ಇಂಡಿಯಾ ಟುಡೆ, ಸರ್ದೇಸಾಯಿ, ಅರುಣ್ ಪುರಿ ವಿರುದ್ಧ ಮಾಜಿ ಶಾಸಕ ಬಿ ಆರ್ ಪಾಟೀಲ ಹೂಡಿದ್ದ ಪ್ರಕರಣಕ್ಕೆ ಹೈಕೋರ್ಟ್ ತಡೆ

ಟೈಮ್ಸ್ ನೌ ನಿರೂಪಕರಾಗಿದ್ದ ಅರ್ನಾಬ್ ಗೋಸ್ವಾಮಿ ಹಾಗೂ ಇಂಡಿಯಾ ಟುಡೆ ಉಪ ಸಂಪಾದಕ ಶಿವ್ ಅರೂರ್ ಅವರ ವಿರುದ್ಧವೂ ಪಾಟೀಲ ಅವರು ಕಲಬುರ್ಗಿಯ ಐದನೇ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.
RajdeepSardesai, AroonPurie and B R Patil, MLA of Aland
RajdeepSardesai, AroonPurie and B R Patil, MLA of Aland
Published on

ತನ್ನನ್ನು ಭ್ರಷ್ಟ ರಾಜಕಾರಣಿ, ದುರ್ವ್ಯವಹಾರಗಳಲ್ಲಿ ತೊಡಗಿಸಿಕೊಂಡವರು ಎಂದು ಆರೋಪಿಸಿ ಸುದ್ದಿ ಪ್ರಸಾರ ಮಾಡಿದ್ದ ವಾರ್ತಾ ವಾಹಿನಿ ಇಂಡಿಯಾ ಟುಡೆ, ಹಿರಿಯ ಪತ್ರಕರ್ತ ರಾಜದೀಪ್‌ ಸರ್ದೇಸಾಯಿ, ಹಾಗೂ ವಾಹಿನಿಯ ಮುಖ್ಯ ಸಂಪಾದಕ ಅರುಣ್‌ ಪುರಿ ವಿರುದ್ಧ ಆಳಂದದ ಮಾಜಿ ಶಾಸಕ ಬಿ ಆರ್‌ ಪಾಟೀಲ ಅವರು ಹೂಡಿದ್ದ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದ ಪ್ರಕ್ರಿಯೆಗಳಿಗೆ ಕರ್ನಾಟಕ ಹೈಕೋರ್ಟ್‌ ಕಲಬುರ್ಗಿ ಪೀಠ  ಮುಂದಿನ ವಿಚಾರಣೆಯವರೆಗೆ ತಡೆ ನೀಡಿದೆ.

ಪಾಟೀಲ್‌ ಅವರ ಕ್ರಿಮಿನಲ್‌ ಮೊಕದ್ದಮೆ ಪ್ರಶ್ನಿಸಿ ಇಂಡಿಯಾ ಟುಡೆ ಪತ್ರಿಕೆ, ಅದರ ಮುಖ್ಯ ಸಂಪಾದಕ ಅರುಣ್‌ ಪುರಿ, ಪತ್ರಕರ್ತ  ರಾಜ್‌ದೀಪ್‌ ಸರ್ದೇಸಾಯಿ ಸಲ್ಲಿಸಿದ್ದ ವಿವಿಧ ಅರ್ಜಿಗಳನ್ನು ಇತ್ತೀಚೆಗೆ ಪುರಸ್ಕರಿಸಿದ ನ್ಯಾ. ಮೊಹಮ್ಮದ್‌ ನವಾಜ್‌ ಅವರಿದ್ದ ಕಲಬುರ್ಗಿ  ಪೀಠ ಈ ಆದೇಶ ಹೊರಡಿಸಿದೆ.

ಇಂಡಿಯಾ ಟುಡೆ, ರಾಜದೀಪ್‌ ಸರ್ದೇಸಾಯಿ, ಅರುಣ್‌ ಪುರಿ ಮಾತ್ರವಲ್ಲದೆ ಅಂದು ಟೈಮ್ಸ್‌ ನೌ ನಿರೂಪಕರಾಗಿದ್ದ (ಈಗಿನ ರಿಪಬ್ಲಿಕ್‌ ಟಿವಿಯ ಮುಖ್ಯಸ್ಥ) ಅರ್ನಾಬ್‌ ಗೋಸ್ವಾಮಿ ಹಾಗೂ ಇಂಡಿಯಾ ಟುಡೆ ಉಪ ಸಂಪಾದಕ ಶಿವ್‌ ಅರೂರ್‌ ಅವರ ವಿರುದ್ಧವೂ ಬಿ ಆರ್‌ (ಭೋಜರಾಜ್‌ ರಾಮಚಂದ್ರಪ್ಪ) ಪಾಟೀಲ್‌ ಅವರು ಕಲಬುರ್ಗಿಯ ಐದನೇ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಈ ಹಿಂದೆ ದಾವೆ ಹೂಡಿದ್ದರು.

“ತಾನು 27-05 2016ರಂದು ಬೆಂಗಳೂರಿನ ಶೇಷಾದ್ರಿಪುರಂ ಠಾಣಾ ವ್ಯಾಪ್ತಿಯ ಲಲಿತ್‌ ಅಶೋಕ ಹೋಟೆಲಿನ ಕೊಠಡಿ ಸಂಖ್ಯೆ 409ರಲ್ಲಿ ಸಂಜೆ ಏಳು ಗಂಟೆಗೆ ಜೆಡಿಎಸ್‌ ಅಂದಿನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡ್ಯಾನಿಶ್‌ ಅಲಿ, ವಿಜಯ ಪ್ರತಾಪ್‌, ಸಯದ್‌ ಮುಜೀರ್‌ ಆಗಾ ಹಾಗೂ ಪಕ್ಷದ ಇತರೆ ಇಬ್ಬರು ಕಾರ್ಯಕರ್ತರೊಂದಿಗೆ ತಂಗಿದ್ದಾಗ ಕೊಠಡಿಗೆ ಡ್ಯಾನಿಶ್‌ ಅವರನ್ನು ಭೇಟಿಯಾಗಲು ಬಂದ ಇಬ್ಬರು ವ್ಯಕ್ತಿಗಳೊಂದಿಗೆ ಸಾಮಾನ್ಯ ಸಂಭಾಷಣೆ ನಡೆಸಿದ್ದೆ” ಎಂದು ಪಾಟೀಲ್‌ ಅವರು ಎಫ್‌ಐಆರ್‌ನಲ್ಲಿ ವಿವರಿಸಿದ್ದರು. ಘಟನೆ ನಡೆದಾಗ ಅವರು ಆಳಂದ ಕ್ಷೇತ್ರವನ್ನು ಶಾಸಕರಾಗಿ ಮೂರನೇ ಬಾರಿಗೆ ಪ್ರತಿನಿಧಿಸುತ್ತಿದ್ದರು.

“ನಂತರ 02-06-2016ರಂದು ಸಂಜೆ 4.30ಕ್ಕೆ ಸ್ನೇಹಿತರೊಬ್ಬರು ಕರೆ ಮಾಡಿ ತಿಳಿಸಿದಂತೆ ಇಂಡಿಯಾ ಟುಡೆ ಸುದ್ದಿ ವಾಹಿನಿಯಲ್ಲಿ ನನ್ನ ಬಗ್ಗೆ ರಾಜದೀಪ್‌ ಸರ್ದೇಸಾಯಿ, ಶಿವ್‌ ಅರೂರ್‌ ಹಾಗೂ ಟೈಮ್ಸ್‌ ನೌ ಸುದ್ದಿ ವಾಹಿನಿಯಲ್ಲಿ ಅದೇ ದಿನ ಅರ್ನಾಬ್‌ ಗೋಸ್ವಾಮಿ ಅವರು ಕೂಡ ನನ್ನ ಬಗ್ಗೆ ಕೆಟ್ಟದಾಗಿ ಅತಿರಂಜಿತವಾಗಿ, ಹೋಟೆಲ್‌ನ ಕ್ಯಾಮೆರಾದಲ್ಲಿ ಸೆರೆಯಾಗಿರುವ ದೃಶ್ಯಾವಳಿ ಎಂದು ಹೇಳಿಕೊಂಡು ತನ್ನನ್ನು ಭ್ರಷ್ಟ ರಾಜಕಾರಣಿ, ದುರ್‌ವ್ಯವಹಾರಗಳಲ್ಲಿ ತೊಡಗಿಕೊಂಡವರು ಇತ್ಯಾದಿಯಾಗಿ ಆರೋಪಿಸಿದ್ದರು” ಎಂದು ದೂರಿದ್ದರು.

“ಇಂಡಿಯಾ ಟುಡೆ ಸುದ್ದಿ ವಾಹಿನಿಯಲ್ಲಿ ʼದ ರಾಜ್ಯಸಭಾ ಬಜಾರ್‌ʼ ಮತ್ತು ಟೈಮ್ಸ್‌ ನೌ ಸುದ್ದಿ ವಾಹಿನಿಯಲ್ಲಿ ‘ಸೀಟ್ಸ್‌ ಫಾರ್‌ ಸೇಲ್‌ 2 ಕ್ಯಾಂಡಿಡೇಟ್‌ ಅಂಡ್‌ 3 ಎಂಎಲ್‌ಎ ಸ್ಟಂಗ್‌’ ಎಂಬ ಶೀರ್ಷಿಕೆಯಡಿ ನಿರಂತರವಾಗಿ ಪ್ರಸಾರ ಮಾಡುತ್ತಾ ಕುಟುಕು ಕಾರ್ಯಚಾರಣೆ  ಹೆಸರಿನಲ್ಲಿ ಸದರಿ ವ್ಯಕ್ತಿಗಳು ದುರುದ್ದೇಶದಿಂದ ಮತ್ತು ಸ್ವಯಂ ಸೃಷ್ಟಿಸಿದ ಹಾಗೂ ತಿರುಚಿದ ದೃಶ್ಯಾವಳಿ ಮೂಲಕ  ಸುಳ್ಳು ಪ್ರಚಾರ ಮಾಡಿ ಸಾರ್ವಜನಿಕರಲ್ಲಿ ದ್ವೇಷ ಭಾವನೆ ಉಂಟು ಮಾಡುವ, ಶಾಂತಿ ಕದಡುವ, ಸ್ವಯಂ ರೂಪಿಸಿದ ಮತ್ತು ತಿರುಚಿದ ದೃಶ್ಯಾವಳಿ ಹಾಗೂ ಧ್ವನಿಮುದ್ರಿಕೆಗಳನ್ನು ಸತ್ಯವೆಂದು ಪ್ರಸಾರ ಮಾಡುತ್ತಾ ತಮ್ಮ ಪ್ರತಿಷ್ಠೆಗೆ ಹಾನಿಯುಂಟು ಮಾಡಿದ್ದಾರೆ ಮತ್ತು ಇಂಡಿಯಾ ಟುಡೆ ಮುಖ್ಯ ಸಂಪಾದಕರಾದ ಅರುಣ್‌ ಪುರಿ ಅವರು ಆಕ್ಷೇಪಾರ್ಹ ದೃಶ್ಯಗಳನ್ನು ಪ್ರಸಾರ ಮಾಡಲು ಅನುಮತಿ ನೀಡುವ ಮೂಲಕ ಅಪರಾಧ ಎಸಗಿದ್ದಾರೆ” ಎಂದಿದ್ದರು.

ಆದರೆ ಇದನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್‌ ಕಲಬುರ್ಗಿ ಪೀಠಕ್ಕೆ ಮನವಿ ಸಲ್ಲಿಸಿದ್ದ  ಇಂಡಿಯಾ ಟುಡೆ, ರಾಜದೀಪ್‌ ಸರ್ದೇಸಾಯಿ ಹಾಗೂ ಅರುಣ್‌ ಪುರಿ ಅವರು ತಮ್ಮ ವಿರುದ್ಧದ ಪ್ರಕರಣಕ್ಕೆ ತಾತ್ಕಾಲಿಕ ತಡೆ ನೀಡುವಂತೆ ಕೋರಿದ್ದರು. ಈ ಸಂಬಂಧ 23-11-2022ರಂದು ಆದೇಶ ನೀಡಿದ ಪೀಠ ಬಿ ಆರ್‌ ಪಾಟೀಲ್‌ ಅವರಿಗೆ ನೋಟಿಸ್‌ ಜಾರಿ ಮಾಡಿ ಪ್ರಕರಣವನ್ನು ಮುಂದೂಡಿದೆ.

Kannada Bar & Bench
kannada.barandbench.com