ಎಸ್‌ಸಿ-ಎಸ್‌ಟಿ ಸಮುದಾಯದ ಮೇಲಿನ ದೌರ್ಜನ್ಯ: ಬಾಕಿ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ಕ್ರಮಕೈಗೊಳ್ಳಲು ಸಿಎಂ ಸೂಚನೆ

ಅನುಸೂಚಿತ ಬುಡಕಟ್ಟು ಹಾಗೂ ಇತರ ಪಾರಂಪರಿಕ ಅರಣ್ಯ ವಾಸಿಗಳ ಅಧಿನಿಯಮ 2006ರ ಅಡಿ 1.8 ಲಕ್ಷಕ್ಕೂ ಹೆಚ್ಚು ಅರ್ಜಿಗಳು ತಿರಸ್ಕೃತಗೊಂಡಿವೆ. ಈ ಕುರಿತಂತೆ ರಾಜ್ಯಮಟ್ಟದಲ್ಲಿಯೂ ಮರು ಪರಿಶೀಲನಾ ಸಮಿತಿ ರಚಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
CM B Bommai
CM B Bommai

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಶೀಘ್ರ ಇತ್ಯರ್ಥಪಡಿಸಲು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ವಿಧಾನಸೌಧದಲ್ಲಿ ದೌರ್ಜನ್ಯ ಪ್ರತಿಬಂಧಕ ಅಧಿನಿಯಮ-1989 (ತಿದ್ದುಪಡಿ ಕಾಯಿದೆ 2015) ಮತ್ತು 1995ರ ನಿಯಮಗಳಡಿ (ತಿದ್ದುಪಡಿ ನಿಯಮಗಳು 2016) ರಾಜ್ಯಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿಯ ಸಭೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಇಂದು ನಡೆಯಿತು.

ಗೃಹ ಮತ್ತು ಕಾನೂನು ಇಲಾಖೆಯೊಂದಿಗೆ ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಸಮನ್ವಯ ಸಾಧಿಸಿ, ತನಿಖೆಯ ಹಂತದಲ್ಲಿ, ಆರೋಪಪಟ್ಟಿ ಸಲ್ಲಿಸುವಾಗ ಹಾಗೂ ವಿಚಾರಣೆ ಸಂದರ್ಭದಲ್ಲಿ ವಿಳಂಬವಾಗದಂತೆ ಕ್ರಮ ವಹಿಸಬೇಕು. ಅಪರಾಧ ಸಾಬೀತು ಪ್ರಮಾಣ ಹೆಚ್ಚಿಸಬೇಕು ಎಂದು ಅವರು ಸೂಚಿಸಿದರು.

ಸಭೆಯ ತೀರ್ಮಾನಗಳ ಕುರಿತು ಪ್ರತಿ ತಿಂಗಳೂ ಪರಿಶೀಲನೆ ನಡೆಸುವಂತೆ ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಸೂಚಿಸಿದರು. ರಾಜ್ಯಮಟ್ಟದ ಸಮಿತಿಯು ತುರ್ತು ವಿಷಯಗಳಿದ್ದಲ್ಲಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸಲು ನಿರ್ಧರಿಸಲಾಯಿತು. ಮೂರು ತಿಂಗಳಿಗೊಮ್ಮೆ ಜಿಲ್ಲಾಧಿಕಾರಿಗಳು ಹಾಗೂ ಉಪವಿಭಾಗಾಧಿಕಾರಿಗಳ ಹಂತದಲ್ಲಿ ಸಭೆಗಳನ್ನು ನಿಯಮಿತವಾಗಿ ನಡೆಸಿ, ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಒಂದು ತಿಂಗಳ ಒಳಗೆ ಸಭೆಯ ತೀರ್ಮಾನಗಳ ಬಗ್ಗೆ ಕೈಗೊಂಡ ಕ್ರಮಗಳ ಕುರಿತು ವರದಿ ನೀಡಲು ಸೂಚಿಸಿದರು.

ದೌರ್ಜನ್ಯ ಪ್ರಕರಣಗಳ ದೂರುದಾರರು ಮತ್ತು ಸಾಕ್ಷಿಗಳ ರಕ್ಷಣೆಗೆ ಒತ್ತು ನೀಡಬೇಕು. ಸೂಕ್ಷ್ಮ ಪ್ರಕರಣಗಳಲ್ಲಿ ದೂರುದಾರರು ಮತ್ತು ಸಾಕ್ಷಿದಾರರನ್ನು ಪೊಲೀಸರೇ ಕರೆದೊಯ್ಯಬೇಕು ಎಂದು ಸೂಚಿಸಿದರು. ಜೊತೆಗೆ ಈ ಪ್ರಕರಣಗಳ ಸಂಪೂರ್ಣ ಮೇಲುಸ್ತುವಾರಿಗೆ ಹೆಚ್ಚುವರಿ ಅಡ್ವೊಕೇಟ್ ಜನರಲ್ ಅವರನ್ನು ನೇಮಕ ಮಾಡಲು ತೀರ್ಮಾನಿಸಲಾಯಿತು.

ಅನುಸೂಚಿತ ಬುಡಕಟ್ಟು ಹಾಗೂ ಇತರ ಪಾರಂಪರಿಕ ಅರಣ್ಯ ವಾಸಿಗಳ ಅಧಿನಿಯಮ 2006ರ ಅಡಿ 1.8 ಲಕ್ಷಕ್ಕೂ ಹೆಚ್ಚು ಅರ್ಜಿಗಳು ತಿರಸ್ಕೃತಗೊಂಡಿವೆ. ಈ ಕುರಿತಂತೆ ರಾಜ್ಯಮಟ್ಟದಲ್ಲಿಯೂ ಮರು ಪರಿಶೀಲನಾ ಸಮಿತಿ ರಚಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಇದಕ್ಕೆ ಮೂವರು ಅಧಿಕಾರೇತರ ಸದಸ್ಯರನ್ನು ನಾಮನಿರ್ದೇಶನ ಮಾಡಬೇಕು ಎಂದು ಮುಖ್ಯಮಂತ್ರಿಗಳು ಸೂಚಿಸಿದರು.

ನಕಲಿ ಜಾತಿ ಪ್ರಮಾಣ ಪತ್ರ ಸಲ್ಲಿಸಿ, ಈ ಸಮುದಾಯಗಳ ಹಕ್ಕು ಕಸಿದುಕೊಳ್ಳುವವರ ವಿರುದ್ಧ ಹಾಗೂ ನಕಲಿ ಜಾತಿ ಪ್ರಮಾಣ ಪತ್ರ ನೀಡಿದವರ ವಿರುದ್ಧ ಕ್ರಮ ಕೈಗೊಳ್ಳಲು ಇದೇ ವೇಳೆ ಮುಖ್ಯಮಂತ್ರಿಗಳು ಸೂಚಿಸಿದರು. ದೌರ್ಜನ್ಯ ಪ್ರಕರಣಗಳಲ್ಲಿ ಮೃತಪಟ್ಟವರ ಅವಲಂಬಿತರಿಗೆ ಅನುಕಂಪ ಆಧಾರದಲ್ಲಿ ಸರ್ಕಾರಿ ನೌಕರಿಗೆ ಅರ್ಜಿ ಸಲ್ಲಿಸಲು 2 ವರ್ಷ ಅವಧಿ ಹಾಗೂ ಅಪ್ರಾಪ್ತ ವಯಸ್ಕರಿಗೆ ಅರ್ಜಿ ಸಲ್ಲಿಸಲು 3 ವರ್ಷಗಳ ಅವಧಿ ನಿಗದಿ ಪಡಿಸಿ ನಿಯಮಗಳಿಗೆ ತಿದ್ದುಪಡಿ ಮಾಡುವಂತೆ ಸೂಚಿಸಿದರು.

Also Read
[ಜಲ ವಿವಾದ] ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಪ್ರಕರಣಗಳ ಇತ್ಯರ್ಥಕ್ಕೆ ಸರ್ವ ಪ್ರಯತ್ನ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಪರಿಶಿಷ್ಟ ಜಾತಿ, ಪಂಗಡದವರ ಶಿಕ್ಷಣ, ಉದ್ಯೋಗ ಮತ್ತು ಸಬಲೀಕರಣಕ್ಕೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದ ಮುಖ್ಯಮಂತ್ರಿಗಳು, ಈ ಸಮುದಾಯಗಳ ಕಲ್ಯಾಣ ಕಾರ್ಯಕ್ರಮಗಳನ್ನು ಸಮಯಕ್ಕೆ ಸರಿಯಾಗಿ ಅನುಷ್ಠಾನಗೊಳಿಸುವಂತೆ ಸೂಚಿಸಿದರು. ಗಂಗಾ ಕಲ್ಯಾಣ ಯೋಜನೆಯಡಿ ಕೊರೆದ ಕೊಳವೆಬಾವಿಗಳಿಗೆ ವಿದ್ಯುತ್ ಸಂಪರ್ಕ ಒದಗಿಸಲು ಎಸ್ಕಾಂಗಳು ಎಸ್ ಸಿ ಪಿ, ಟಿ ಎಸ್ ಪಿ ಅನುದಾನ ಬಳಕೆ ಮಾಡುವಂತೆ ಸೂಚಿಸಲಾಗಿದೆ. ಎಸ್.ಸಿ.ಪಿ/ ಟಿಎಸ್ ಪಿ ಕಾಯಿದೆಯನ್ವಯ ಈ ಸಮುದಾಯಗಳಿಗೆ ನಿಗದಿ ಪಡಿಸಿದ ಅನುದಾನ, ಅವರ ಕ್ಷೇಮಾಭಿವೃದ್ಧಿಗೆ ಬಳಕೆಯಾಗುವ ಕುರಿತು ಕಾಯಿದೆಗೆ ತಿದ್ದುಪಡಿ ಮಾಡಲು ಕ್ರಮ ವಹಿಸುವಂತೆ ಕಾನೂನು ಇಲಾಖೆಗೆ ಸೂಚನೆ ನೀಡಿದರು.

ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಬಿ ಶ್ರೀರಾಮುಲು, ಜೆ ಸಿ ಮಾಧುಸ್ವಾಮಿ ಸಮಿತಿಯ ಸದಸ್ಯರಾದ ಸಂಸದರು, ಶಾಸಕರು ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್ ಮತ್ತು ಸರ್ಕಾರದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Related Stories

No stories found.
Kannada Bar & Bench
kannada.barandbench.com