ಬಾಲಿವುಡ್ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರನೌತ್ ಅಭಿನಯದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಆಡಳಿತಾವಧಿಯಲ್ಲಿ ವಿಧಿಸಲಾಗಿದ್ದ 1975ರ ತುರ್ತು ಪರಿಸ್ಥಿತಿಯನ್ನು ಹಿನ್ನೆಲೆಯಾಗಿರಿಸಿಕೊಂಡ 'ಎಮೆರ್ಜೆನ್ಸಿʼ ಚಿತ್ರಕ್ಕೆ ಸಿಬಿಎಫ್‌ಸಿ ಪರಿಶೀಲನಾ ಸಮಿತಿ ಸೂಚಿಸಿದ್ದ ಕತ್ತರಿ ಪ್ರಯೋಗ ಮಾಡಲು ಚಿತ್ರದ ಸಹ ನಿರ್ಮಾಪಕಿಯೂ ಆಗಿರುವ ಕಂಗನಾ ಒಪ್ಪಿದ್ದಾರೆ ಎಂದು ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ) ಸೋಮವಾರ ಬಾಂಬೆ ಹೈಕೋರ್ಟ್‌ಗೆ ಮಾಹಿತಿ ನೀಡಿದೆ [ಝೀ ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್ ಲಿಮಿಟೆಡ್ ಮತ್ತು ಸೆಂಟ್ರಲ್ ಬೋರ್ಡ್ ಆಫ್ ಫಿಲಂ ಸರ್ಟಿಫಿಕೇಷನ್, ಫಿಲಮ್ಸ್ ಡಿವಿಷನ್ ಕಾಂಪ್ಲೆಕ್ಸ್ ನಡುವಣ ಪ್ರಕರಣ].
ಸಿಬಿಎಫ್‌ಸಿಯನ್ನು ಪ್ರತಿನಿಧಿಸಿದ್ದ ವಕೀಲ ಅಭಿನವ್ ಚಂದ್ರಚೂಡ್ ಅವರು ನ್ಯಾಯಮೂರ್ತಿಗಳಾದ ಬಿ ಪಿ ಕೊಲಬಾವಾಲಾ ಮತ್ತು ಫಿರ್ದೋಶ್ ಪೂನಿವಾಲಾ ಅವರಿರುವ ಪೀಠದೆದುರು ಈ ವಿಚಾರ ತಿಳಿಸಿದರು.
ಚಿತ್ರಕ್ಕೆ ಸೆನ್ಸಾರ್ ಪ್ರಮಾಣಪತ್ರವನ್ನು ಬಿಡುಗಡೆ ಮಾಡುವಂತೆ ಕೋರಿ ಚಿತ್ರದ ಸಹ ನಿರ್ಮಾಪಕರಾದ ಜೀ಼ ಸ್ಟುಡಿಯೋಸ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು. ಚಿತ್ರ ಸಿಖ್ ಸಮುದಾಯವನ್ನು ತಪ್ಪಾಗಿ ಬಿಂಬಿಸುತ್ತದೆ ಎಂಬ ವಿವಾದದ ಹಿನ್ನೆಲೆಯಲ್ಲಿ ಅರ್ಜಿ ಸಲ್ಲಿಸಲಾಗಿತ್ತು.
ಪರಿಶೀಲನಾ ಸಮಿತಿ ಸೂಚಿಸಿದಂತೆ ಕೆಲ ದೃಶ್ಯಗಳನ್ನು ತೆಗೆದು ಚಿತ್ರ ಬಿಡುಗಡೆ ಮಾಡಬಹುದು ಎಂದು ಸಿಬಿಎಫ್‌ಸಿ ಕಳೆದ ವಾರ ತಿಳಿಸಿತ್ತು.
ಚಿತ್ರದ ಕೆಲ ದೃಶ್ಯಗಳನ್ನು ಕತ್ತರಿಸಲು ತಮ್ಮ ಸಮ್ಮತಿ ಇರುವುದಾಗಿ ಕಂಗನಾ ತಿಳಿಸಿರುವ ಕುರಿತು ಜೀ಼ ಯನ್ನು ಪ್ರತಿನಿಧಿಸುವ ಹಿರಿಯ ವಕೀಲ ಶರಣ್ ಜಗ್ತಿಯಾನಿ ಮಾಹಿತಿ ನೀಡಿದರು. ಕಂಗನಾ ಒಪ್ಪಿರುವುದನ್ನು ದೃಢಪಡಿಸಿದ ವಕೀಲ ಅಭಿನವ್ ಅವರು ಕತ್ತರಿ ಪ್ರಯೋಗದಿಂದ ಸಿನಿಮಾದ ಅವಧಿ ಕೇವಲ ಒಂದು ನಿಮಿಷದಷ್ಟು ಮಾತ್ರ ಕಡಿಮೆಯಾಗಲಿದೆ ಎಂದರು.
ಆದರೆ ಈ ಬಗ್ಗೆ ದೃಢೀಕರಣ ಅಗತ್ಯವಿದೆ ಎಂದು ಜೀ಼ ಹೇಳಿದ್ದರಿಂದ ಎರಡೂ ಕಡೆಯವರಿಂದ ಸೂಕ್ತ ಸೂಚನೆ ಪಡೆಯುವುದಕ್ಕಾಗಿ ನ್ಯಾಯಾಲಯ ಪ್ರಕರಣವನ್ನು ಅಕ್ಟೋಬರ್ 3ಕ್ಕೆ ಮುಂದೂಡಿತು.