ಸಿಬಿಎಸ್‌ಇ, ಐಸಿಎಸ್‌ಇ ಶಾಲೆಗಳಲ್ಲಿ ಕನ್ನಡ ಕಡ್ಡಾಯ: ಕೇಂದ್ರ, ರಾಜ್ಯ ಸರ್ಕಾರಗಳಿಗೆ ಹೈಕೋರ್ಟ್‌ ನೋಟಿಸ್‌

ಕರ್ನಾಟಕ ಭಾಷಾ ಕಲಿಕಾ ಕಾಯಿದೆ, ನಿಯಮಗಳು ಮತ್ತು ನಿರಪೇಕ್ಷಣಾ ಪತ್ರ ನಿಯಮಗಳ ಪ್ರಕಾರ ರಾಜ್ಯದಲ್ಲಿನ ಸಿಬಿಎಸ್‌ಇ ಮತ್ತು ಸಿಐಎಸ್‌ಸಿಇ ಮಾನ್ಯತೆ ಪಡೆದಿರುವ ಶಾಲೆಗಳು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಕನ್ನಡ ಬೋಧಿಸಬೇಕು ಎಂದು ಹೇಳಲಾಗಿದೆ.
Kannada and Karnataka High Court
Kannada and Karnataka High Court

ಸಿಬಿಎಸ್‌ಇ ಮತ್ತು ಸಿಐಎಸ್‌ಸಿಇ ಮಾನ್ಯತೆ ಪಡೆದಿರುವ ಶಾಲೆಗಳಲ್ಲಿ ಕನ್ನಡವನ್ನು ಒಂದು ವಿಷಯವನ್ನಾಗಿ ಕಲಿಸಬೇಕು ಎಂದು ಕಡ್ಡಾಯಗೊಳಿಸಿರುವುದಕ್ಕೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಬುಧವಾರ ಕರ್ನಾಟಕ ಹೈಕೋರ್ಟ್‌ ನೋಟಿಸ್‌ ಜಾರಿ ಮಾಡಿದೆ.

ಸಿಬಿಎಸ್‌ಇ ಮತ್ತು ಸಿಐಎಸ್‌ಸಿಇ ಮಾನ್ಯತೆ ಪಡೆದಿರುವ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳ ಪೋಷಕರಲ್ಲಿ ಒಬ್ಬರಾದ ಸಿ ಸೋಮಶೇಖರ್‌ ಮತ್ತು ಇತರೆ 19 ಮಂದಿ ಹಾಗೂ ಶಿಕ್ಷಕರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಎಂ ಜಿ ಎಸ್‌ ಕಮಲ್‌ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು. ಆಕ್ಷೇಪಾರ್ಹವಾದ ಕರ್ನಾಟಕ ಭಾಷಾ ಕಲಿಕಾ ಕಾಯಿದೆ, ನಿಯಮಗಳು ಮತ್ತು ನಿರಪೇಕ್ಷಣಾ ಪತ್ರ (ಎನ್‌ಒಸಿ) ನಿಯಮಗಳಿಗೆ ಮಧ್ಯಂತರ ತಡೆ ನೀಡಬೇಕು ಎಂಬ ಕೋರಿಕೆ ನಿರಾಕರಿಸಿದ ನ್ಯಾಯಾಲಯವು ವಿಚಾರಣೆಯನ್ನು ಎರಡು ವಾರಗಳ ಕಾಲ ಮುಂದೂಡಿದೆ.

ಕರ್ನಾಟಕ ಭಾಷಾ ಕಲಿಕಾ ಕಾಯಿದೆ, ನಿಯಮಗಳು ಮತ್ತು ನಿರಪೇಕ್ಷಣಾ ಪತ್ರ ನಿಯಮಗಳ ಪ್ರಕಾರ ರಾಜ್ಯದಲ್ಲಿನ ಸಿಬಿಎಸ್‌ಇ ಮತ್ತು ಸಿಐಎಸ್‌ಸಿಇ ಮಾನ್ಯತೆ ಪಡೆದಿರುವ ಶಾಲೆಗಳು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಕನ್ನಡವನ್ನು ಬೋಧಿಸಬೇಕು ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ನಿರಪೇಕ್ಷಣಾ ಪತ್ರ ನಿಯಮಗಳ ಪ್ರಕಾರ ಕನ್ನಡವನ್ನು ದ್ವಿತೀಯ ಅಥವಾ ತೃತೀಯ ಭಾಷೆಯನ್ನಾಗಿ ಬೋಧಿಸಬೇಕು. ಕರ್ನಾಟಕ ಭಾಷಾ ಕಲಿಕಾ ಕಾಯಿದೆ 2015ರ ಸೆಕ್ಷನ್‌ 3, ಕರ್ನಾಟಕ ಭಾಷಾ ಕಲಿಕಾ ನಿಯಮಗಳು 2017ರ ನಿಯಮ 3 ಮತ್ತು ಕರ್ನಾಟಕ ಶೈಕ್ಷಣಿಕ ಸಂಸ್ಥೆಗಳ (ನಿರಪೇಕ್ಷಣಾ ಪತ್ರ ನೀಡಿಕೆ ಮತ್ತು ನಿಯಂತ್ರಣ) ನಿಯಮಗಳ 6(2)ರಿಂದ ವಿದ್ಯಾರ್ಥಿಗಳಿಗೆ ಅನನುಕೂಲ ಮತ್ತು ತೊಂದರೆಯಾಗುತ್ತದೆ. ಕಾಯಿದೆ ಮತ್ತು ನಿಯಮಗಳನ್ನು ಪಾಲಿಸದಿದ್ದರೆ ನಿಯಮ 6(5)ರ ಅನ್ವಯ ಶೈಕ್ಷಣಿಕ ಸಂಸ್ಥೆಗೆ ನೀಡಲಾಗಿರುವ ನಿರಪೇಕ್ಷಣಾ ಪತ್ರವನ್ನು ಹಿಂಪಡೆಯಲಾಗುತ್ತದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

“ಕರ್ನಾಟಕದಲ್ಲಿ ತಮ್ಮ ಇಚ್ಛೆಯಂತೆ ಪ್ರಥಮ, ದ್ವಿತೀಯ ಮತ್ತು ತೃತೀಯ ಭಾಷೆಯನ್ನು ಕಲಿಯುವ ವಿದ್ಯಾರ್ಥಿಗಳ ಹಕ್ಕಿಗೆ ಕಾಯಿದೆಗಳು ಗಂಭೀರ ಮತ್ತು ಪೂರ್ವಾಗ್ರಹ ಪೀಡಿತವಾಗಿ ಅಡ್ಡಿ ಉಂಟುಮಾಡುತ್ತವೆ. ಇದು ಮಕ್ಕಳ ಶೈಕ್ಷಣಿಕ ಬದುಕಿನ ಮೇಲೆ ಪರಿಣಾಮ ಬೀರಲಿದ್ದು, ಭವಿಷ್ಯದಲ್ಲಿ ಅವರ ಔದ್ಯೋಗಿಕ ಅವಕಾಶಗಳಿಗೆ ಅಡ್ಡಿ ಉಂಟು ಮಾಡುತ್ತದೆ. ಕನ್ನಡ ಹೊರತುಪಡಿಸಿ ಬೇರೆ ವಿಷಯಗಳನ್ನು ಬೋಧಿಸುವ ಶಿಕ್ಷಕ ಜೀವನಕ್ಕೂ ಇದು ಸಮಸ್ಯೆಯಾಗಲಿದೆ” ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.

“ಕರ್ನಾಟಕ ಭಾಷಾ ಕಲಿಕಾ ಕಾಯಿದೆ ಮತ್ತು ನಿಯಮಗಳನ್ನು ಉಲ್ಲಂಘಿಸಿದಂತೆ ಸಿಬಿಎಸ್‌ಇ ಮತ್ತು ಸಿಐಎಸ್‌ಸಿಇ ಮಾನ್ಯತೆ ಪಡೆದ ಶಾಲೆಗಳಿಗೆ ಬೆದರಿಕೆ ಹಾಕಲಾಗುತ್ತಿದೆ ಎಂಬುದು ತಮ್ಮ ಗಮನಕ್ಕೆ ಬಂದಿದ್ದು, ನಿರಪೇಕ್ಷಣಾ ಪತ್ರ ನಿಯಮಗಳ ರೂಪದಲ್ಲಿ ದುರುದ್ದೇಶಪೂರಿತ ಕ್ರಮಕೈಗೊಳ್ಳುವುದು ನಿಶ್ಚಿತವಾಗಿದೆ” ಎಂದು ಅರ್ಜಿದಾರರು ಅರ್ಜಿಯಲ್ಲಿ ವಿವರಿಸಿದ್ದಾರೆ.

Also Read
ಪದವಿ ಹಂತದಲ್ಲಿ ಕನ್ನಡ ಕಡ್ಡಾಯ ಮಾಡಿದ್ದ ರಾಜ್ಯ ಸರ್ಕಾರದ ಆದೇಶಕ್ಕೆ ತಡೆ ನೀಡಿದ ಕರ್ನಾಟಕ ಹೈಕೋರ್ಟ್‌

ಅರ್ಜಿದಾರರ ಕೋರಿಕೆ: ಎನ್‌ಇಸಿ ನಿಯಮಗಳ ನಿಯಮ 6(1) ಅಸಾಂವಿಧಾನಿಕ ಎಂದು ಘೋಷಿಸಬೇಕು. ಅಂತೆಯೇ ಎನ್‌ಒಸಿ ನಿಯಮಗಳು ಸಿಬಿಎಸ್‌ಇ ಮತ್ತು ಸಿಐಎಸ್‌ಸಿಇ ಮಾನ್ಯತೆ ಪಡೆದ ಶಾಲೆಗಳಿಗೆ ಅನ್ವಯಿಸುವುದಿಲ್ಲ ಎಂದು ಘೋಷಿಸಬೇಕು. ಇದಕ್ಕೆ ಪರ್ಯಾಯವಾಗಿ ಎನ್‌ಒಸಿ ನಿಯಮಗಳ ನಿಯಮ 6(2) ಅನ್ನು ಅಸಾಂವಿಧಾನಿಕ ಎಂದು ಘೋಷಿಸಬೇಕು. ಆಕ್ಷೇಪಾರ್ಹವಾದ ಕಾಯಿದೆ ಮತ್ತು ನಿಯಮಗಳು ಸಿಬಿಎಸ್‌ಇ ಮತ್ತು ಸಿಐಎಸ್‌ಸಿಇ ಮಾನ್ಯತೆ ಪಡೆದ ಶಾಲೆಗಳಿಗೆ ಅನ್ವಯಿಸುವುದಿಲ್ಲ ಎಂದು ಘೋಷಿಸಬೇಕು. ಸಿಬಿಎಸ್‌ಇ ಮತ್ತು ಸಿಐಎಸ್‌ಸಿಇ ಮಾನ್ಯತೆ ಪಡೆದ ಶಾಲೆಗಳಲ್ಲಿ ಆಕ್ಷೇಪಾರ್ಹ ಕಾಯಿದೆ ಮತ್ತು ನಿಯಮ ಜಾರಿ ಮಾಡದಂತೆ ಪ್ರತಿವಾದಿಗಳಿಗೆ ನಿರ್ದೇಶಿಸಬೇಕು. ಮೊದಲೆರಡು ಕೋರಿಕೆಗಳನ್ನು ಮನ್ನಿಸದಿದ್ದರೆ ಕನ್ನಡ ಭಾಷಾ ಕಲಿಕಾ ಕಾಯಿದೆ 2015ರ ನಿಯಮ 3, ಕನ್ನಡ ಭಾಷಾ ಕಲಿಕಾ ನಿಯಮಗಳು 2017ರ ನಿಯಮ 3 ಸಂವಿಧಾನದ 14ನೇ ವಿಧಿ ಉಲ್ಲಂಘಿಸುವುದರಿಂದ ಅವುಗಳನ್ನು ಅಸಾಂವಿಧಾನಿಕ ಎಂದು ಘೋಷಿಸಬೇಕು ಎಂದು ಕೋರಲಾಗಿದೆ.

Related Stories

No stories found.
Kannada Bar & Bench
kannada.barandbench.com