ಕೆಇಎ ಪರೀಕ್ಷಾ ಅಕ್ರಮ ಪ್ರಕರಣ: ಆರೋಪಿ ಆರ್‌ ಡಿ ಪಾಟೀಲ್‌ 14 ದಿನ ನ್ಯಾಯಾಂಗ ಬಂಧನಕ್ಕೆ

ಮಹಾರಾಷ್ಟ್ರದ ಅಕ್ಕಲಕೋಟೆಯಲ್ಲಿ ಆರ್‌ ಡಿ ಪಾಟೀಲ್‌ನನ್ನು ವಶಕ್ಕೆ ಪಡೆದಿದ್ದ ಪೊಲೀಸರು ಶನಿವಾರ ಕಲಬುರ್ಗಿಯ ಎರಡನೇ ಹೆಚ್ಚುವರಿ ಸಿವಿಲ್‌ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶೆ ಸ್ಮಿತಾ ನಾಗಲಾಪುರ ಅವರ ಮುಂದೆ ಹಾಜರುಪಡಿಸಿದರು.
R D Patil
R D Patil

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ನಡೆಸಿದ್ದ ಪ್ರಥಮ ಮತ್ತು ದ್ವಿತೀಯ ದರ್ಜೆ ಸಹಾಯಕ ನೇಮಕ ಪರೀಕ್ಷೆಯಲ್ಲಿ ಬ್ಲೂಟೂತ್‌ ಮೂಲಕ ಉತ್ತರ ಸೂಚಿಸುವ ಆರೋಪದ ಮೇಲೆ ಬಂಧಿತನಾಗಿರುವ ಪ್ರಮುಖ ಆರೋಪಿ ರುದ್ರಗೌಡ ಪಾಟೀಲ್‌ ಅಲಿಯಾಸ್‌ ಆರ್‌ ಡಿ ಪಾಟೀಲ್‌ನನ್ನು ಕಲಬುರ್ಗಿಯ ಜಿಲ್ಲಾ ನ್ಯಾಯಾಲಯವು 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿದೆ.

ಮಹಾರಾಷ್ಟ್ರದ ಅಕ್ಕಲಕೋಟೆಯಲ್ಲಿ ಆರ್‌ ಡಿ ಪಾಟೀಲ್‌ ಅವರನ್ನು ವಶಕ್ಕೆ ಪಡೆದಿದ್ದ ಪೊಲೀಸರು ಶನಿವಾರ ಕಲಬುರ್ಗಿಯ ಎರಡನೇ ಹೆಚ್ಚುವರಿ ಸಿವಿಲ್‌ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶೆ ಸ್ಮಿತಾ ನಾಗಲಾಪುರ ಅವರ ನಿವಾಸದಲ್ಲಿ ಆರೋಪಿಯನ್ನು ಹಾಜರುಪಡಿಸಿದರು.

ಪ್ರಕರಣದ ಕುರಿತು ಪೊಲೀಸರಿಂದ ಮಾಹಿತಿ ಪಡೆದ ನ್ಯಾಯಾಧೀಶರು ಆರೋಪಿ ಪಾಟೀಲ್‌ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.

ಆರೋಪಿ ಆರ್‌ ಡಿ ಪಾಟೀಲ್‌ ವಿರುದ್ಧ ಕಲಬುರ್ಗಿ ವಿಶ್ವವಿದ್ಯಾಲಯ ಪೊಲೀಸ್‌ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ಗಳಾದ 109, 114, 120(B), 420, 34, 37 ಮತ್ತು ಐಟಿ ಕಾಯಿದೆ ಸೆಕ್ಷನ್‌ 66 (ಡಿ) ಪ್ರಕರಣ ದಾಖಲಿಸಲಾಗಿದೆ. ಇದಲ್ಲದೇ ಕಲಬುರ್ಗಿ, ಅಫಜಲಪುರ ಮತ್ತು ಯಾದಗಿರಿಯ ವಿವಿಧ ಠಾಣೆಗಳಲ್ಲಿ ಆರ್‌ ಡಿ ಪಾಟೀಲ್‌ ವಿರುದ್ಧ ಪ್ರಕರಣ ದಾಖಲಾಗಿವೆ.

ಕಳೆದ ವರ್ಷ ನಡೆದಿದ್ದ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ಮತ್ತು ಉಪನ್ಯಾಸಕರ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಎಸಗಿದ ಪ್ರಕರಣದಲ್ಲಿ ಆರ್‌ ಡಿ ಪಾಟೀಲ್‌ ಆರೋಪಿ. ಈ ಎಲ್ಲಾ ಪ್ರಕರಣಗಳಲ್ಲೂ ಆತ ಜಾಮೀನಿನ ಮೇಲೆ ಹೊರಗಿದ್ದಾನೆ.

ಪ್ರಕರಣದ ಹಿನ್ನೆಲೆ: ಅಕ್ಟೋಬರ್‌ 28ರಂದು ಕೆಇಎ ವತಿಯಿಂದ ಎಸ್‌ಡಿಎ/ಎಫ್‌ಡಿಎ ಪರೀಕ್ಷೆ ನಡೆಸಲಾಗುತ್ತಿತ್ತು. ಅಫಜಲಪುರ ಮತ್ತು ಕಲಬುರ್ಗಿಯ ವಿವಿಧ ಕಡೆ ಅಭ್ಯರ್ಥಿಗಳಿಗೆ ಬ್ಲೂಟೂತ್‌ ಮೂಲಕ ಉತ್ತರ ತಲುಪಿಸುವ ಸಂಚು ರೂಪಿಸಲಾಗಿತ್ತು. ಇದರ ರೂವಾರಿ ಆರ್‌ ಡಿ ಪಾಟೀಲ್‌ ಎಂದು ಬಂಧಿತ ಅಭ್ಯರ್ಥಿಗಳು ಹೇಳಿಕೆ ನೀಡಿದ್ದರು. ಈ ಆಧಾರದಲ್ಲಿ ಆತನನ್ನು ಬಂಧಿಸಲಾಗಿದೆ.

ಇದಕ್ಕೂ ಮುನ್ನ, ನವೆಂಬರ್‌ 7ರಂದು ಕಲಬುರ್ಗಿಯ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಆರ್‌ ಡಿ ಪಾಟೀಲ್‌ಗೆ ನಿರೀಕ್ಷಣಾ ಜಾಮೀನು ನಿರಾಕರಿಸಿತ್ತು.

ತಾತ್ಕಾಲಿಕ ಪ್ರತಿಬಂಧಕಾದೇಶ: ಇದೆಲ್ಲದರ ಮಧ್ಯೆ, ಆರ್‌ ಡಿ ಪಾಟೀಲ್‌ ತನ್ನ ಘನತೆಗೆ ಚ್ಯುತಿಯಾಗುವ ಆಧಾರರಹಿತ ಸುದ್ದಿ ಪ್ರಕಟಿಸದಂತೆ ಬೆಂಗಳೂರಿನ 20ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯದಿಂದ ಹಲವು ಮುದ್ರಣ ಮತ್ತು ಟಿವಿ ಚಾನೆಲ್‌ಗಳ ವಿರುದ್ಧ ಏಕಪಕ್ಷೀಯ ತಾತ್ಕಾಲಿಕ ಪ್ರತಿಬಂಧಕಾದೇಶ ಪಡೆದುಕೊಂಡಿದ್ದಾರೆ.

Kannada Bar & Bench
kannada.barandbench.com