'ಕರ್ನಾಟಕ ಕಾವೇರಿ ನೀರು ಮತ್ತು ತಮಿಳುನಾಡು ಕಾವೇರಿ ನೀರು ಎಂಬ ಪರಿಕಲ್ಪನೆ ಇದೆಯೇ?' ನಿರ್ಧರಿಸಲಿದೆ ಸುಪ್ರೀಂ ಕೋರ್ಟ್‌

ಕಾವೇರಿಯ ಹೆಚ್ಚುವರಿ ನೀರನ್ನು ತಿರುಗಿಸುವ ದಕ್ಷಿಣ ವೆಲ್ಲಾರ್ ಯೋಜನೆ ಜಾರಿಗೆ ತರದಂತೆ ತಮಿಳುನಾಡಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.
ಸುಪ್ರೀಂ ಕೋರ್ಟ್, ಕರ್ನಾಟಕ ಹಾಗೂ ತಮಿಳುನಾಡು
ಸುಪ್ರೀಂ ಕೋರ್ಟ್, ಕರ್ನಾಟಕ ಹಾಗೂ ತಮಿಳುನಾಡು

ಕಾವೇರಿ ನದಿ ನೀರನ್ನು ನೆರೆಯ ರಾಜ್ಯಗಳೊಂದಿಗೆ ಹಂಚಿಕೊಳ್ಳುವ ಸಂಬಂಧ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಮೂಲ ದಾವೆಯಲ್ಲಿ ಪರಿಗಣಿಸಬೇಕಾದ ವಿವಾದಾಂಶಗಳ ಸಂಬಂಧ ಸುಪ್ರೀಂ ಕೋರ್ಟ್ ಮಂಗಳವಾರ ಕೆಲ ಪ್ರಶ್ನೆಗಳನ್ನು ಸಿದ್ಧಪಡಿಸಿದೆ (ಕರ್ನಾಟಕ ಸರ್ಕಾರ ಮತ್ತು ತಮಿಳುನಾಡು ಇನ್ನಿತರರ ನಡುವಣ ಪ್ರಕರಣ).

ಕರ್ನಾಟಕ, ತಮಿಳುನಾಡು, ಕೇರಳ ಹಾಗೂ ಪುದುಚೇರಿ ಪರ ಹಾಜರಾದ ಹಿರಿಯ ವಕೀಲರ ವಾದ ಆಲಿಸಿದ ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠ ಈ ಕೆಳಗಿನ ಪ್ರಶ್ನೆಗಳನ್ನು ರೂಪಿಸಿದೆ.

1. ಅಂತಾರಾಜ್ಯ ನದಿ ನೀರು ವಿವಾದ ಕಾಯಿದೆ 1956ರ ಸೆಕ್ಷನ್ 11 ಮತ್ತು ಸಂವಿಧಾನದ 262(2)ನೇ ವಿಧಿಯಿಂದ ದಾವೆಯನ್ನು ನಿರ್ಬಂಧಿಸಲಾಗಿದೆಯೇ?

2. ರೆಸ್ ಜುಡಿಕೇಟಾದ (ಸಕ್ಷಮ ನ್ಯಾಯಾಲಯ ನಿರ್ಣಯಿಸಿರುವ ಪ್ರಕರಣವಾಗಿರುವುದರಿಂದ ಅದನ್ನು ಅದೇ ಪಕ್ಷಕಾರರು ಮುನ್ನಡೆಸುವಂತಿಲ್ಲ) ತತ್ವಗಳಿಂದ ಮೊಕದ್ದಮೆಯನ್ನು ನಿರ್ಬಂಧಿಸಲಾಗಿದೆಯೇ?

3. ಅರ್ಜಿಯ ಪ್ಯಾರಾ 6(ಎ)ರಲ್ಲಿ ವ್ಯಾಖ್ಯಾನಿಸಿರುವಂತೆ "ಕರ್ನಾಟಕ ಕಾವೇರಿ ನೀರನ್ನು" ಪಡೆಯಲು, ಅನುಭವಿಸಲು ಇಲ್ಲವೇ ಬಳಸಿಕೊಳ್ಳಲು ವಾದಿಗೆ (ಕರ್ನಾಟಕಕ್ಕೆ) ಹಕ್ಕಿದೆಯೇ?

4. ಪ್ಯಾರಾ 6 (ಬಿ) ರಲ್ಲಿ ವ್ಯಾಖ್ಯಾನಿಸಿರುವಂತೆ "ತಮಿಳುನಾಡು ಕಾವೇರಿ ನೀರಿನ" ಜೊತೆಗೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಯಾವುದೇ ನೀರನ್ನು ಪಡೆಯಲು, ಅನುಭವಿಸಲು ಇಲ್ಲವೇ ಬಳಸಿಕೊಳ್ಳಲು ಪ್ರತಿವಾದಿ ಸಂಖ್ಯೆ 1 ಮತ್ತು 3 ಅರ್ಹರಲ್ಲವೇ?

5. ಕಾವೇರಿ ನದಿಯ ನೀರನ್ನು "ಕರ್ನಾಟಕ ಕಾವೇರಿ ನೀರು" ಮತ್ತು "ತಮಿಳುನಾಡು ಕಾವೇರಿ ನೀರು" ಎಂದು ವಿಭಜಿಸುವ ದಾವೆ ನಿರ್ವಹಣಾರ್ಹವೇ?

6. ಮೊದಲ ಪ್ರತಿವಾದಿಯು (ತಮಿಳುನಾಡು) ಕೈಗೊಳ್ಳಲು ಬಯಸುವ ಯೋಜನೆಗಳು ವಾದಿ-ರಾಜ್ಯದ (ಕರ್ನಾಟಕದ) ಹಕ್ಕುಗಳು ಮತ್ತು ಹಿತಾಸಕ್ತಿಗಳ ಮೇಲೆ ಪರಿಣಾಮ ಬೀರುತ್ತವೆಯೇ?

7. ಯಾವುದೇ ವ್ಯಾಜ್ಯ ಕಾರಣ ಇಲ್ಲದಿರುವಾಗ ದಾವೆ ನಿರ್ವಹಣಾಯೋಗ್ಯವೇ?

8. ಯಾವುದಾದರೂ ಪರಿಹಾರವಿದ್ದರೆ ಅದು ಏನು?

ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಉಜ್ಜಲ್ ಭುಯಾನ್
ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಉಜ್ಜಲ್ ಭುಯಾನ್

ಸಂಬಂಧಿತ ದಾಖಲೆಗಳನ್ನು ಸಲ್ಲಿಸಲು ಪಕ್ಷಕಾರರಿಗೆ ಆರು ವಾರಗಳ ಕಾಲಾವಕಾಶ ನೀಡಿರುವ ನ್ಯಾಯಾಲಯ ನಿರ್ದೇಶನಗಳನ್ನು ನೀಡುವುದಕ್ಕಾಗಿ ಪ್ರಕರಣವನ್ನು ಮೇ 7 ರಂದು ವಿಚಾರಣೆ ನಡೆಸುವುದಾಗಿ ತಿಳಿಸಿದೆ.

ಕಾವೇರಿಯ ಹೆಚ್ಚುವರಿ ನೀರನ್ನು ತಿರುಗಿಸುವ ದಕ್ಷಿಣ ವೆಲ್ಲಾರ್ ಯೋಜನೆಯನ್ನು ಕಾರ್ಯಗತಗೊಳಿಸದಂತೆ ತಮಿಳುನಾಡಿಗೆ ನಿರ್ದೇಶನ ನೀಡುವಂತೆ ಕೋರಿ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಪೀಠ ವಿಚಾರಣೆ ನಡೆಸಿತು.

ಕರ್ನಾಟಕ ಮೂಲದ ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರು ಕಳೆದ ಜನವರಿಯಲ್ಲಿ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದಿದ್ದರು.

ಹಿಂದಿನ ಮದ್ರಾಸ್ ಪ್ರೆಸಿಡೆನ್ಸಿ ಮತ್ತು ಮೈಸೂರು ಸಂಸ್ಥಾನದ ನಡುವೆ 1892 ಮತ್ತು 1924ರಲ್ಲಿ ನಡೆದ ಎರಡು ಒಪ್ಪಂದಗಳಿಂದ ಕಾವೇರಿ ನದಿ ನೀರಿನ ಬಗ್ಗೆ ಕರ್ನಾಟಕ ತಮಿಳುನಾಡಿನ ವ್ಯಾಜ್ಯ ಟಿಸಿಲೊಡೆದಿದೆ.

ಹಲವಾರು ಸುತ್ತಿನ ವಿಫಲ ಮಾತುಕತೆಗಳ ನಂತರ, ಸುಪ್ರೀಂ ಕೋರ್ಟ್ ಕಾವೇರಿ ಜಲ ವಿವಾದ ನ್ಯಾಯಮಂಡಳಿ ರಚನೆಗೆ ನಿರ್ದೇಶನ ನೀಡಿತ್ತು. ನ್ಯಾಯಮಂಡಳಿ 2007ರಲ್ಲಿ ಅಂತಿಮ ತೀರ್ಪು ನೀಡಿ, ತಮಿಳುನಾಡು ಕರ್ನಾಟಕದಿಂದ ಪ್ರತಿದಿನ ನಿಗದಿತ ಪ್ರಮಾಣದ ನೀರು ಪಡೆಯಲು ಅವಕಾಶ ನೀಡಿತು.

ಆದರೆ ಈ ತೀರ್ಪು ಪರಿಶೀಲಿಸುವಂತೆ ಎರಡೂ ರಾಜ್ಯಗಳು ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ ವಿವಾದ ಇನ್ನೂ ಹಸಿರಾಗಿದೆ.

ತಮಿಳುನಾಡಿಗೆ ಹಂಚುವಷ್ಟು ನೀರು ತನ್ನ ಜಲಾಶಯದಲ್ಲಿ ಇಲ್ಲ ಎಂದು 2016ರಲ್ಲಿ ಕರ್ನಾಟಕ ಸರ್ಕಾರ ವಾದಿಸಿತ್ತು. ಈ ಹಿನ್ನೆಲೆಯಲ್ಲಿ ತಮಿಳುನಾಡು ಮತ್ತೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತು. 2016 ರಲ್ಲಿ, ಕರ್ನಾಟಕವು ತನ್ನ ಜಲಾಶಯದಿಂದ ಹಂಚಿಕೊಳ್ಳಲು ಹೆಚ್ಚಿನ ನೀರು ಇಲ್ಲ ಎಂದಿದ್ದರಿಂದ ತಮಿಳುನಾಡು ಮತ್ತೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತು. ಆಗ ಕಾವೇರಿ ನಿರ್ವಹಣಾ ಮಂಡಳಿ ರಚಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿತು.

ಜಲಮೂಲಗಳು ರಾಷ್ಟ್ರೀಯ ಸ್ವತ್ತಾಗಿದ್ದು ಯಾವುದೇ ರಾಜ್ಯ ಅವುಗಳ ಮೇಲೆ ವಿಶೇಷ ಹಕ್ಕು ಸಾಧಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ಫೆಬ್ರವರಿ 2018ರಲ್ಲಿ ತಿಳಿಸಿತು.

ಕಾವೇರಿ ನೀರಿನ ಈಗಿನ ಪಾಲನ್ನು ದಿನಕ್ಕೆ 5,000ದ ಬದಲಿಗೆ 7,200 ಕ್ಯೂಸೆಕ್‌ಗೆ (ಒಂದು ಸೆಕೆಂಡಿಗೆ ನಿರ್ದಿಷ್ಟ ಬಿಂದುವಿನಲ್ಲಿ ಹರಿಯುವ ಘನ ಅಡಿ ನೀರಿನ ಪ್ರಮಾಣ) ಹೆಚ್ಚಿಸುವಂತೆ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಯ ಬಗ್ಗೆ ತೀರ್ಪು ನೀಡಲು ಕಳೆದ ವರ್ಷ ಸುಪ್ರೀಂ ಕೋರ್ಟ್‌ ತ್ರಿಸದಸ್ಯ ಪೀಠ ರಚಿಸಲಾಗಿತ್ತು.

ಕರ್ನಾಟಕ ತನ್ನ ನಿಲುವು ಬದಲಿಸಿ ಈ ಹಿಂದೆ ಒಪ್ಪಿಕೊಂಡಿದ್ದ 15,000 ಕ್ಯೂಸೆಕ್ ಬದಲಿಗೆ 8,000 ಕ್ಯೂಸೆಕ್‌ನಷ್ಟು ಕಡಿಮೆ ನೀರು ಬಿಡುಗಡೆ ಮಾಡಿದೆ ಎಂದು ತಮಿಳುನಾಡು ದೂರಿತ್ತು.

ಮುಂಗಾರು ವೈಫಲ್ಯದಿಂದಾಗಿ ಸಂಕಷ್ಟದ ಪರಿಸ್ಥಿತಿ ಇರುವುದರಿಂದ ತಮಿಳುನಾಡು ಸರ್ಕಾರದ ಮನವಿ ತಪ್ಪು ಗ್ರಹಿಕೆಯಿಂದ ಕೂಡಿದೆ ಎಂದು ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಪ್ರತಿ ಅಫಿಡವಿಟ್‌ ಸಲ್ಲಿಸಿತ್ತು. ಇದಲ್ಲದೆ, ಹಿಂದಿನ ಮಳೆಗಾಲದ ಬಾಕಿ 69.777 ಟಿಎಂಸಿ (ಸಾವಿರ ಮಿಲಿಯನ್ ಕ್ಯೂಬಿಕ್ ಅಡಿ) ನೀರಿನ ಸಂಗ್ರಹವನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಅದು ಹೇಳಿತ್ತು.

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಹೊರಡಿಸಿದ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ಬಯಸುವುದಿಲ್ಲ ಎಂದು ಅಂತಿಮವಾಗಿ ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿಪಿ ಎಸ್ ನರಸಿಂಹ ಹಾಗೂ ಪ್ರಶಾಂತ್ ಕುಮಾರ್ ಮಿಶ್ರಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಅಭಿಪ್ರಾಯಪಟ್ಟಿತ್ತು.

ಇದಕ್ಕೂ ಮೊದಲು, ನಿಯೋಜಿತ ತಜ್ಞರ ಸಮಿತಿಯ ವರದಿಯನ್ನು ಪರಿಶೀಲಿಸದೆಯೇ, ಕರ್ನಾಟಕದಿಂದ ತಮಿಳುನಾಡಿಗೆ ಎಷ್ಟು ನೀರನ್ನು ಬಿಡುಗಡೆ ಮಾಡಬೇಕು ಎಂದು ನಿರ್ಧರಿಸುವುದಿಲ್ಲ ಎಂಬುದಾಗಿ ಸುಪ್ರೀಂ ಕೋರ್ಟ್ ತಿಳಿಸಿತ್ತು.

ಈ ಮಧ್ಯೆ ಪೆನ್ನಾರ್‌ (ದಕ್ಷಿಣ ಪಿನಾಕಿನಿ) ನದಿಗೆ ಸಂಬಂಧಿಸಿದಂತೆ ತಮಿಳುನಾಡು ಮತ್ತು ಕರ್ನಾಟಕ ನಡುವಣ ಮತ್ತೊಂದು ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಉಳಿದಿದೆ. ಕರ್ನಾಟಕ ಸರ್ಕಾರ ಮತ್ತು ಕೇಂದ್ರ ಸರ್ಕಾರದ ವಿರುದ್ಧ ತಮಿಳುನಾಡು ಸರ್ಕಾರ ಮೂಲ ದಾವೆ ಹೂಡಿದೆ.

ಕರ್ನಾಟಕ ಸರ್ಕಾರದ ಪರವಾಗಿ ಹಿರಿಯ ವಕೀಲರಾದ ಶ್ಯಾಮ್ ದಿವಾನ್, ಮೋಹನ್ ಕಾತರಕಿ , ಆರ್.ಎಸ್.ರವಿ, ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ , ವಕೀಲರಾದ ವಿ.ಎನ್.ರಘುಪತಿ, ಗೋವಿಂದ್ ಮನೋಹರನ್, ಸುದಿಪ್ತೋ ಸಿರ್ಕಾರ್, ಮಯಾಂಕ್ ಜೈನ್, ಆದಿತ್ಯ ಭಟ್, ಅದುರ್ಯ ಬೊಮ್ಮಕ್ಕ ಹರೀಶ್ ವಾದಿಸಿದ್ದರು.

ತಮಿಳುನಾಡು ಸರ್ಕಾರದ ಪರವಾಗಿ ಹಿರಿಯ ಹೆಚ್ಚುವರಿ ಅಡ್ವೊಕೇಟ್ ಜನರಲ್ ವಿ.ಕೃಷ್ಣಮೂರ್ತಿ, ಹಿರಿಯ ವಕೀಲರಾದ ಜಿ.ಉಮಾಪತಿ, ಪಿ.ವಿಲ್ಸನ್, ಎನ್.ಆರ್.ಇಳಂಗೊ ಹಾಗೂ ವಕೀಲ ಡಿ.ಕುಮನನ್ ವಾದ ಮಂಡಿಸಿದ್ದರು.

ಕೇರಳ ಸರ್ಕಾರದ ಪರವಾಗಿ ಹಿರಿಯ ವಕೀಲ ಜೈದೀಪ್ ಗುಪ್ತಾ , ವಕೀಲರಾದ ಜಿಷ್ಣು ಎಂಎಲ್, ಪ್ರಿಯಾಂಕಾ ಪ್ರಕಾಶ್, ಬೀನಾ ಪ್ರಕಾಶ್, ಅನೂಪ್ ಆರ್ ಹಾಗೂ ಜಿ ಪ್ರಕಾಶ್ ವಾದಿಸಿದ್ದರು.

ಪುದುಚೇರಿ ಆಡಳಿತವನ್ನು ಹಿರಿಯ ವಕೀಲ ಸಿ.ಎಸ್.ವೈದ್ಯನಾಥನ್ , ವಕೀಲರಾದ ಅರವಿಂದ್ ಎಸ್, ಏಕ್ತಾ ಮುಯಾಲ್, ಕವಿತಾ ಹಾಗೂ ಅರುಣ್ ಗೋಯೆಲ್ ಪ್ರತಿನಿಧಿಸಿದ್ದರು.

ಕೇಂದ್ರ ಜಲಶಕ್ತಿ ಸಚಿವಾಲಯದ ಪರವಾಗಿ ವಕೀಲರಾದ ಪ್ರಣಯ್ ರಂಜನ್, ಗುರ್ಮೀತ್ ಸಿಂಗ್ ಮಕ್ಕರ್, ಇಶಾನ್ ಶರ್ಮಾ, ವೀರ್ ವಿಕ್ರಾಂತ್ ಸಿಂಗ್, ಆದಿತ್ಯ ದೀಕ್ಷಿತ್ ಹಾಗೂ ಪ್ರತ್ಯುಶ್ ಶ್ರೀವಾಸ್ತವ್ ಹಾಜರಿದ್ದರು.

[ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

Attachment
PDF
State of Karnataka vs State of Tamil Nadu and ors.pdf
Preview

Related Stories

No stories found.
Kannada Bar & Bench
kannada.barandbench.com