ಜಾವೇದ್ ಅಖ್ತರ್ ಹೂಡಿದ್ದ ಮಾನನಷ್ಟ ಮೊಕದ್ದಮೆಗೆ ತಡೆ ಕೋರಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ ಕಂಗನಾ ರನೌತ್

ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ಡೇರೆ ಮತ್ತು ಮಂಜುಷಾ ದೇಶಪಾಂಡೆ ಅವರಿರುವ ವಿಭಾಗೀಯ ಪೀಠ ಜನವರಿ 9ರಂದು ಅರ್ಜಿಯ ವಿಚಾರಣೆ ನಡೆಸುವ ಸಾಧ್ಯತೆಯಿದೆ.
ಕಂಗನಾ ರನೌತ್, ಜಾವೇದ್ ಅಖ್ತರ್, ಬಾಂಬೆ ಹೈಕೋರ್ಟ್
ಕಂಗನಾ ರನೌತ್, ಜಾವೇದ್ ಅಖ್ತರ್, ಬಾಂಬೆ ಹೈಕೋರ್ಟ್

ತನ್ನ ವಿರುದ್ಧ ಹಿರಿಯ ಚಲನಚಿತ್ರ ಗೀತರಚನೆಕಾರ ಜಾವೇದ್ ಅಖ್ತರ್ ಅವರು ಹೂಡಿರುವ ಮಾನನಷ್ಟ ಮೊಕದ್ದಮೆಯ ವಿಚಾರಣೆಗೆ ತಡೆ ಕೋರಿ ಬಾಲಿವುಡ್‌ ನಟಿ ಕಂಗನಾ ರನೌತ್ ಅವರು ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದಾರೆ.

ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ಡೇರೆ ಮತ್ತು ಮಂಜುಷಾ ದೇಶಪಾಂಡೆ ಅವರಿರುವ ವಿಭಾಗೀಯ ಪೀಠ ಜನವರಿ 9ರಂದು ಅರ್ಜಿಯ ವಿಚಾರಣೆ ನಡೆಸುವ ಸಾಧ್ಯತೆಯಿದೆ.

ರಿಪಬ್ಲಿಕ್ ಟಿವಿಯಲ್ಲಿ ಪ್ರಸಾರವಾದ ಸಂದರ್ಶನದಲ್ಲಿ ಕಂಗನಾ ರನೌತ್ ನೀಡಿದ ಕೆಲವು ಹೇಳಿಕೆಗಳಿಗೆ ಆಕ್ಷೇಪ ವ್ಯಕ್ತಪಡಿಸಿ ಅಖ್ತರ್ ದೂರು ದಾಖಲಿಸಿದ್ದರು .

ಕಂಗನಾ ರನೌತ್ ಅವರು 2016ರಲ್ಲಿ ತಮ್ಮ ಮತ್ತು ಅಖ್ತರ್ ನಡುವಿನ ಭೇಟಿಗೆ ಸಂಬಂಧಿಸಿದಂತೆ ಈ ಹೇಳಿಕೆ ನೀಡಿದ್ದರು. ಈ ಮಧ್ಯೆ, ಕಂಗನಾ ಅವರು ಅಖ್ತರ್‌ ಅವರ ವಿರುದ್ಧ ಕ್ರಿಮಿನಲ್ ಪಿತೂರಿ, ಸುಲಿಗೆ ಮತ್ತು ತನ್ನ ಖಾಸಗಿತನ ಅತಿಕ್ರಮಿಸುವ ಮೂಲಕ ಘನತೆಗೆ ಧಕ್ಕೆ ತಂದ ಆರೋಪಗಳೊಂದಿಗೆ ಪ್ರತಿ ದೂರು ದಾಖಲಿಸಿದ್ದರು .

ಜುಲೈ 24, 2023 ರಂದು, ಅಂಧೇರಿಯ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಅಖ್ತರ್ ವಿರುದ್ಧದ ಸುಲಿಗೆ ಆರೋಪ ಕೈಬಿಟ್ಟಿತ್ತು. ಆದರೆ ಐಪಿಸಿ ಸೆಕ್ಷನ್ 506 ಮತ್ತು 509ರ ಅಡಿಯ ಅಪರಾಧಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಸಮನ್ಸ್ ನೀಡಿತ್ತು. ಸಮನ್ಸ್ ಆದೇಶ ಪ್ರಶ್ನಿಸಿ ಅಖ್ತರ್ ದಿಂಡೋಶಿ ಸೆಷನ್ಸ್ ನ್ಯಾಯಾಲಯದಲ್ಲಿ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದರು.

ಅಖ್ತರ್ ಅವರ ಪರಿಶೀಲನಾ ಅರ್ಜಿಯ ಅಂತಿಮ ವಿಚಾರಣೆ ನಡೆಯುವವರೆಗೆ ಸೆಷನ್ಸ್ ನ್ಯಾಯಾಧೀಶರ ಆದೇಶ ಮತ್ತು ಕಂಗನಾ ದೂರಿನ ಕ್ರಿಮಿನಲ್ ವಿಚಾರಣೆಗೆ ತಡೆ ನೀಡಿದರು.

ಅಖ್ತರ್‌ ಅವರು ನೀಡಿದ್ದ ದೂರಿಗೆ ತಡೆಯಾಜ್ಞೆ ನೀಡುವಂತೆ ಕೋರಿ ಕಂಗನಾ ಅವರು ಹೈಕೋರ್ಟ್‌ ಕದ ತಟ್ಟಿದ್ದಾರೆ. ತಾನು ನೀಡಿರುವ ದೂರು ಮತ್ತು ಅಖ್ತರ್ ಅವರ ದೂರು ಎರಡೂ ಒಂದೇ ಘಟನೆಯಿಂದ ಉದ್ಭವವಾಗಿರುವುದರಿಂದ ಪರಸ್ಪರ ವಿರುದ್ಧವಾದ ತೀರ್ಪುಗಳನ್ನು ತಪ್ಪಿಸಲು ಒಟ್ಟಿಗೆ ವಿಚಾರಣೆ ನಡೆಸಬೇಕು ಎಂದು ಕಂಗನಾ ಕೋರಿದ್ದಾರೆ.

ಅರ್ಜಿಯ ಪ್ರಕಾರ, ಅಖ್ತರ್ ಅವರ ದೂರಿನ ವಿಚಾರಣೆ ನಡೆದಿದ್ದು ಅವರ ದೂರಿನಿಂದ ಉದ್ಭವಿಸುವ ಪ್ರಕ್ರಿಯೆಗಳನ್ನು ತಡೆಹಿಡಿಯಲಾಗಿದೆ. ಇದು ಅನ್ಯಾಯ ಮತ್ತು ಸ್ವಾಭಾವಿಕ ನ್ಯಾಯದ ಸ್ಥಾಪಿತ ತತ್ವಗಳಿಗೆ ವಿರುದ್ಧವಾಗಿದೆ.

Kannada Bar & Bench
kannada.barandbench.com