
ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಆರೋಪ ನಿಗದಿ ಮಾಡಲು ಸಾಕಷ್ಟು ದಾಖಲೆಗಳಿವೆ ಎಂದಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಆರೋಪ ಮುಕ್ತಿ ಕೋರಿದ್ದ ಪ್ರಜ್ವಲ್ ಅರ್ಜಿಯನ್ನು ಈಚೆಗೆ ತಿರಸ್ಕರಿಸಿದೆ.
ಹಾಸನದ ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿದ್ದ ತಮ್ಮ ವಿರುದ್ಧದ ಮೊದಲ ಅತ್ಯಾಚಾರ ಪ್ರಕರಣದಲ್ಲಿ ಆರೋಪ ಮುಕ್ತಿ ಕೋರಿ ಪ್ರಜ್ವಲ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ ವಿಶೇಷ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಅವರು ಆದೇಶ ಮಾಡಿದ್ದಾರೆ.
ಆರೋಪ ಪಟ್ಟಿಯಲ್ಲಿನ ದಾಖಲೆಗಳನ್ನು ಪರಿಶೀಲಿಸಿದ ಪೀಠವು ಸಂತ್ರಸ್ತೆ ಹೇಳಿಕೆಯನ್ನು ಇತರೆ ಸಾಕ್ಷಿಗಳ ಹೇಳಿಕೆಗಳು ದೃಢೀಕರಿಸಿವೆ. ಪ್ರಕರಣ ದಾಖಲಿಸಲು ವಿಳಂಬವಾಗಿರುವ ಕುರಿತು ಪ್ರಾಸಿಕ್ಯೂಷನ್ ಉತ್ತರಿಸಬೇಕಿದೆ. ಆದರೆ, ಅದನ್ನು ಆರೋಪ ಮುಕ್ತಿ ಕೋರುವ ಸಂದರ್ಭದಲ್ಲಿ ವಿವರಿಸಬೇಕಿಲ್ಲ. ಸಾಕ್ಷಿಗಳ ಹೇಳಿಕೆ ಮತ್ತು ಎಸ್‌ಐಟಿ ಸಂಗ್ರಹಿಸಿರುವ ದಾಖಲೆಗಳನ್ನು ಪರಿಶೀಲಿಸಲಾಗಿದ್ದು, ಈ ಸಂದರ್ಭದಲ್ಲಿ ಅಪಾರ ಅನುಮಾನಗಳಿರುವುದರಿಂದ ಆರೋಪ ಮುಕ್ತಿ ಕೋರಿರುವ ಅರ್ಜಿಯನ್ನು ಪರಿಗಣಿಸಲಾಗದು ಎಂದು ನ್ಯಾಯಾಲಯ ಆದೇಶಿಸಿದೆ.
ಇದೇ ಸಂದರ್ಭದಲ್ಲಿ, ಪ್ರಜ್ವಲ್ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 376(2)(k) (ಪ್ರಬಲ ವ್ಯಕ್ತಿಯಿಂದ ಮಹಿಳೆಯ ಮೇಲೆ ಅತ್ಯಾಚಾರ), 376(2)(n) (ಪದೇಪದೇ ಮಹಿಳೆಯ ಮೇಲೆ ಅತ್ಯಾಚಾರ); 354A (ಮಹಿಳೆಯ ಘನತೆಗೆ ಹಾನಿ); 354B (ಬೆತ್ತಲೆಗೊಳಿಸಲು ಹಲ್ಲೆ); 354C (ಬೆತ್ತಲೆಗೊಳಿಸುವುದನ್ನು ಆನಂದಿಸುವುದು); 506 (ಕ್ರಿಮಿನಲ್ ಬೆದರಿಕೆ) ಮತ್ತು ಸೆಕ್ಷನ್ 201 (ಸಾಕ್ಷಿ ನಾಶ) ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್ 66ಇ ಅಡಿ ಆರೋಪ ನಿಗದಿ ಮಾಡಿರುವ ನ್ಯಾಯಾಲಯವು ಪ್ರಕರಣದ ವಿಚಾರಣೆಯನ್ನು ಏಪ್ರಿಲ್ 9ಕ್ಕೆ ಮುಂದೂಡಿದೆ.
ಕೋವಿಡ್ ಎರಡನೇ ಅಲೆ ಸಂದರ್ಭದಲ್ಲಿ ಹೊಳೆನರಸೀಪುರದಲ್ಲಿರುವ ತಮ್ಮ ಗನ್ನಿಕಡ ಅತಿಥಿ ಗೃಹ ಮತ್ತು ಬೆಂಗಳೂರಿನ ಬಸವನಗುಡಿಯಲ್ಲಿರುವ ತಮ್ಮ ಮನೆಯಲ್ಲಿ ಮನೆಕೆಲಸದಾಕೆಯ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣದಲ್ಲಿ ಆರೋಪಮುಕ್ತಿ ಕೋರಿ ಪ್ರಜ್ವಲ್ ಅರ್ಜಿ ಸಲ್ಲಿಸಿದ್ದರು.
ಎಂಟು ವರ್ಷಗಳ ಹಿಂದೆ ಸಂತ್ರಸ್ತೆ ಆಕೆಯ ಪತಿ ಮತ್ತು ಸಹೋದರಿಯರು ಗನ್ನಿಕಡದ ಅತಿಥಿ ಗೃಹದಲ್ಲಿ ಕೆಲಸ ಮಾಡುತ್ತಿದ್ದರು. ಕೋವಿಡ್ ಸಂದರ್ಭದಲ್ಲಿ ಅಲ್ಲಿಗೆ ತೆರಳಿದ್ದ ಪ್ರಜ್ವಲ್ ಅವರು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದರು. ಈ ಕೃತ್ಯವನ್ನು ಮೊಬೈಲ್‌ನಲ್ಲಿ ಪ್ರಜ್ವಲ್ ರೆಕಾರ್ಡ್ ಮಾಡಿಕೊಂಡಿದ್ದರು. ಆನಂತರ ಸಂತ್ರಸ್ತೆಯು ಕೆಲಸ ಬಿಟ್ಟು 2022ರಲ್ಲಿ ತನ್ನ ಊರಿಗೆ ತೆರಳಿ ಅಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದರು ಎಂದು ಎಸ್‌ಐಟಿ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ವಿವರಿಸಲಾಗಿದೆ.
ಇತ್ತ ಪ್ರಜ್ವಲ್ ಅವರು ತಮ್ಮ ಅರ್ಜಿಯಲ್ಲಿ ಈ ಘಟನೆ ನಡೆದಿರುವುದೇ ಅಸಾಧ್ಯ. ನಾಲ್ಕು ವರ್ಷಗಳ ಬಳಿ ಪ್ರಕರಣ ದಾಖಲಿಸಲಾಗಿದೆ. ಅಲ್ಲದೇ ಕೃತ್ಯವನ್ನು ಸರಿಯಾಗಿ ವಿವರಿಸಲಾಗಿಲ್ಲ ಎಂದು ಆಕ್ಷೇಪಿಸಿದ್ದರು.
ಪ್ರಜ್ವಲ್ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ಅವರು “ನಿರ್ದಿಷ್ಟ ಸಮಯ ಮತ್ತು ದಿನಾಂಕದಂದು ಕೃತ್ಯ ಎಸಗಲಾಗಿದೆ ಎಂದು ತಿಳಿಸಬೇಕು. ಇಲ್ಲವಾದಲ್ಲಿ ಅದು ಆರೋಪವಾಗುತ್ತದೆಯಷ್ಟೆ. ಕೃತ್ಯವನ್ನು ರೆಕಾರ್ಡ್ ಮಾಡಿರುವ ಮೂಲ ಮೊಬೈಲ್ ಫೋನ್ ಅನ್ನು ಪೊಲೀಸರು ಪತ್ತೆ ಮಾಡಿಲ್ಲ. ಇಂದಿನ ಡಿಜಿಟಲ್ ಯುಗದಲ್ಲಿ ನಕಲಿ ಮತ್ತು ತಿರುಚಿದ ವಿಡಿಯೋ ಸೃಷ್ಟಿಸುವುದು ಕಷ್ಟದ ಕೆಲಸವೇನಲ್ಲ” ಎಂದು ಆಕ್ಷೇಪಿಸಿದರು.
ಎಸ್‌ಐಟಿ ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎನ್ ಜಗದೀಶ್ ಅವರು “ಎಸ್‌ಐಟಿಯು ಸಮಗ್ರ ತನಿಖೆ ನಡೆಸಿದ್ದು, ಸಾಕಷ್ಟು ದಾಖಲೆಗಳನ್ನು ಸಂಗ್ರಹಿಸಲಾಗಿದೆ. ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ವಿಡಿಯೋ ಎಡಿಟ್ ಆಗಿಲ್ಲ ಎಂಬ ವರದಿ ಬಂದಿದ್ದು, ಧ್ವನಿ ಮಾದರಿ ಹೊಂದಿಕೆಯಾಗಿದೆ” ಎಂದು ವಾದಿಸಿದ್ದರು.