[ಕರಗ ಉತ್ಸವ] ಮುಜರಾಯಿ ಇಲಾಖೆ ಮಧ್ಯಪ್ರವೇಶ ಅನಪೇಕ್ಷಿತ: ಹೈಕೋರ್ಟ್‌ನಲ್ಲಿ ಹಿರಿಯ ವಕೀಲರ ವಾದ

ಸ್ಥಳೀಯ ರಾಜಕಾರಣಿಗಳ ಪ್ರತಿಷ್ಠೆ ಮತ್ತು ಕೆಲವು ಮುಖಂಡರ ಮೂಗು ತೂರಿಸುವಿಕೆಯಿಂದಾಗಿ ಪ್ರತಿಬಾರಿಯೂ ಕರಗ ಹೊರುವ ವಿಚಾರದಲ್ಲಿ ಕಾನೂನು ಸುವ್ಯವಸ್ಥೆಯ ನೆಪ ಒಡ್ಡಲಾಗುತ್ತಿದೆ ಎಂದು ಆಕ್ಷೇಪಿಸಿದ ಹಿರಿಯ ವಕೀಲ ಶ್ಯಾಮ್‌ಸುಂದರ್.‌
Karnataka High Court
Karnataka High Court
Published on

ಮುಜರಾಯಿ ಇಲಾಖೆಯು, ಧಾರ್ಮಿಕ ಪರಿಷತ್‌ ಮುಖಾಂತರ ಹಿಂದೂ ಸಂಪ್ರದಾಯ ಪದ್ಧತಿಗಳ ಆಚರಣೆಯಲ್ಲಿ ಮೂಗು ತೂರಿಸುವುದು ಸ್ಥಳೀಯರ ಧಾರ್ಮಿಕ ನಂಬಿಕೆ ಮತ್ತು ಹಕ್ಕುಗಳಿಗೆ ಚ್ಯುತಿ ಉಂಟು ಮಾಡಿದಂತೆ ಎಂದು ಕರಗ ವಿಚಾರಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಅರ್ಜಿದಾರರ ಪರ ಹಿರಿಯ ವಕೀಲರು ಕರ್ನಾಟಕ ಹೈಕೋರ್ಟ್‌ನಲ್ಲಿ ಬುಧವಾರ ಆಕ್ಷೇಪಿಸಿದರು.

ಬೆಂಗಳೂರಿನ ದೇವನಹಳ್ಳಿ ತಾಲ್ಲೂಕು ಚನ್ನರಾಯಪಟ್ಟಣ ಹೋಬಳಿ ಬೂದಿಗೆರೆಯ ಶ್ರೀ ಧರ್ಮರಾಯ ಸ್ವಾಮಿ ಮತ್ತು ದ್ರೌಪದಮ್ಮ ದೇವಸ್ಥಾನ ಸೇವಾ ಟ್ರಸ್ಟ್‌ ಅಧ್ಯಕ್ಷ ಪಿ ರವಿಕುಮಾರ್‌ ಸೇರಿದಂತೆ ಮೂಲ ವಹ್ನಿಕುಲ ಕ್ಷತ್ರಿಯ ಸಮುದಾಯದ ಇತರರು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಬುಧವಾರ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ಹೈಕೋರ್ಟ್‌ ಹಿರಿಯ ವಕೀಲ ಎಂ ಶ್ಯಾಮಸುಂದರ್‌ ಅವರು “ಸ್ಥಳೀಯ ರಾಜಕಾರಣಿಗಳ ಪ್ರತಿಷ್ಠೆ ಮತ್ತು ಕೆಲವು ಮುಖಂಡರ ಮೂಗು ತೂರಿಸುವಿಕೆಯಿಂದಾಗಿ ಪ್ರತಿಬಾರಿಯೂ ಕರಗ ಹೊರುವ ವಿಚಾರದಲ್ಲಿ ಕಾನೂನು ಸುವ್ಯವಸ್ಥೆಯ ನೆಪ ಒಡ್ಡಲಾಗುತ್ತಿದೆ. ವಾಸ್ತವದಲ್ಲಿ ಧಾರ್ಮಿಕ ಆಚರಣೆಗಳು ಸ್ಥಳೀಯರ ನಂಬಿಕೆ ಮತ್ತು ಪದ್ಧತಿಗೆ ಅನುಗುಣವಾಗಿ ನಡೆಯುತ್ತವೆ. ಇದರಲ್ಲಿ ಮುಜರಾಯಿ ಇಲಾಖೆ ಅಥವಾ ಆಡಳಿತಾಂಗ ಮಧ್ಯಪ್ರವೇಶಿಸುವುದು ಅನಪೇಕ್ಷಿತ” ಎಂದರು.

“ವಂಶಪಾರಂಪರ್ಯ ಅರ್ಚಕರಾದ ಅರ್ಜಿದಾರ ಗಣೇಶಪ್ಪ ಮತ್ತು ಡಿ ವಿ ಕೆ ವೆಂಕಟೇಶಪ್ಪ ಅಲಿಯಾಸ್‌ ವೆಂಕಟೇಶ್‌ ಅವರು ಮಾರ್ಚ್‌ 10 ಮತ್ತು 13ರಂದು ಹೊರಲಿರುವ ಕರಗಕ್ಕೆ ಯಾವುದೇ ಅಡೆತಡೆ ಉಂಟಾಗದಂತೆ ಸೂಕ್ತ ಪೊಲೀಸ್‌ ರಕ್ಷಣೆ ಒದಗಿಸಲು ನಿರ್ದೇಶಿಸಬೇಕು” ಎಂದು ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠವು “ಇಂತಹುದೆಲ್ಲವೂ ಶಾಂತಿಯುತವಾಗಿ ನಡೆಯಬೇಕಲ್ಲವೇ” ಎಂದು ಅರ್ಜಿದಾರರ ಪರ ವಕೀಲರನ್ನು ಪ್ರಶ್ನಿಸಿತಲ್ಲದೇ, “ಪ್ರಾಸಿಕ್ಯೂಷನ್‌ ಪರ ವಕೀಲರು ಅರ್ಜಿದಾರರ ಅಹವಾಲನ್ನು ಗುರುತು ಮಾಡಿಕೊಳ್ಳಬೇಕು” ಎಂದು ತಾಕೀತು ಮಾಡಿ ವಿಚಾರಣೆಯನ್ನು ಮಾರ್ಚ್‌ 7ಕ್ಕೆ ಮುಂದೂಡಿತು.

ಕರಗ ನಡೆಸುವ ವಿಚಾರದಲ್ಲಿ ಸ್ಥಳೀಯ ತಿಗಳ ವಹ್ನಿಕುಲ ಕ್ಷತ್ರಿಯ ಜನಾಂಗದ ಮೂರು ಕುಟುಂಬಗಳ ನಡುವೆ ಪರಸ್ಪರ ವೈಷಮ್ಯ ಇದ್ದು ಕರಗ ಮಹೋತ್ಸವಕ್ಕೆ ಅಡ್ಡಿಪಡಿಸಿ ಗಲಾಟೆ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ. ಇದರಿಂದ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಸಂಭವ ಇರುತ್ತದೆ ಎಂದು ಚನ್ನರಾಯಪಟ್ಟಣ ಪೊಲೀಸ್‌ ಠಾಣೆ ಸರ್ಕಲ್‌ ಇನ್‌ಸ್ಪೆಕ್ಟರ್‌ ನೀಡಿದ್ದ ದೂರಿನ ಅನುಸಾರ ದೇವನಹಳ್ಳಿ ತಾಲ್ಲೂಕು ತಹಶೀಲ್ದಾರ್‌ ಆದೇಶವೊಂದನ್ನು ಹೊರಡಿಸಿದ್ದರು. 

ಈ ಆದೇಶದಲ್ಲಿ, ಎಂಟು ತಿಂಗಳವರೆಗೆ ಶಾಂತಿ ಸುವ್ಯವಸ್ಥೆ ಕಾಯ್ದುಕೊಳ್ಳುವ ದಿಸೆಯಲ್ಲಿ ₹1 ಲಕ್ಷ ಮೊತ್ತದ ಮೊಬಲಗನ್ನು ಇರಿಸುವ ಮುಚ್ಚಳಿಕೆಯನ್ನು ಚರ ಮತ್ತು ಸ್ಥಿರ ಆಸ್ತಿ ಉಳ್ಳ ಜಾಮೀನುದಾರರಿಂದ ಭದ್ರತೆ ರೂಪದಲ್ಲಿ ಒದಗಿಸಬೇಕು. ಈ ಷರತ್ತು ನಿಭಾವಣೆಯ ದಿಸೆಯಲ್ಲಿ ಮಾರ್ಚ್‌ 4ರಂದು ನ್ಯಾಯಾಲಯದಲ್ಲಿ ಖುದ್ದು ವಿಚಾರಣೆಗೆ ಹಾಜರಾಗಬೇಕು” ಎಂದು ಅರ್ಜಿದಾರರಿಗೆ ಸೂಚಿಸಿತ್ತು. ಈ ಆದೇಶವನ್ನು ರದ್ದುಗೊಳಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

Kannada Bar & Bench
kannada.barandbench.com