
ಉದ್ಯಮಿ ದಿವಂಗತ ಸಂಜಯ್ ಕಪೂರ್ ಅವರ ₹30,000 ಕೋಟಿ ಮೌಲ್ಯದ ಆಸ್ತಿ ವ್ಯಾಜ್ಯಕ್ಕೆ ಹೊಸ ತಿರುವು ದೊರೆತಿದ್ದು, ಬಾಲಿವುಡ್ ನಟಿ ಕರಿಷ್ಮಾ ಕಪೂರ್ ಅವರ ಇಬ್ಬರು ಮಕ್ಕಳು ತಮ್ಮ ತಂದೆಯ ಆಸ್ತಿಯಲ್ಲಿ ಪಾಲು ಕೋರಿ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದಾರೆ.
ತಮ್ಮ ಮಲತಾಯಿ ಹಾಗೂ ಸಂಜಯ್ ಕಪೂರ್ ಅವರ ಮೂರನೇ ಪತ್ನಿ ಪ್ರಿಯಾ ಕಪೂರ್ ಅವರು, ಸಂಜಯ್ ಅವರ ಉಯಿಲು ಫೋರ್ಜರಿ ಮಾಡಿ ಆಸ್ತಿಗಳನ್ನುಸಂಪೂರ್ಣ ಸ್ವಾಧೀನಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಕರಿಷ್ಮಾ ಕಪೂರ್ ಅವರ ಪುತ್ರ ಹಾಗೂ ಪುತ್ರಿ ಆರೋಪಿಸಿದ್ದಾರೆ.
ಕರಿಷ್ಮಾಕಪೂರ್ ಸಂಜಯ್ ಅವರನ್ನು 2003ರಲ್ಲಿ ವರಿಸಿದ್ದರು. 2016ರಲ್ಲಿ ಅವರು ವಿಚ್ಛೇದನ ಪಡೆಯುವ ಮೂಲಕ 13 ವರ್ಷಗಳ ದಾಂಪತ್ಯ ಅಂತ್ಯಗೊಂಡಿತ್ತು. ಕಳೆದ ಜೂನ್‌ನಲ್ಲಿ ಸಂಜಯ್ ಇಂಗ್ಲೆಂಡ್‌ನಲ್ಲಿ ಅಕಾಲಿಕ ಮರಣಕ್ಕೆ ತುತ್ತಾಗಿದ್ದು ಆ ಬಳಿಕ ಸಂಜಯ್ ಅವರ ಮನೆಯಿಂದ ಪ್ರಿಯಾ ಕಪೂರ್ ನಮ್ಮನ್ನು ಅಕ್ರಮವಾಗಿ ಹೊರಗಟ್ಟಿದ್ದಾರೆ. ಎಂದು ಕರಿಷ್ಮಾ ಅವರ ಅಪ್ರಾಪ್ತ ಮಕ್ಕಳು ತಮ್ಮ ತಾಯಿಯ ಮುಖೇನ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಈ ಮೊಕದ್ದಮೆಯಲ್ಲಿ ಪ್ರಿಯಾ ಕಪೂರ್, ಅವರ ಅಪ್ರಾಪ್ತ ಮಗ, ಅವರ ತಾಯಿ ರಾಣಿ ಕಪೂರ್ ಹಾಗೂ ಉಯಿಲಿನ ನಿರ್ವಾಹಕಿ ಎಂದು ಹೇಳಲಾದ ಶ್ರದ್ಧಾ ಸೂರಿ ಮಾರ್ವಾ ಅವರನ್ನು ಪ್ರತಿವಾದಿಗಳೆಂದು ಹೆಸರಿಸಲಾಗಿದೆ. ವಿವಾದದ ಕೇಂದ್ರಬಿಂದುವಾಗಿರುವ ಮಾರ್ಚ್ 21 2025ರಂದು ಪ್ರಕಟಿಸಲಾದ ಉಯಿಲು, ಸಂಜಯ್ ಕಪೂರ್ ಅವರ ಸಂಪೂರ್ಣ ವೈಯಕ್ತಿಕ ಆಸ್ತಿ ಪ್ರಿಯಾ ಕಪೂರ್ ಅವರಿಗೆ ಸೇರಿದ್ದು ಎನ್ನುತ್ತದೆ.
ಜುಲೈ 30, 2025ರಂದು ನಡೆದ ಕೌಟುಂಬಿಕ ಸಭೆಯಲ್ಲಿ ತಮ್ಮ ಮಲತಾಯಿ ಏಳು ವಾರಗಳಿಗೂ ಹೆಚ್ಚು ಕಾಲ ದಿನೇಶ್ ಅಗರ್ವಾಲ್ ಮತ್ತು ನಿತಿನ್ ಶರ್ಮಾ ಎಂಬ ಇಬ್ಬರು ಸಹಚರರೊಂದಿಗೆ ಸಂಚು ರೂಪಿಸಿ ತಮ್ಮನ್ನು ಹತ್ತಿಕ್ಕಿದ್ದರು ಎಂದು ಮಕ್ಕಳು ದೂರಿದ್ದಾರೆ. ಈ ಉಯಿಲು ನಕಲಿ ಮತ್ತು ಕೃತ್ರಿಮತೆಯಿಂದ ಕೂಡಿದೆ ಎಂದು ಕೂಡ ವಾದಿಸಲಾಗಿದೆ.
ತಮ್ಮನ್ನು ಮೊದಲನೇ (ಕ್ಲಾಸ್ 1) ಕಾನೂನುಬದ್ಧ ಉತ್ತರಾಧಿಕಾರಿಗಳೆಂದು ಘೋಷಿಸಬೇಕು ಮತ್ತು ತಮ್ಮ ತಂದೆಯ ಆಸ್ತಿಯಲ್ಲಿ ತಲಾ ಐದನೇ ಒಂದು ಪಾಲನ್ನು ನೀಡುವ ಆಸ್ತಿ ವಿಭಜನೆ ಆದೇಶ ಹೊರಡಿಸಬೇಕು. ಮಧ್ಯಂತರ ಪರಿಹಾರವಾಗಿ, ಪ್ರಕರಣ ಬಗೆಹರಿಯುವವರೆಗೆ ಸಂಜಯ್ ಕಪೂರ್ ಅವರಿಗೆ ಸೇರಿದ ಎಲ್ಲಾ ವೈಯಕ್ತಿಕ ಆಸ್ತಿಗಳನ್ನು ಸ್ಥಗಿತಗೊಳಿಸಬೇಕು ಎಂದು ಮಕ್ಕಳು ನ್ಯಾಯಾಲಯವನ್ನು ಕೋರಿದ್ದಾರೆ.