'ಬಿಜೆಪಿ ವರ್ಸಸ್ ಬಿಜೆಪಿʼ ಪ್ರಕರಣದಲ್ಲಿ ಸುಬ್ರಮಣಿಯನ್ ಸ್ವಾಮಿ ಪರ ವಾದ ಮಂಡಿಸಲಿದ್ದಾರೆ ಕಪಿಲ್ ಸಿಬಲ್!

ನ್ಯಾಷನಲ್ ಹೆರಾಲ್ಡ್, ರಾಮ ಜನ್ಮಭೂಮಿ ಸೇರಿದಂತೆ ಹಲವು ಪ್ರಕರಣಗಳಲ್ಲಿ ಕಪಿಲ್ ಸಿಬಲ್ ಮತ್ತು ಸುಬ್ರಮಣಿಯನ್ ಸ್ವಾಮಿ ಪರಸ್ಪರ ಮುಖಾಮುಖಿಯಾಗಿ ಕಾನೂನು ಸೆಣಸಾಟ ನಡೆಸಿದ್ದಾರೆ.
Kapil Sibal, Subramanian Swamy and Tajinder Bagga
Kapil Sibal, Subramanian Swamy and Tajinder Bagga
Published on

ಕುತೂಹಲಕಾರಿ ವಿದ್ಯಮಾನವೊಂದರಲ್ಲಿ ಬಿಜೆಪಿ ನಾಯಕ ತಜಿಂದರ್ ಪಾಲ್ ಸಿಂಗ್ ಬಗ್ಗಾ ವಿರುದ್ಧ ಅದೇ ಪಕ್ಷದ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಹೂಡಿದ್ದ ಪ್ರಕರಣದಲ್ಲಿ  ಕಾಂಗ್ರೆಸ್‌ ಮಾಜಿ ನಾಯಕ ಮತ್ತು ಹಿರಿಯ ವಕೀಲ ಕಪಿಲ್‌ ಸಿಬಲ್‌ ಅವರು ವಾದ ಮಂಡಿಸಲಿದ್ದಾರೆ ಎಂದು ದೆಹಲಿ ಹೈಕೋರ್ಟ್‌ಗೆ ಇಂದು ತಿಳಿಸಲಾಗಿದೆ.

ಸ್ವಾಮಿಯವರು ತನ್ನ ವಿರುದ್ಧ ಸುಳ್ಳು ಮಾಹಿತಿಯ ಟ್ವೀಟ್‌ ಮಾಡಿದ್ದರು ಎನ್ನುವುದು ಬಗ್ಗಾ ಅವರ ಆರೋಪ. ತಾನು ಬಿಜೆಪಿ ಸೇರುವ ಮುನ್ನ ಹಲವು ಬಾರಿ ಜೈಲುವಾಸ ಅನುಭವಿಸಿದ್ದೆ ಎಂದು ಆರೋಪಿಸಿ "ಸುಳ್ಳು ಹಾಗೂ ತಪ್ಪಾದ ಟ್ವೀಟ್‌ʼ'ಅನ್ನು ಸ್ವಾಮಿ ಮಾಡಿದ್ದರು. ಟ್ವಿಟರ್‌ನಲ್ಲಿ ಸುಮಾರು 1 ಕೋಟಿಗೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಸ್ವಾಮಿ ಅವರು ತನ್ನ ವಿರುದ್ಧ ಸುಳ್ಳು ಮಾಹಿತಿ ಹಂಚಿಕೊಂಡಿದ್ದರು ಎಂದು ಬಗ್ಗ ಸ್ವಾಮಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಸುಬ್ರಮಣಿಯನ್‌ ಸ್ವಾಮಿ ಅವರಿಗೆ ಸಮನ್ಸ್ ಜಾರಿ ಮಾಡಿತ್ತು. ಸ್ವಾಮಿ ಅವರು ಹೈಕೋರ್ಟ್‌ನಲ್ಲಿ ಅದನ್ನು ಪ್ರಶ್ನಿಸಿದ್ದರು. ಏಪ್ರಿಲ್ 4, 2022 ರಂದು, ಹೈಕೋರ್ಟ್ ಸಮನ್ಸ್‌ಗೆ ತಡೆ ನೀಡಿತ್ತು.

ನ್ಯಾಯಮೂರ್ತಿ ದಿನೇಶ್ ಕುಮಾರ್ ಶರ್ಮಾ ಅವರು ಇಂದು ಈ ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಂಡಾಗ, ಸ್ವಾಮಿ ಪರ ವಕೀಲ ಸತ್ಯ ಸಬರ್ವಾಲ್ ವಾದ ಮಂಡಿಸಿ ಹಿರಿಯ ವಕೀಲ ಕಪಿಲ್ ಸಿಬಲ್ ಸ್ವಾಮಿ ಅವರನ್ನು ಪ್ರತಿನಿಧಿಸಲಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ವಿಶೇಷ ಎಂದರೆ ನ್ಯಾಷನಲ್‌ ಹೆರಾಲ್ಡ್, ರಾಮ ಜನ್ಮಭೂಮಿ ಸೇರಿದಂತೆ ಹಲವು ಪ್ರಕರಣಗಳಲ್ಲಿ ಕಪಿಲ್‌ ಸಿಬಲ್‌ ಮತ್ತು ಸುಬ್ರಮಣಿಯನ್‌ ಸ್ವಾಮಿ ಮುಖಾಮುಖಿಯಾಗಿ ಕಾನೂನು ಸೆಣಸಾಟ ನಡೆಸಿದ್ದಾರೆ.

Kannada Bar & Bench
kannada.barandbench.com