ಟಾಟಾ ಕಾಫಿ ಎಸ್ಟೇಟ್‌ ವಿವಾದ: ಅರಣ್ಯ ಭೂಮಿ ಎಂದು ಘೋಷಿಸಿದ ಸರ್ಕಾರದ ಕ್ರಮ ಎತ್ತಿ ಹಿಡಿದ ನ್ಯಾಯಾಲಯ

ಅರಣ್ಯ ಎಂದು ಗುತ್ತಿಗೆಗೆ ನೀಡಿರುವುದರಿಂದ ನಮೂದುಗಳನ್ನು ಸರಿ ಪಡಿಸುವ ಹಕ್ಕು ರಾಜ್ಯ ಸರ್ಕಾರಕ್ಕೆ ಇದ್ದು ನ್ಯಾಯಾಲಯದ ಪ್ರಕಾರ ಅದರ ಕ್ರಮದಲ್ಲಿ ಯಾವುದೇ ತಪ್ಪುಕಂಡುಬಂದಿಲ್ಲ.
Tata Coffee

Tata Coffee

'ರಿಡೀಮ್ಡ್‌ ಸಾಗು' (ವಾಪಾಸು ಪಡೆಯಬಹುದಾದ ಸಾಗುವಳಿ) ಭೂಮಿಯನ್ನು ಅರಣ್ಯ ಭೂಮಿ ಎಂದು ಘೋಷಿಸಿರುವ ಸರ್ಕಾರದ ಕ್ರಮ ಕಾನೂನುಬಾಹಿರ ಎಂದು ಘೋಷಿಸುವಂತೆ ಕೋರಿ ಟಾಟಾ ಕಾಫಿ ಮಾಡಿದ್ದ ಮನವಿಯನ್ನು ಕೊಡಗು ಜಿಲ್ಲೆ ವಿರಾಜಪೇಟೆ ನ್ಯಾಯಾಲಯ ವಜಾಗೊಳಿಸಿದ್ದು ಅರ್ಜಿದಾರರಿಗೆ ದಂಡ ವಿಧಿಸಿದೆ [ಟಾಟಾ ಕಾಫಿ ಮತ್ತು ಕರ್ನಾಟಕ ಸರ್ಕಾರ ನಡುವಣ ಪ್ರಕರಣ].

1985ರಲ್ಲಿ ಗ್ಲೆನ್ಲೋರ್ನಾ ಟೀ ಎಸ್ಟೇಟ್ ಖರೀದಿಸಿದ್ದ ಟಾಟಾ ಕಾಫಿ ಸಲ್ಲಿಸಿದ್ದ ಮನವಿಯನ್ನು ಹಿರಿಯ ಸಿವಿಲ್‌ ನ್ಯಾಯಾಧೀಶ ಲೋಕೇಶ್‌ ಎಂ ಜಿ ಆಲಿಸಿದರು. ಕಂಪೆನಿ ಗುತ್ತಿಗೆ ಪಡೆದಿರುವ ಜಮೀನು (ಸುಮಾರು 942 ಎಕರೆ) ಮೀಸಲು ಅರಣ್ಯ ಎಂದು ರಾಜ್ಯದ ಪ್ರಧಾನ ಕಾರ್ಯದರ್ಶಿ 2006ರಲ್ಲಿ ಕಾರ್ಯದರ್ಶಿ ಅವರಿಗೆ ಪತ್ರ ಬರೆದಿದ್ದರು. ಇದರ ಬೆನ್ನಲ್ಲೇ ಕಾರ್ಯದರ್ಶಿಯವರು ಜಿಲ್ಲಾಧಿಕಾರಿಗೆ ಪತ್ರ ಬರೆದು ರೀಡೀಮ್ಡ್ ಸಾಗು ಬದಲಿಗೆ ಅರಣ್ಯ ಭೂಮಿಗೆ ನಮೂದುಗಳನ್ನು ಬದಲಾಯಿಸುವಂತೆ ಸೂಚಿಸಿದ್ದರು.

ಯಾವುದೇ ಸೂಚನೆಯಿಲ್ಲದೆ ತಹಸೀಲ್ದಾರ್ ಮತ್ತು ಕಂದಾಯ ನಿರೀಕ್ಷಕರು ತರಾತುರಿಯಲ್ಲಿ ಈ ಬದಲಾವಣೆಗಳನ್ನು ತಂದಿದ್ದಾರೆ. ಎಲ್ಲಾ ಮೂಲಭೂತ ಮತ್ತು ಕಡ್ಡಾಯ ಮಾನದಂಡಗಳಿಗೆ ವಿರುದ್ಧವಾಗಿ ಇದನ್ನು ಮಾಡಲಾಗಿದೆ ಎಂದು ಫಿರ್ಯಾದಿ ಕಂಪೆನಿ ʼಟಾಟಾ ಕಾಫಿʼ ವಾದಿಸಿತ್ತು. ಕಂಪೆನಿ ಮೊದಲು ರಾಜ್ಯ ಹೈಕೋರ್ಟ್‌ ಮೊರೆ ಹೋಗಿತ್ತಾದರೂ ವಿಚಾರಣಾ ನ್ಯಾಯಾಲಯವನ್ನು ಸಂಪರ್ಕಿಸುವ ಸ್ವಾತಂತ್ರ್ಯವನ್ನು ಪೀಠ ಒದಗಿಸಿತು.

1914ರ ಜಮಾಬಂದಿಯಲ್ಲಿ ಕಂಡುಬಂದ ನಮೂದುಗಳು ನಿಯಮಾವಳಿಗಳ ಸೆಕ್ಷನ್ 39 ಮತ್ತು ಕರ್ನಾಟಕ ಭೂಕಂದಾಯ ಕಾಯಿದೆ, 1964ರ ಸೆಕ್ಷನ್ 133ರ ಅಡಿಯಲ್ಲಿ ಊಹಾತ್ಮಕ ಮೌಲ್ಯವನ್ನು ಹೊಂದಿದ್ದು ಅದನ್ನು ಅಧಿಕಾರಿಗಳು ಅಳಿಸಲು ಸಾಧ್ಯವಿಲ್ಲ ಎಂಬುದು ಕಂಪೆನಿಯ ವಾದವಾಗಿತ್ತು. ತನ್ನ ಹಕ್ಕುಗಳನ್ನು ದೊಡ್ಡ ಪ್ರಮಣಾದಲ್ಲಿ ಉಲ್ಲಂಘಿಸಲಾಗಿದ್ದು ಇದರಿಂದ ಸರಿಪಡಿಸಲಾಗದ ನಷ್ಟ ಮತ್ತು ಹಾನಿ ಉಂಟಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿತ್ತು.

ನ್ಯಾಯಾಧೀಶರು, ಕಂದಾಯ ದಾಖಲೆಗಳನ್ನು ಪರಿಶೀಲಿಸಿದ ನಂತರ, ದಾವೆಯ ಆಸ್ತಿಗಳನ್ನು ಪೈಸಾರಿ ಅರಣ್ಯ ಭೂಮಿ ಎಂದು ತೀರ್ಮಾನಿಸಿ ನಮೂದುಗಳನ್ನು ಸರಿಪಡಿಸುವ ಹಕ್ಕು ಪ್ರತಿವಾದಿಗಳಿಗೆ (ಕರ್ನಾಟಕ ಸರ್ಕಾರ) ಇದೆ ಎಂದು ತಿಳಿಸಿದರು.

Also Read
ಮಂಗಗಳ ಮಾರಣ ಹೋಮ ಪ್ರಕರಣ: ಹಾಸನ ಎಸ್‌ಪಿ, ಉಪ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಜರಾತಿಗೆ ಹೈಕೋರ್ಟ್‌ ಸೂಚನೆ

"ಇದನ್ನು ಯಾರೂ ಪ್ರಶ್ನಿಸಲು ಸಾಧ್ಯವಿಲ್ಲ. ಇದು ಕಂದಾಯ ಅಧಿಕಾರಿಗಳ ಅಧಿಕಾರ ವ್ಯಾಪ್ತಿ ಮತ್ತು ಇದು ಕಂದಾಯ ಅಧಿಕಾರಿಗಳ ಆಂತರಿಕ ಆಡಳಿತವಾಗಿದೆ” ಎಂದು ನ್ಯಾಯಾಲಯ ಹೇಳಿದೆ. ಅಲ್ಲದೆ ದಾಖಲೆಗಳನ್ನು ಪರಿಶೀಲಿಸಿದಾಗ, ಜಮೀನು ಅರಣ್ಯ ಭೂಮಿಯಾಗಿದ್ದು, ಚಹಾ ಕೃಷಿಗೆ ಗುತ್ತಿಗೆ ಪಡೆದಿರುವುದು ಕಂಡುಬಂದಿದೆ. ಮಡಿಕೇರಿ ಮುಖ್ಯ ಆಯುಕ್ತರ ಆದೇಶವಿಲ್ಲದೆ ನಮೂದನ್ನು 'ರಿಡೀಮ್ಡ್ ಸಾಗು' ಎಂದು ಬದಲಾಯಿಸಿರುವುದು ನ್ಯಾಯಾಲಯಕ್ಕೆ ತಿಳಿದುಬಂದಿದೆ. ಆದ್ದರಿಂದ ಅದು "ಸೂಕ್ತ ಕಾರ್ಯವಿಧಾನವಿಲ್ಲದೆ ಮತ್ತು ಮುಖ್ಯ ಆಯುಕ್ತರು ಅಥವಾ ಸರ್ಕಾರದ ಆದೇಶವಿಲ್ಲದೆ, ಭೂಮಿಯ ಹಿಡುವಳಿಯನ್ನು ಬದಲಾಯಿಸಲಾಗದು" ಎಂದು ತೀರ್ಪು ನೀಡಿತು.

ಈ ಅನಧಿಕೃತ ಬದಲಾವಣೆಯನ್ನು ಖಂಡಿಸಿದ ನ್ಯಾಯಾಲಯ, ತಪ್ಪಿತಸ್ಥ ಕಂದಾಯ ಅಧಿಕಾರಿಗಳ ವಿರುದ್ಧ ಕ್ರಮಕೈಗೊಂಡು ಸರ್ಕಾರಕ್ಕೆ ವರದಿ ಸಲ್ಲಿಸುವ ನಿಟ್ಟಿನಲ್ಲಿ ತಹಸೀಲ್ದಾರ್ ಮತ್ತು ಜಿಲ್ಲಾಧಿಕಾರಿಗಳಿಗೆ ತೀರ್ಪಿನ ಪ್ರತಿ ಕಳುಹಿಸಲು ಸೂಚಿಸಿತು. ಇದಲ್ಲದೆ, ಗುತ್ತಿಗೆ ಪಡೆದ ಅರಣ್ಯ ಭೂಮಿಯ ಅವಧಿಯನ್ನು 99 ವರ್ಷಕ್ಕೆ ಮೊಟಕುಗೊಳಿಸಬೇಕು ಮತ್ತು ಮೀಸಲು ಅರಣ್ಯ ಭೂಮಿಯನ್ನು ಸರ್ಕಾರ ವಶಕ್ಕೆ ತೆಗೆದುಕೊಳ್ಳಬೇಕು ಎಂದು ಸೂಚಿಸಲಾಯಿತು.

ಜೊತೆಗೆ ಕಂದಾಯ ನಮೂದುಗಳನ್ನು ಬದಲಾಯಿಸಲು ಪ್ರತಿವಾದಿ ಸರ್ಕಾರಕ್ಕೆ ನಿರ್ದೇಶನ ನೀಡುವುದು ಕಾನೂನುಬದ್ಧವಾಗಿರುವುದಿಲ್ಲ ಅಥವಾ ಹಾಗೆ ಮಾಡಲು ಅದು ಸೂಕ್ತ ವೇದಿಕೆಯೂ ಅಲ್ಲ ಎಂದ ನ್ಯಾಯಾಲಯ ಸರ್ಕಾರದ ಆದೇಶಕ್ಕೆ ಅನುಗುಣವಾಗಿ ಕಂದಾಯ ದಾಖಲೆಗಳಲ್ಲಿ ಬದಲಾವಣೆ ಮಾಡಲಾಗಿರುವುದರಿಂದ ಅಕ್ರಮವಾಗಿಲ್ಲ ಎಂದಿತು.

ಹೀಗಾಗಿ, ತಪ್ಪಿತಸ್ಥ ಕಂದಾಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದ ನ್ಯಾಯಾಧೀಶರು ದಂಡ ಸಹಿತ ಮೊಕದ್ದಮೆಯನ್ನು ವಜಾಗೊಳಿಸಿದರು. ಅರ್ಜಿದಾರರ ಪರ ವಕೀಲ ಎಸ್‌ಆರ್‌ಜೆ ವಾದ ಮಂಡಿಸಿದರೆ, ಪ್ರತಿವಾದಿಗಳನ್ನು ಸಹಾಯಕ ಸರ್ಕಾರಿ ಪ್ಲೀಡರ್ ಪ್ರತಿನಿಧಿಸಿದ್ದರು.

Related Stories

No stories found.
Kannada Bar & Bench
kannada.barandbench.com