
ಕಾಂವಡ್ ಯಾತ್ರೆಯ ಸಂದರ್ಭದಲ್ಲಿ ಹೋಟೆಲ್ ಮಾಲೀಕರು ತಮ್ಮ ಹೆಸರು ಮತ್ತು ವಿವರಗಳನ್ನು ಕ್ಯೂ ಆರ್ ಕೋಡ್‌ಗಳ ಮೂಲಕ ಪ್ರದರ್ಶಿಸಬೇಕು ಎಂದು ಉತ್ತರ ಪ್ರದೇಶ ಸರ್ಕಾರ ನೀಡಿರುವ ನಿರ್ದೇಶನ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ [ ಅಪೂರ್ವಾನಂದ್ ಝಾ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].
ಕಳೆದ ವರ್ಷ ಜುಲೈನಲ್ಲಿ ಸುಪ್ರೀಂ ಕೋರ್ಟ್ ತಡೆಹಿಡಿದಿದ್ದ ಇಂತಹ ತಾರತಮ್ಯದ ಧೋರಣೆಯನ್ನೇ ಸರ್ಕಾರ ಮತ್ತೆ ಚಾಲ್ತಿಗೆ ತಂದಿದೆ ಎಂದು ಅರ್ಜಿ ದೂರಿದೆ.
ಅಂಗಡಿ ಮಾಲೀಕರ ಧಾರ್ಮಿಕ ಅಸ್ಮಿತೆಯನ್ನು ಬಹಿರಂಗಪಡಿಸುವ ಮತ್ತು ಮುಸ್ಲಿಂ ಹೋಟೆಲ್ ಮಾಲೀಕರ ವಿರುದ್ಧ ತಾರತಮ್ಯಕ್ಕೆ ಎಡೆ ಮಾಡಿಕೊಡುವ ಉದ್ದೇಶವನ್ನು ಸರ್ಕಾರದ ಈ ಕ್ರಮ ಹೊಂದಿದೆ ಎಂದು ಕಳವಳ ವ್ಯಕ್ತಪಡಿಸಿ ಸರ್ಕಾರದ ಆದೇಶಕ್ಕೆ ಸುಪ್ರೀಂ ಕೋರ್ಟ್ ಕಳೆದ ವರ್ಷ ತಡೆ ನೀಡಿತ್ತು.
ದೆಹಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅಪೂರ್ವಾನಂದ್ ಝಾ ಮತ್ತು ಸಾಮಾಜಿಕ ಕಾರ್ಯಕರ್ತ ಆಕಾರ್ ಪಟೇಲ್ ಅವರು ಅರ್ಜಿ ಸಲ್ಲಿಸಿದ್ದಾರೆ. ಜುಲೈ 22, 2024ರಂದೇ ಸರ್ಕಾರದ ಇಂತಹದ್ದೇ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿತ್ತು. ಜುಲೈ 26, 2024ರಂದು ತಡೆಯಾಜ್ಞೆಯನ್ನು ವಿಸ್ತರಿಸಲಾಗಿತ್ತು. ಆದರೂ ಈ ಬಾರಿ ಕ್ಯೂ ಆರ್ ಕೋಡ್ ಮುಖೇನ ಅಂಗಡಿ ಮಾಲೀಕರು ತಮ್ಮ ವಿವರ ಪ್ರದರ್ಶಿಸಬೇಕು ಎಂದು ಉತ್ತರ ಪ್ರದೇಶ ಸರ್ಕಾರ ಮತ್ತು ಸ್ಥಳೀಯ ಅಧಿಕಾರಿಗಳು ನಿರ್ದೇಶನ ನೀಡುವ ಮೂಲಕ ಸುಪ್ರೀಂ ಕೋರ್ಟ್ ಹೊರಡಿಸಿದ್ದ ತಡೆಯಾಜ್ಞೆಯನ್ನು ಉಲ್ಲಂಘಿಸಲಾಗಿದೆ ಎಂದು ಅರ್ಜಿ ಆರೋಪಿಸಿದೆ.
ಡಿಜಿಟಲ್ ವಿಧಾನದ ಮೂಲಕ ಅಸಾಂವಿಧಾನಿಕ ಉದ್ದೇಶ ಈಡೇರಿಸಿಕೊಳ್ಳಲು ಯತ್ನಿಸುತ್ತಿರುವುದು ಸುಪ್ರೀಂ ಕೋರ್ಟ್ ಆದೇಶದ ಉಲ್ಲಂಘನೆಯಾಗಿದೆ. ಅಲ್ಪಸಂಖ್ಯಾತ ಧಾರ್ಮಿಕ ಸಮುದಾಯಗಳ ಅಂಗಡಿಯವರನ್ನೇ ಗುರಿಯಾಗಿಸಿಕೊಂಡು ಎಸಗುವ ಕೋಮು ತಾರತಮ್ಯ ಕೊನೆಗಾಣಿಸಲು ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಬೇಕು ಎಂದು ಅರ್ಜಿ ಹೇಳಿದೆ.
ಅಂಗಡಿ ಮಾಲೀಕರು ಸುನ್ನತಿ ಮಾಡಿಸಿಕೊಂಡಿದ್ದಾರೆಯೇ ಎಂದು ಅರಿಯುವುದಕ್ಕಾಗಿ ಅವರ ವಸ್ತ್ರಗಳನ್ನು ಬಿಚ್ಚಿಸುವಂತಹ, ಆಧಾರ್ ಕಾರ್ಡ್ ಪರಿಶೀಲಿಸುವಂತಹ ಬಲವಂತದ ಕೃತ್ಯಗಳು ಈ ಬಾರಿಯ ಯಾತ್ರೆ ವೇಳೆ ನಡೆದಿವೆ ಎಂದು ಪತ್ರಿಕಾ ವರದಿಗಳನ್ನು ಉಲ್ಲೇಖಿಸಿ ಅರ್ಜಿ ಆತಂಕ ವ್ಯಕ್ತಪಡಿಸಿದೆ. ಇಂತಹ ಕ್ರಮಗಳು ನ್ಯಾಯಾಲಯ ಈ ಹಿಂದೆ ನೀಡಿದ್ದ ತಡೆಯಾಜ್ಞೆಗೆ ಧಕ್ಕೆ ತರುವುದಷ್ಟೇ ಅಲ್ಲದೆ ನಾಗರಿಕರ ಮೂಲಭೂತ ಹಕ್ಕುಗಳು ಮತ್ತು ಘನತೆಗೂ ಮಾರಕ ಎಂದು ಅದು ಹೇಳಿದೆ.
ನ್ಯಾಯಮೂರ್ತಿಗಳಾದ ಎಂ ಎಂ ಸುಂದರೇಶ್ ಮತ್ತು ಎನ್ ಕೆ ಸಿಂಗ್ ಅವರನ್ನೊಳಗೊಂಡ ಪೀಠ ಮುಂದಿನ ವಾರ ಅರ್ಜಿಯ ವಿಚಾರಣೆ ನಡೆಸುವ ಸಾಧ್ಯತೆಯಿದೆ.