ಆರ್ ಜಿ ಕರ್ ಪ್ರಕರಣದಲ್ಲಿ ವಾದಿಸುತ್ತಿರುವ ವಕೀಲೆಯರಿಗೆ ಅತ್ಯಾಚಾರ ಬೆದರಿಕೆ: ಸುಪ್ರೀಂ ಕೋರ್ಟ್‌ನಲ್ಲಿ ಸಿಬಲ್ ಆತಂಕ
ಕೊಲ್ಕತ್ತಾದ ಸರ್ಕಾರಿ ಸ್ವಾಮ್ಯದ ಆರ್ ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ಸ್ಥಾನಿಕ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ಪಶ್ಚಿಮ ಬಂಗಾಳ ಸರ್ಕಾರದ ಪರ ವಾದ ಮಂಡಿಸುತ್ತಿರುವ ತಮ್ಮ ಕಚೇರಿಯ ಮಹಿಳಾ ವಕೀಲರಿಗೆ ಅತ್ಯಾಚಾರ ಮತ್ತು ದೈಹಿಕ ಹಲ್ಲೆ ನಡೆಸುವುದಾಗಿ ಬೆದರಿಕೆ ಒಡ್ಡಲಾಗುತ್ತಿದೆ ಎಂದು ಹಿರಿಯ ವಕೀಲ ಕಪಿಲ್ ಸಿಬಲ್ ಮಂಗಳವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ [ಕೊಲ್ಕತ್ತಾದ ಸರ್ಕಾರಿ ಸ್ವಾಮ್ಯದ ಆರ್ ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ಸ್ಥಾನಿಕ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆ ಹಾಗೂ ಸಂಬಂಧಿತ ಪ್ರಕರಣಗಳ ಸ್ವಯಂ ಪ್ರೇರಿತ ವಿಚಾರಣೆ].
ಸಿಬಲ್ ತಮ್ಮ ಕಚೇರಿಯ ಕಿರಿಯ ವಕೀಲರ ಸುರಕ್ಷತೆ ಬಗ್ಗೆ ಸಿಜೆಐ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠದೆದುರು ಕಳವಳ ವ್ಯಕ್ತಪಡಿಸಿದರು.
“ನನ್ನ ಕಚೇರಿಯ ಮಹಿಳೆಯರಿಗೆ ಬೆದರಿಕೆ ಒಡ್ಡಲಾಗಿದ್ದು ನಂತರ ನಾನು ನಗುತ್ತಿರುವಂತಹ ಪೋಸ್ಟ್‌ಗಳನ್ನು ಹಾಕಲಾಗಿದೆ. ನಾನು ಯಾವಾಗ ನಕ್ಕೆ? ಅವರ ಮೇಲೆ ಆಸಿಡ್ ದಾಳಿ ನಡೆಸಲಾಗುವುದು ಅತ್ಯಾಚಾರ ಎಸಗಲಾಗುವುದು ಎಂದು ಹೇಳಲಾಗುತ್ತಿದೆ. ಸಾಮಾನ್ಯ ಜನರು ಇದನ್ನು ಹೇಳುತ್ತಿದ್ದಾರೆ” ಎಂದು ಆತಂಕ ವ್ಯಕ್ತಪಡಿಸಿದರು.
ಈ ಬೆಳವಣಿಗೆಗಳ ಬಗ್ಗೆ ನನಗೆ ಬಹಳ ಕಳವಳವಿದೆ. ಹೀಗಾದರೆ 50 ವರ್ಷಗಳಿಂದ ವಕೀಲರು ಕಷ್ಟಪಟ್ಟು ಗಳಿಸಿದ ಹೆಸರು ರಾತ್ರೋರಾತ್ರಿ ನಾಶವಾಗುತ್ತದೆ. ಆರೋಪಿಗಳ ಪರ ನಾವು ವಾದಿಸದೆ ರಾಜ್ಯ ಸರ್ಕಾರದ ಪರ ವಾದಿಸುತ್ತಿದ್ದೇವೆ. ಸ್ವಪ್ನಿಲ್ ತ್ರಿಪಾಠಿ ಪ್ರಕರಣದಲ್ಲಿ ಇಂತಹ ಪ್ರಕರಣಗಳನ್ನು ನೇರ ಪ್ರಸಾರ ಮಾಡಬಾರದು ಎಂದು ಹೇಳಲಾಗಿದೆ. ಹೀಗಾಗಿ ಪ್ರಕರಣದ ನೇರ ಪ್ರಸಾರವನ್ನು ಸ್ಥಗಿತಗೊಳಿಸಬೇಕು ಎಂದರು.
ಯಾವುದೇ ಪುರುಷ ಅಥವಾ ಮಹಿಳೆಗೆ ಬೆದರಿಕೆ ಎದುರಾಗಿದ್ದರೆ ತಾನು ಮಧ್ಯಪ್ರವೇಶಿಸುವುದಾಗಿ ನ್ಯಾಯಾಲಯ ಭರವಸೆ ನೀಡಿತು. ಆದರೆ ಪ್ರಕರಣದ ನೇರ ವಿಚಾರಣೆ ಸ್ಥಗಿತಗೊಳಿಸಬೇಕು ಎಂಬ ಮನವಿಯನ್ನು ಪೀಠ ತಿರಸ್ಕರಿಸಿತು. ಅದು ಸಾರ್ವಜನಿಕ ಹಿತಾಸಕ್ತಿಯ ವಿಚಾರ ಎಂದು ಸಿಜೆಐ ನುಡಿದರು.