ಮೂವತ್ತು ವರ್ಷ ಸೆರೆವಾಸ, ಸುದೀರ್ಘ ಏಕಾಂತವಾಸ: ಮರಣ ದಂಡನೆ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಬದಲಿಸಿದ ಹೈಕೋರ್ಟ್‌

“ಅರ್ಜಿದಾರ ಈಗಾಗಲೇ 30ಕ್ಕೂ ಹೆಚ್ಚು ವರ್ಷ ಸೆರೆವಾಸ ಅನುಭವಿಸಿದ್ದಾರೆ. ಕ್ಷಮಾದಾನ ಕೋರಿ ಅರ್ಜಿ ಸಲ್ಲಿಸಲು ಸ್ವಾತಂತ್ರ್ಯ ಕಲ್ಪಿಸಿ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸಿದರೆ ನ್ಯಾಯ ಸಂದಾಯವಾಗುತ್ತದೆ” ಎಂದಿರುವ ಪೀಠ.
Justices G Narendar and C M Poonacha
Justices G Narendar and C M Poonacha

ತನ್ನ ಇಬ್ಬರು ಪತ್ನಿಯರು ಹಾಗೂ ಓರ್ವ ಪುತ್ರಿಯನ್ನು ಕೊಲೆ ಮಾಡಿ ಕಳೆದ 30 ವರ್ಷಗಳಿಂದ ಜೈಲಿನಲ್ಲಿರುವ ಕಲಬುರ್ಗಿ ಜಿಲ್ಲೆಯ ಅಫ್ಜಲ್‌ಪುರದ ಅಪರಾಧಿ ಸಾಯಿಬಣ್ಣನಿಗೆ ಕರ್ನಾಟಕ ಹೈಕೋರ್ಟ್ ಈಚೆಗೆ ಜೀವದಾನ ನೀಡಿದೆ. ಅಪರಾಧಿಗೆ 70 ವರ್ಷ ವಯಸ್ಸಾಗಿದೆ ಎನ್ನುವ ಕಾರಣಕ್ಕೆ ಹೈಕೋರ್ಟ್, ಅಧೀನ ನ್ಯಾಯಾಲಯ ವಿಧಿಸಿದ್ದ ಮರಣ ದಂಡನೆ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸಿದೆ.

ಮರಣ ದಂಡನೆ ಶಿಕ್ಷೆ ಪ್ರಶ್ನಿಸಿ ಸಾಯಿಬಣ್ಣ ಅಲಿಯಾಸ್ ನಿಂಗಪ್ಪ ನಾಟೀಕರ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಜಿ ನರೇಂದರ್ ಮತ್ತು ಸಿ ಎಂ ಪೂಣಚ್ಚ ಅವರ ನೇತೃತ್ವದ ವಿಭಾಗೀಯ ಪೀಠ ಈ ತೀರ್ಪು ನೀಡಿದೆ.

“ಇಡೀ ಪ್ರಕರಣದ ವಿವರಗಳು ಮತ್ತು ಸಂದರ್ಭಗಳನ್ನು ಪರಿಗಣಿಸಿದರೆ ಅರ್ಜಿದಾರ ಈಗಾಗಲೇ 30 ವರ್ಷಕ್ಕೂ ಹೆಚ್ಚು ಸೆರೆವಾಸ ಅನುಭವಿಸಿದ್ದಾರೆ. ನಮ್ಮ ಪ್ರಕಾರ ಕ್ಷಮಾದಾನ ಕೋರಿ ಅರ್ಜಿ ಸಲ್ಲಿಸಲು ಸ್ವಾತಂತ್ರ್ಯ ನೀಡುವುದರ ಜೊತೆಗೆ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸಿದರೆ ನ್ಯಾಯ ಸಂದಾಯವಾದಂತಾಗುತ್ತದೆ” ಎಂದು ಪೀಠ ಹೇಳಿದೆ.

“ಅರ್ಜಿದಾರ ಸಲ್ಲಿಸಿದ್ದ ಕ್ಷಮಾದಾನ ಅರ್ಜಿ ಮೊದಲಿಗೆ ಸರ್ಕಾರದಲ್ಲಿ 2005ರ ಮೇ 31ರಿಂದ 2007ರ ಜನವರಿ 9ರವರೆಗೆ ಅಂದರೆ ಒಂದು ವರ್ಷ 9 ತಿಂಗಳು ಮತ್ತ 9 ದಿನ ವಿಳಂಬವಾಗಿದೆ. ಎರಡನೆಯದಾಗಿ ರಾಜ್ಯಪಾಲರ ಕಚೇರಿಯಲ್ಲಿ 2007ರ ಜನವರಿ 12ರಿಂದ 2007ರ ಫೆಬ್ರವರಿ 2ರವರೆಗೆ ವಿಳಂಬವಾಗಿದೆ. ಮೂರನೆಯದಾಗಿ ಕೇಂದ್ರ ಸರ್ಕಾರಕ್ಕೆ ಸಂವಹನ ಕಳುಹಿಸಿಕೊಡುವಲ್ಲಿ 24 ದಿನ ವಿಳಂಬವಾಗಿದೆ. ನಾಲ್ಕನೆಯದಾಗಿ ರಾಷ್ಟ್ರಪತಿ ಬಳಿ ಅರ್ಜಿ 2007ರ ಫೆಬ್ರವರಿ 28ರಿಂದ 2013ರ ಜನವರಿ 3ರವರೆಗೆ ಇತ್ಯರ್ಥವಾಗದೆ ಉಳಿದಿತ್ತು. ಒಟ್ಟಾರೆ ನಾಲ್ಕು ಹಂತಗಳಲ್ಲಿ ಕ್ಷಮಾದಾನ ಅರ್ಜಿ ಪರಿಗಣಿಸುವುದು 7 ವರ್ಷ 8 ತಿಂಗಳು ವಿಳಂಬವಾಗಿದೆ. ಆದರೆ, ಅದಕ್ಕೆ ಯಾವುದೇ ಕಾರಣ ನೀಡಿಲ್ಲ” ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಅಪರಾಧಿಯನ್ನು 2003ರ ಜನವರಿ 10ರಿಂದ 2019ರ ಮೇ 20ರವರೆಗೆ ಬೆಳಗಾವಿಯ ಒಂದೇ ಕೊಣೆಯಲ್ಲಿ ಏಕಾಂಕಿಯಾಗಿ ಇರಿಸಲಾಗಿದೆ. ಅದರಂತೆ ಆತ 16 ವರ್ಷ ಏಕಾಂಗಿ ಸೆರೆವಾಸ ಅನುಭವಿಸಿದಂತಾಗಿದೆ ಎಂದು ಪೀಠ ಹೇಳಿದೆ. ಕಾರಾಗೃಹ ಅಧಿಕಾರಿಗಳು ಸಲ್ಲಿಸಿರುವ ಆರೋಗ್ಯ ವರದಿ ಪ್ರಕಾರ ಅರ್ಜಿದಾರನ ಎದೆಯ ಎರಡೂ ಭಾಗಗಳಲ್ಲಿ ನೋವು ಕಾಣಿಸಿಕೊಂಡಿದೆ. ಭಯದಿಂದ ತತ್ತರಿಸಿದ್ದಾನೆ ಮತ್ತು ಭೇದಿಯಿಂದ ಬಳಲಿದ್ದು, ತೀರ ಆಯಾಸವಾಗಿದೆ ಎಂದು ತಿಳಿಸಲಾಗಿದೆ. ಏಕಾಂಗಿ ಸೆರೆವಾಸದಿಂದಾಗಿ ಆತನಿಗೆ ಹೀಗೆಲ್ಲಾ ಆಗುತ್ತಿರಬಹುದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಅರ್ಜಿದಾರರ ಪರ ವಕೀಲರು, ಅರ್ಜಿದಾರನ ಕ್ಷಮಾದಾನ ಅರ್ಜಿ ಇತ್ಯರ್ಥವಾಗುವುದು 7 ವರ್ಷ 8 ತಿಂಗಳು, 9 ದಿನ ವಿಳಂಬವಾಗಿದೆ ಮತ್ತು ಕಾನೂನಿನಲ್ಲಿ ಸಮ್ಮತಿ ಇಲ್ಲದಿದ್ದರೂ ಏಕಾಂಗಿ ಸೆರೆವಾಸ ವಿಧಿಸಲಾಗಿದೆ. ಹೀಗಾಗಿ, ಅವರಿಗೆ ವಿಧಿಸಿರುವ ಗಲ್ಲು ಶಿಕ್ಷೆ ರದ್ದುಗೊಳಿಸಬೇಕು ಎಂದು ಕೋರಿದ್ದರು.

ಅಮಿಕಸ್ ಕ್ಯೂರಿಯಾಗಿದ್ದ ಹಿರಿಯ ವಕೀಲ (ಹಾಲಿ ಅಡ್ವೊಕೇಟ್‌ ಜನರಲ್‌) ವಿಕ್ರಂ ಹುಯಿಲಗೋಳ ಅವರು “ಏಕಾಂಗಿ ಸೆರೆವಾಸ ವಿಧಿಸಿರುವುದು ನಿಜ. ಹೀಗಾಗಿ ಆತ ಮರಣ ದಂಡನೆ ಶಿಕ್ಷೆ ಕಡಿತಗೊಳಿಸುವಂತೆ ಕೋರಲು ಹಕ್ಕಿದೆ. ಕ್ಷಮಾದಾನ ಅರ್ಜಿ ಪರಿಗಣಿಸುವುದು ಮತ್ತು ವಿಲೇವಾರಿಯಲ್ಲಿ ವಿಳಂಬವಾಗಿರುವುದನ್ನು ಹಾನಿ ಎಂದು ಪರಿಗಣಿಸಬಹುದಾಗಿದೆ ಎಂದು ತಿಳಿಸಿದ್ದರು. ಶಿಕ್ಷೆ ಕಡಿತದ ಅರ್ಜಿಯನ್ನು ವಜಾಗೊಳಿಸಬೇಕು ಎಂದು ಪ್ರಾಸಿಕ್ಯೂಷನ್ ಕೋರಿತ್ತು.

ಪ್ರಕರಣದ ಹಿನ್ನೆಲೆ: ಅನೈತಿಕ ಸಂಬಂಧ ಶಂಕೆ ವ್ಯಕ್ತಪಡಿಸಿ ಸಾಯಿಬಣ್ಣ 1988ರ ಜನವರಿ 9ರಂದು ಪತ್ನಿ ಮಾಲಕವ್ವಳನ್ನು ಕೊಲೆ ಮಾಡಿ ತಾನೇ ಬಂದು ಪೊಲೀಸರಿಗೆ ಶರಣಾಗಿದ್ದ. ಆನಂತರ ಜೈಲಿನಲ್ಲಿರುವಾಗ ಸಹಖೈದಿ ದತ್ತು ಎಂಬಾತನೊಂದಿಗೆ ಆತನ ಸ್ನೇಹ ಬೆಳೆಯಿತು. ಜಾಮೀನು ಪಡೆದು ಸಹಖೈದಿ ದತ್ತುವಿನ ಪುತ್ರಿ ನಾಗಮ್ಮಗಳನ್ನು ವಿವಾಹವಾಗಿದ್ದನು. 2ನೇ ಪತ್ನಿ ನಾಗಮ್ಮಳಿಗೆ ವಿಜಯಲಕ್ಷ್ಮಿ ಎಂಬ ಮಗು ಜನಿಸಿತ್ತು.

ಈ ಮಧ್ಯೆ, ಮೊದಲ ಪತ್ನಿ ಕೊಲೆ ಕೇಸಿನಲ್ಲಿ ಸಾಯಿಬಣ್ಣನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. 1994ರಲ್ಲಿ ಪೆರೋಲ್ ಪಡೆದು ಹೊರಬಂದಿದ್ದ ಸಾಯಿಬಣ್ಣ 2ನೇ ಪತ್ನಿ ಹಾಗೂ ಮಗುವನ್ನು ಕೊಲೆ ಮಾಡಿ ಮತ್ತೆ ಜೈಲು ಸೇರಿದ್ದನು.

ಕಲಬುರ್ಗಿ ಸತ್ರ ನ್ಯಾಯಾಲಯವು ಸಾಯಿಬಣ್ಣನಿಗೆ ಮರಣ ದಂಡನೆ ಶಿಕ್ಷೆಯನ್ನು ವಿಧಿಸಿತ್ತು. ನಂತರ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಕೂಡ ಆ ಮರಣದಂಡನೆ ಶಿಕ್ಷೆಯನ್ನು ಎತ್ತಿಹಿಡಿದಿತ್ತು. ಆದರೆ, ಆತ ಕ್ಷಮಾದಾನ ಅರ್ಜಿ ವಿಲೇವಾರಿಯಲ್ಲಿ 7 ವರ್ಷ 8 ತಿಂಗಳು ವಿಳಂಬವಾಗಿರುವುದರಿಂದ ಮರಣ ದಂಡನೆ ಶಿಕ್ಷೆಯಿಂದ ವಿನಾಯಿತಿ ನೀಡುವಂತೆ ಹೈಕೋರ್ಟ್ ಮೊರೆ ಹೋಗಿದ್ದನು.

Attachment
PDF
Saibanna Vs UoI.pdf
Preview

Related Stories

No stories found.
Kannada Bar & Bench
kannada.barandbench.com