ್‌ಸಿ/ಎಸ್‌ಟಿ ದೌರ್ಜನ್ಯ ನಿಷೇಧ ಕಾಯಿದೆ ಅಡಿ ಪ್ರಕರಣದಲ್ಲಿ ನೋಟಿಸ್ ನೀಡಬೇಕು. ಆಕ್ಷೇಪಣೆ ಸಲ್ಲಿಕೆಯಾಗಬೇಕು. ಆನಂತರ ವಾದ ಆಲಿಸಲಾಗುವುದು. ನೀವು ರಿಸ್ಕ್ ತೆಗೆದುಕೊಳ್ಳುತ್ತಿದ್ದೀರಿ. ಅದಾಗ್ಯೂ, ವಾದಿಸಬೇಕು ಎಂದಿದ್ದರೆ ವಾದ ಮಂಡಿಸಬಹುದು. ಜಿಲ್ಲಾಧಿಕಾರಿಯ ವಿರುದ್ಧ ನೀವು ಹೇಳಿಕೆ ನೀಡಿದ್ದೀರಿ? ಮಧ್ಯಪ್ರದೇಶದಲ್ಲಿ ಏನಾಗಿದೆ, ಅದಕ್ಕೆ ಸುಪ್ರೀಂ ಕೋರ್ಟ್ ಏನು ಹೇಳಿದೆ ಎಂಬುದನ್ನು ಉಲ್ಲೇಖಿಸುತ್ತೇನೆ ಅಷ್ಟೆ. ಜಿಲ್ಲಾಧಿಕಾರಿಗೆ ಕ್ಷಮೆ ಕೋರಿ, ಅದನ್ನು ಅವರು ಒಪ್ಪಬೇಕು. ಆನಂತರ ಅದನ್ನು ನೀವು ಅಫಿಡವಿಟ್ ಮೂಲಕ ಸಲ್ಲಿಸಬೇಕು. ಆನಂತರ ಅದನ್ನು ಪರಿಗಣಿಸತ್ತೇವೆಯೇ ವಿನಾ ಅಲ್ಲಿಯವರೆಗೆ ಇದನ್ನು ಪರಿಗಣಿಸುವುದಿಲ್ಲ. ಮಧ್ಯಪ್ರದೇಶ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಕ್ಷಮೆ ಕೋರಿದ್ದನ್ನೂ ತಿರಸ್ಕರಿಸಿದೆ. ತನಿಖೆಗೆ ಎಸ್‌ಐಟಿ ರಚಿಸಲಾಗಿದೆ ಎಂಬುದು ನಿಮಗೆ ಗೊತ್ತಿರಬೇಕು” ಎಂದಿತು.
ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎನ್ ಜಗದೀಶ್ ಅವರು “ರವಿಕುಮಾರ್ ತನಿಖೆಗೆ ಸಹಕರಿಸಲಿ, ನಾವು ಅವರನ್ನು ಬಂಧಿಸುವುದಿಲ್ಲ. ತರನ್ನುಮ್ ಅವರಿಗೆ ಕ್ಷಮೆ ಕೋರಿರುವುದನ್ನು ಅಫಿಡವಿಟ್ ಮೂಲಕ ಸಲ್ಲಿಸಲು ಆದೇಶಿಸಬೇಕು” ಎಂದು ಕೋರಿದರು.
ರವಿಕುಮಾರ್ ವಿರುದ್ಧ ಮೇ 26ರಂದು ಎಫ್‌ಐಆರ್ ದಾಖಲಾಗಿದ್ದು, ಭಾರತೀಯ ನ್ಯಾಯ ಸಂಹಿತೆ–2023ರ ಸೆಕ್ಷನ್‌ಗಳಾದ 197, 224, 299, 302, 351,353 ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯಿದೆ ಸೆಕ್ಷನ್ 31(1)(ಆರ್) ಅಡಿ ಪ್ರಕರಣ ದಾಖಲಿಸಲಾಗಿದೆ.