ನಾಮಫಲಕಗಳ ಮೇಲ್ಭಾಗದಲ್ಲಿ ಶೇ. 60ರಷ್ಟು ಕನ್ನಡ ಬಳಕೆ ಮಾಡುವ ಸಂಬಂಧ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ (ತಿದ್ದುಪಡಿ ವಿಧೇಯಕ) 2024 ಅನ್ನು ವಿಧಾನಸಭೆಯಲ್ಲಿ ಮಂಗಳವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಮಂಡಿಸಿದ್ದಾರೆ.
ಕನ್ನಡ ನಾಮಫಲಕ ಹಾಕುವ ಸಂಬಂಧ ಈಚೆಗೆ ಕನ್ನಡ ಪರ ಸಂಘಟನೆಗಳು ಮತ್ತು ವಾಣಿಜ್ಯೋದ್ಯಮ ಸಂಸ್ಥೆಗಳ ನಡುವೆ ಸಂಘರ್ಷ ನಡೆದಿರುವ ಬೆಳವಣಿಗೆಯ ನಡುವೆ ರಾಜ್ಯ ಸರ್ಕಾರವು ಕಾಯಿದೆ ತಿದ್ದುಪಡಿ ತಂದಿದೆ.
ಈ ಸಂಬಂಧದ ರಾಜ್ಯಮಟ್ಟದ ಸಮಿತಿಗೆ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ನಿರ್ದೇಶಕರನ್ನು ಸದಸ್ಯರನ್ನಾಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಯನ್ನು ಸಂಚಾಲಕರನ್ನಾಗಿ ನೇಮಿಸಲಾಗುತ್ತದೆ. ವಾಣಿಜ್ಯ, ಕೈಗಾರಿಕೆ ಮತ್ತು ವ್ಯವಹಾರ ಉದ್ಯಮ, ಟ್ರಸ್ಟ್, ಸಮಾಲೋಚನಾ ಕೇಂದ್ರ, ಆಸ್ಪತ್ರೆ, ಪ್ರಯೋಗಾಲಯ, ಮನೋರಂಜನಾ ಕೇಂದ್ರ, ಹೋಟೆಲ್‌ಗಳು ತಮ್ಮ ನಾಮಫಲಕದಲ್ಲಿ ಶೇ. 60ರಷ್ಟು ಕನ್ನಡ ಭಾಷೆ ಬಳಕೆ ಮತ್ತು ಕನ್ನಡವನ್ನು ನಾಮಫಲಕದ ಮೇಲ್ಭಾಗದಲ್ಲಿ ಪ್ರದರ್ಶಿಸುವುದನ್ನು ಖಚಿತಪಡಿಸಲು ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ 2022ಕ್ಕೆ ತಿದ್ದುಪಡಿ ತರಲಾಗಿದೆ.
ರಾಜ್ಯ ಸರ್ಕಾರದ ಇಲಾಖೆ, ಉದ್ಯಮ ಅಥವಾ ಸ್ವಾಯತ್ತ ಸಂಸ್ಥೆ, ಸಹಕಾರ ಮತ್ತು ಸಾರ್ವಜನಿಕ ಉದ್ಯಮ, ಶೈಕ್ಷಣಿಕ ಸಂಸ್ಥೆ, ಬ್ಯಾಂಕ್, ಇತರೆ ಹಣಕಾಸು ಸಂಸ್ಥೆ, ಖಾಸಗಿ ಕೈಗಾರಿಕೆ ಮತ್ತು ವಿಶ್ವವಿದ್ಯಾಲಯ ಫಲಕಗಳಲ್ಲಿರುವ ಹೆಸರು, ಅಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳ ಹೆಸರು, ಪದನಾಮ ಸೂಚಿಸುವ ಫಲಕಗಳಲ್ಲಿ ಪ್ರಮುಖವಾಗಿ ಕನ್ನಡ ಇರಬೇಕು.
ರಸ್ತೆ ಮತ್ತು ಬಡಾವಣೆಯ ಹೆಸರು ಸೇರಿ ರಾಜ್ಯದ ವಿವಿಧ ಸರ್ಕಾರಿ ಇಲಾಖೆ ಮತ್ತು ಸ್ಥಳೀಯ ಪ್ರಾಧಿಕಾರಗಳ ಮೇಲ್ವಿಚಾರಣೆಯಲ್ಲಿ ಹಾಕಲಾಗಿರುವ ಫಲಕಗಳ ಮೇಲೆ ಪ್ರದರ್ಶಿಸಲಾಗುವ ವಿವರ ಕನ್ನಡದಲ್ಲಿ ಇರಬೇಕು.
ರಾಜ್ಯ ಸರ್ಕಾರ, ಸ್ಥಳೀಯ ಪ್ರಾಧಿಕಾರ ಪ್ರಕಟಣೆಗಾಗಿ ಹೊರಡಿಸಿದ ಎಲ್ಲಾ ಟೆಂಡರ್ ಅಧಿಸೂಚನೆ, ಜಾಹೀರಾತು, ಅರ್ಜಿ ನಮೂನೆ, ಡಿಜಿಟಲ್ ನಮೂನೆ, ಪ್ರಮಾಣ ಪತ್ರ ಮತ್ತು ಅಧಿಸೂಚನೆ ಕನ್ನಡದಲ್ಲಿ ಇರಬೇಕು.
ಸರ್ಕಾರ, ಸ್ಥಳೀಯ ಪ್ರಾಧಿಕಾರ, ಅನುದಾನಿತ ಅಥವಾ ಅನುದಾನರಹಿತ ಸಂಸ್ಥೆಗಳು ನಡೆಸುವ ಕಾರ್ಯಕ್ರಮ ಕುರಿತ ಕರಪತ್ರ, ಬ್ಯಾನರ್, ಫ್ಲೆಕ್ಸು, ಎಲೆಕ್ಟ್ರಾನಿಕ್ ಪ್ರದರ್ಶನ ಫಲಕ, ಮಾಹಿತಿ, ನೋಟಿಸ್ ಇತ್ಯಾದಿಗಳು ಕನ್ನಡದಲ್ಲಿರಬೇಕು.
ಸರ್ಕಾರ ಕೈಗೊಂಡ ಅಥವಾ ಸರ್ಕಾರ ಅಥವಾ ಸಂಬಂಧಿತ ಸಂಸ್ಥೆ ಅಥವಾ ಸ್ಥಳೀಯ ಪ್ರಾಧಿಕಾರ ಯಾವುದೇ ರೀತಿಯ ಪ್ರತಿಫಲ, ಅನುದಾನ, ರಿಯಾಯಿತಿ ಪಡೆದು ಅನುಷ್ಠಾನಗೊಳಿಸುತ್ತಿರುವ ಯಾವುದೇ ಯೋಜನೆಗೆ ಸಂಬಂಧಿಸಿದ ಫಲಕ, ಜಾಹೀರಾತು, ರಸೀದಿ, ಬಿಲ್, ನೋಟಿಸ್ ಇತ್ಯಾದಿ ಕನ್ನಡದಲ್ಲಿರಬೇಕು.
ಸರ್ಕಾರ, ಸ್ಥಳೀಯ ಪ್ರಾಧಿಕಾರದ ಅನುಮೋದನೆ ಮತ್ತು ಮಂಜೂರಾತಿಯೊಂದಿಗೆ ಕಾರ್ಯನಿರ್ವಹಿಸುತ್ತಿರುವ ವಾಣಿಜ್ಯ, ಕೈಗಾರಿಕೆ ಮತ್ತು ವ್ಯಾಪಾರ ಸಂಸ್ಥೆ, ನ್ಯಾಸ, ಸಮಾಲೋಚನಾ ಕೇಂದ್ರ, ಆಸ್ಪತ್ರೆ, ಪ್ರಯೋಗಾಲಯ, ಮನೋರಂಜನಾ ಕೇಂದ್ರ ಮತ್ತು ಹೋಟೆಲ್ ಹೆಸರನ್ನು ಪ್ರದರ್ಶಿಸುವ ಫಲಕಗಳ ಮೇಲಿನ ಅರ್ಧ ಭಾಗವು ಕನ್ನಡದಲ್ಲಿ ಇರತಕ್ಕದ್ದು ಮತ್ತು ಕೆಳಗಿನ ಅರ್ಧ ಭಾಗವು ಬೇರೆ ಭಾಷೆಯಲ್ಲಿ ಇರಬಹುದು.
ಸಾಧ್ಯವಾದಷ್ಟರ ಮಟ್ಟಿಗೆ ರಾಜ್ಯದೊಳಗೆ ತಯಾರಿಸಿದ ಮತ್ತು ಮಾರಾಟವಾಗುವ ಎಲ್ಲಾ ಕೈಗಾರಿಕಾ ಮತ್ತು ಇತರ ಗ್ರಾಹಕ ಉತ್ಪನ್ನಗಳ ಹೆಸರು ಮತ್ತು ಅವುಗಳ ಬಳಕೆಯ ಕುರಿತಾದ ನಿರ್ದೇಶನಗಳು ಯಾವುದಾದರೂ ಇದ್ದಲ್ಲಿ ಇತರೆ ಭಾಷೆಯ ಜೊತೆಗೆ ಕನ್ನಡದಲ್ಲಿರಬೇಕು.
ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾದ ಜಾಹೀರಾತು ಮತ್ತು ಸೂಚನೆಗಳನ್ನು ಪ್ರದರ್ಶಿಸುವ ಎಲ್ಲಾ ಫಲಕಗಳಲ್ಲಿ ವಿಷಯ ನಿಗದಿತ ಶೇಕಡಾವಾರು ಪ್ರಮಾಣವು ಕನ್ನಡ ಭಾಷೆಯಲ್ಲಿರಬೇಕು. ಜಾಹೀರಾತು ವರ್ಗೀಕರಣ ಮತ್ತು ಕನ್ನಡದಲ್ಲಿ ಪ್ರದರ್ಶಿಸಬೇಕಾದ ಜಾಹೀರಾತು ವಿಷಯ ಶೇಕಡಾವಾರು ಪ್ರಮಾಣ ಸರ್ಕಾರದ ನಿಯಮದಂತೆ ಇರಬೇಕು.
ರಾಜ್ಯದಲ್ಲಿ 100ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ರಾಜ್ಯ ಮತ್ತ ಕೇಂದ್ರ ಸರ್ಕಾರದ ಒಡೆತನದ ಪ್ರತಿಯೊಂದು ಕೈಗಾರಿಕಾ ಸಂಸ್ಥೆ, ಸಾರ್ವಜನಿಕ ವಲಯ ಉದ್ಯಮ, ಬ್ಯಾಂಕ್ ಮತ್ತು ಖಾಸಗಿ ಕೈಗಾರಿಕೆಗಳು ದಿನನಿತ್ಯದ ಕಾರ್ಯ ನಿರ್ವಹಣೆಗೆ ಕನ್ನಡ ಭಾಷಾ ಬಳಕೆಯ ಉದ್ದೇಶಕ್ಕಾಗಿ ಕನ್ನಡ ಜ್ಞಾನ ಹೊಂದಿರುವ ಸಂಸ್ಥೆಯ ಹಿರಿಯ ಉದ್ಯೋಗಿ ನೇತೃತ್ವದಲ್ಲಿ ಕನ್ನಡ ಕೋಶ ಸ್ಥಾಪಿಸಬೇಕು. ಕನ್ನಡ ಭಾಷೆ ಮಾತನಾಡಲು ಬಾರದಿರುವ ಉದ್ಯೋಗಿಗಳಿಗೆ ವ್ಯಾವಹಾರಿಕ ಕನ್ನಡ ಭಾಷೆ ಪರಿಚಯಿಸಲು ಕನ್ನಡ ಕಲಿಕಾ ಘಟಕ (ಪ್ರಾಥಮಿಕ ಕನ್ನಡ ಬೋಧನಾ ಘಟಕ) ಸ್ಥಾಪಿಸಬೇಕು. ಸಂಸ್ಥೆಗಳ ಕೋರಿಕೆಯ ಮೇರೆಗೆ ಸರ್ಕಾರವು ಸಂಸ್ಥೆಯ ಖರ್ಚಿನಲ್ಲಿ ಅಗತ್ಯ ಬೋಧಕ ಸಿಬ್ಬಂದಿ ಮತ್ತು ಕಲಿಕಾ ಸಾಮಗ್ರಿ ಒದಗಿಸಬೇಕು.
ರಾಜ್ಯದಲ್ಲಿನ ಬ್ಯಾಂಕ್ ಮತ್ತು ಇತರೆ ಹಣಕಾಸು ಸಂಸ್ಥೆಗಳಲ್ಲಿನ ಉದ್ಯೋಗಿಗಳು ಸಾರ್ವಜನಿಕರೊಂದಿಗಿನ ಸಂಪರ್ಕ ಮತ್ತು ಪತ್ರ ವ್ಯವಹಾರದಲ್ಲಿ ಕನ್ನಡ ಬಳಸಬೇಕು.