ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾಲಯ (ಜೆಎನ್‌ಯು) ದೇಶದ್ರೋಹ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯಕ್ಕೆ ಪೊಲೀಸರು ಸೋಮವಾರ ಆರೋಪಪಟ್ಟಿ ಸಲ್ಲಿಸಿದ್ದಾರೆ. ಈ ಸಂಬಂಧ ಮಾರ್ಚ್ 15ರಂದು ಎಲ್ಲಾ ಆರೋಪಿಗಳು ಹಾಜರಾಗುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ.
2016ರ ಫೆಬ್ರವರಿ 2ರಂದು ರಾಷ್ಟ್ರವಿರೋಧಿ ಘೋಷಣೆ ಕೂಗಿದ ಆರೋಪದಡಿ ಕನ್ಹಯ್ಯ ಕುಮಾರ್, ಉಮರ್ ಖಾಲಿದ್, ಅನಿರ್ಬನ್ ಭಟ್ಟಾಚಾರ್ಯ ಸೇರಿದಂತೆ ಏಳು ಮಂದಿಯ ಹೆಸರನ್ನು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಭಾರತೀಯ ದಂಡ ಸಂಹಿತೆಯ (ಐಪಿಸಿ) 465, 471,147,149,120 ಬಿ ಹಾಗೂ 323ನೇ ಸೆಕ್ಷನ್‌ಗಳಡಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಪ್ರಕರಣದ ಆರೋಪಪಟ್ಟಿಯನ್ನು ದೆಹಲಿ ಪೊಲೀಸರು 2019ರ ಜನವರಿ 14 ರಂದು ಸಲ್ಲಿಸಿದ್ದರು. ಆದರೆ ದೆಹಲಿ ಸರ್ಕಾರ ಅನುಮತಿ ನೀಡದ ಕಾರಣ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಆರೋಪಪಟ್ಟಿಯನ್ನು ಪರಿಗಣಿಸಲು ನಿರಾಕರಿಸಿದ್ದರು. ದಾಸ್ತಾವೇಜು ಸಾಕ್ಷ್ಯ, ಸಿಸಿಟಿವಿ ದೃಶ್ಯಾವಳಿ ಹಾಗೂ ಸುಮಾರು 90 ಮಂದಿ ಪ್ರತ್ಯಕ್ಷದರ್ಶಿ ಸಾಕ್ಷಿಗಳ ಹೇಳಿಕೆಗಳನ್ನು ಆಧರಿಸಿ ಆರೋಪಪಟ್ಟಿ ಸಲ್ಲಿಸಲಾಗಿದೆ ಎಂದು ದೆಹಲಿ ಪೊಲೀಸರು ಹೇಳಿಕೊಂಡಿದ್ದಾರೆ.
ದೇಶದ್ರೋಹ ಆರೋಪದ ಮೇಲೆ ಬಂಧನಕ್ಕೊಳಗಾದ ಸುಮಾರು ಮೂರು ವಾರಗಳ ನಂತರ ಕನ್ಹಯ್ಯಾ ಅವರಿಗೆ 2016ರ ಮಾರ್ಚ್‌ನಲ್ಲಿ ದೆಹಲಿ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿತ್ತು. ಅದಾದ ಕೆಲ ದಿನಗಳಲ್ಲೇ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರು ಖಾಲಿದ್ ಮತ್ತು ಭಟ್ಟಾಚಾರ್ಯರಿಗೆ ಮಧ್ಯಂತರ ಜಾಮೀನು ನೀಡಿದ್ದರು.