ಬಂಧಿಗಳ ಗುರುತಿಸುವಿಕೆ ತಿದ್ದುಪಡಿ ವಿಧೇಯಕ – 2021, ದಂಡ ಪ್ರಕ್ರಿಯಾ ತಿದ್ದುಪಡಿ ಸಂಹಿತೆ ವಿಧೇಯಕ – 2021, ಬಂಧೀಖಾನೆ ಅಭಿವೃದ್ಧಿ ಮಂಡಳಿ ವಿಧೇಯಕ – 2021, ಕರ್ನಾಟಕ ಪೊಲೀಸ್ ತಿದ್ದುಪಡಿ ವಿಧೇಯಕವನ್ನು ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಶುಕ್ರವಾರ ವಿಧಾನಸಭೆಯಲ್ಲಿ ಮಂಡಿಸಿದರು. ಪಕ್ಷಾತೀತವಾಗಿ ಸಾಕಷ್ಟು ವಾದ-ಸಂವಾದದ ಬಳಿಕ ನಾಲ್ಕು ವಿಧೇಯಕಗಳನ್ನು ವಿಧಾನಸಭೆಯಲ್ಲಿ ಅಂಗೀಕರಿಸಲಾಯಿತು.
ಕೈದಿಗಳನ್ನು ಬಂಧಿಸಿದಾಗ ಅವರ ಪಾದದ ಬೆರಳನ್ನು ಗುರುತಿಸುವ ಪದ್ದತಿ ಇದೆ. ಇದಕ್ಕೆ ಬದಲಾಗಿ ತಿದ್ದುಪಡಿ ವಿಧೇಯಕದಲ್ಲಿ ಕೈದಿಯ ರಕ್ತದ ಮಾದರಿ, ಡಿಎನ್‌ಎ, ಕಣ್ಣಿನ ಪಾಪೆ, ಧ್ವನಿ ಮಾದರಿಯನ್ನು ಸಂಗ್ರಹಿಸಲು ಅವಕಾಶ ಮಾಡಿಕೊಡಲಾಗಿದೆ.
ಒಂದು ವರ್ಷದ ಶಿಕ್ಷೆಗೆ ಒಳಗಾಗುವ ಕೈದಿಗೆ ಹೀಗೆ ಮಾಡಲಾಗುತ್ತಿತ್ತು. ತಿದ್ದುಪಡಿ ವಿಧೇಯಕದಲ್ಲಿ ಒಂದು ತಿಂಗಳು ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ಶಿಕ್ಷೆಗೆ ಗುರಿಯಾಗುವವರಿಗೆ ಇದನ್ನು ಮಾಡಲಾಗುತ್ತದೆ.
ಮಾದರಿ ಸಂಗ್ರಹ ಮಾಡಲು ಮ್ಯಾಜಿಸ್ಟ್ರೇಟ್ ಅನುಮತಿ ಪಡೆಯುವ ಅವಶ್ಯಕತೆ ಇತ್ತು. ತಿದ್ದುಪಡಿ ವಿಧೇಯಕದಲ್ಲಿ ಈ ಅಧಿಕಾರವನ್ನು ಜಿಲ್ಲಾಮಟ್ಟದಲ್ಲಿ ಪೊಲೀಸ್ ವರಿಷ್ಠಾಧಿಕಾರಿಗೆ ನಗರದ ವ್ಯಾಪ್ತಿಯಲ್ಲಿ ಉಪ ಪೊಲೀಸ್ ಆಯುಕ್ತರಿಗೆ (ಡಿಸಿಪಿ) ನೀಡಲಾಗುತ್ತದೆ. ಇದರಿಂದ ಸಮಯ ಉಳಿತಾಯವಾಗಲಿದೆ ಎಂದು ಹೇಳಲಾಗಿದೆ.
ಕೈದಿಗಳಿಂದ ಸಂಗ್ರಹಿಸಲ್ಪಟ್ಟ ಮಾದರಿಯನ್ನು 10 ವರ್ಷಗಳ ನಂತರ, ಕೈದಿಗಳ ಶಿಕ್ಷೆ ಅವಧಿ ಮುಗಿದ ಬಳಿಕ ದಾಖಲೆಯಿಂದ ತೆಗೆದು ಹಾಕಲು ತಿದ್ದುಪಡಿ ವಿಧೇಯಕದಲ್ಲಿ ಅವಕಾಶ ಮಾಡಿಕೊಡಲಾಗಿದೆ.
ಕೋವಿಡ್ ಹಿನ್ನೆಲೆಯಲ್ಲಿ ಆರೋಪಿಗಳನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗುತ್ತಿದೆ. ಈ ವ್ಯವಸ್ಥೆಯನ್ನು ಸೆಷನ್ಸ್ ನ್ಯಾಯಾಲಯಕ್ಕೂ ವಿಸ್ತರಿಸಲು ತಿದ್ದುಪಡಿ ವಿಧೇಯಕ ತರಲಾಗಿದೆ. ಉಭಯ ಪಕ್ಷಕಾರರ ವಕೀಲರ ಸಮ್ಮುಖದಲ್ಲಿ ನ್ಯಾಯಾಲಯದಲ್ಲಿ ಸಾಕ್ಷ್ಯ ಸಂಗ್ರಹ ಮಾಡಿ, ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಅವಕಾಶ ಕಲ್ಪಿಸಲಾಗುತ್ತದೆ.
ಹೀಗೆ ಮಾಡುವುದರಿಂದ ನ್ಯಾಯಾಲಯ, ಅಧಿಕಾರಿಗಳ ಸಮಯ, ಪ್ರಯಾಣ ಮತ್ತು ಅದಕ್ಕೆ ತಗುಲುವ ವೆಚ್ಚ ಉಳಿತಾಯವಾಗಲಿದೆ ಎಂಬ ಉದ್ದೇಶಕ್ಕಾಗಿ ವಿಧೇಯಕ ತರಲಾಗಿದೆ.
ಜೈಲುಗಳಲ್ಲಿರುವ ಕೈದಿಗಳ ರೂಪದಲ್ಲಿನ ಮಾನವ ಸಂಪನ್ಮೂಲವನ್ನು ಸದ್ಬಳಕೆ ಮಾಡಿಕೊಳ್ಳುವುದು ಮತ್ತು ಜೈಲುಗಳಲ್ಲಿ ಆಧುನಿಕ ಸೌಲಭ್ಯ ಕಲ್ಪಿಸುವ ಉದ್ದೇಶ ಹೊಂದಲಾಗಿದೆ.
ಬಂಧೀಖಾನೆ ಸಚಿವರು ಮಂಡಳಿಯ ಅಧ್ಯಕ್ಷರಾಗಿರಲಿದ್ದು, ಸಮಾಜ ಕಲ್ಯಾಣ, ಕಾರ್ಮಿಕ ಇಲಾಖೆ ಸೇರಿದಂತೆ ಹಲವು ಇಲಾಖೆಗಳ ಅಧಿಕಾರಿಗಳು ಮಂಡಳಿಯ ಸದಸ್ಯರಾಗಿರುತ್ತಾರೆ.
ಹರಿಯಾಣದಲ್ಲಿ ಬಂಧೀಖಾನೆ ಅಭಿವೃದ್ಧಿ ಮಂಡಳಿ ಆರಂಭಿಸಲಾಗಿದ್ದು, ಇದರಿಂದ ಪ್ರತಿವರ್ಷ ರಾಜ್ಯದ ಬೊಕ್ಕಸಕ್ಕೆ 600 ಕೋಟಿ ರೂಪಾಯಿ ಸಂದಾಯವಾಗುತ್ತಿದೆ ಎಂಬ ಮಾಹಿತಿ ಇದೆ. ಈ ನಿಟ್ಟಿನಲ್ಲಿ ಇಲ್ಲಿಯೂ ಜೈಲಿನಲ್ಲಿರುವ ಮಾನವ ಸಂಪನ್ಮೂಲ ಸದ್ಬಳಕೆ ಮಾಡಿಕೊಳ್ಳಲು ಮಂಡಳಿ ಹುಟ್ಟುಹಾಕಲಾಗುತ್ತಿದೆ.
ಜೈಲಿನಲ್ಲಿರುವ ಕೈದಿಗಳ ಶ್ರಮ ವ್ಯರ್ಥವಾಗಬಾರದು, ಮನಃಪರಿವರ್ತನೆಯ ಕಾರಣಕ್ಕಾಗಿ ಅವರಿಂದ ಸುಮ್ಮನೆ ವ್ಯರ್ಥವಾಗಿ ಕಾಲಹರಣವಾಗಬಾರದು. ಜೈಲಿನಿಂದ ಹೊರಬಂದಾಗ ಗೌರವಯುತವಾಗಿ ಬದುಕಲು ಒಂದಷ್ಟು ಹಣ ಅಗತ್ಯ. ಕೈದಿಯಾಗಿದ್ದಾಗ ಅವರನ್ನು ದುಡಿಸಿ, ಒಂದಷ್ಟು ಹಣವನ್ನು ಅವರಿಗೆ ನೀಡಿದರೆ ಮುಂದೆ ಬದುಕಿಗೆ ಅನುಕೂಲವಾಗುತ್ತದೆ. ಕೈದಿಯಾಗಿ ಸಜೆಯನ್ನೂ ಅನುಭವಿಸಬೇಕು, ಈ ಮಧ್ಯೆದಲ್ಲಿ ದುಡಿಮೆಯನ್ನೂ ಮಾಡಬೇಕು. ಇದಕ್ಕಾಗಿ ಮಂಡಳಿ ಅವಶ್ಯವಾಗಿದೆ.
ರಾಜ್ಯದಲ್ಲಿ ಸಾಕಷ್ಟು ಬೀಳು ಬಿದ್ದಿರುವ ಜಮೀನು ಇದೆ. ಸರ್ಕಾರದ ಅನುಮತಿ ಪಡೆದು ಕೈದಿಗಳನ್ನು ಅದರ ಉಳುಮೆ ಹಾಗೂ ಸದ್ಬಳಕೆಯಲ್ಲಿ ತೊಡಗುವಂತೆ ಮಾಡಬೇಕು. ಇದಕ್ಕಾಗಿ ಅಗತ್ಯವಾದ ಯಂತ್ರೋಪಕರಣಗಳನ್ನು ಪೂರೈಸಬೇಕಾಗುತ್ತದೆ. ಈ ಎಲ್ಲಾ ದೃಷ್ಟಿಯಿಂದ ಮಂಡಳಿ ಸೃಷ್ಟಿಸಲಾಗುತ್ತಿದೆ.