Ramya alias Divya Spandana and Bengaluru's City Civil and Sessions Court
Ramya alias Divya Spandana and Bengaluru's City Civil and Sessions Court

ರಮ್ಯಾ ನಿರ್ಮಾಣದ ʼಸ್ವಾತಿ ಮುತ್ತಿನ ಮಳೆ ಹನಿಯೇʼ ಸಿನಿಮಾ ವಿರುದ್ಧದ ಪ್ರತಿಬಂಧಕಾದೇಶ ತೆರವುಗೊಳಿಸಿದ ನ್ಯಾಯಾಲಯ

ನಿರ್ದೇಶಕ ಎಸ್‌ ವಿ ರಾಜೇಂದ್ರ ಸಿಂಗ್ ಬಾಬು ಅವರು ದಾವೆ ಹೂಡಿ, ಈ ಹೆಸರು ನನ್ನ ‘ಬಣ್ಣದ ಗೆಜ್ಜೆ’ ಸಿನಿಮಾದ ಹಾಡಿನ ಸಾಲಿನದ್ದಾಗಿದೆ. ನನ್ನ ಅನುಮತಿ ಇಲ್ಲದೆ ಇದನ್ನು ಬಳಸುವಂತಿಲ್ಲ ಎಂದು ಆಕ್ಷೇಪಿಸಿದ್ದರು.

‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರದ ಹೆಸರನ್ನು ಬಳಕೆ ಮಾಡದಂತೆ ನಟಿ ಮತ್ತು ನಿಮಾರ್ಪಕಿ ಹಾಗೂ ಮಾಜಿ ಸಂಸದೆ ರಮ್ಯಾ ಅಲಿಯಾಸ್‌ ದಿವ್ಯ ಸ್ಪಂದನಾ ಅವರಿಗೆ ನಿರ್ದೇಶಿಸಿ ಹೊರಡಿಸಲಾಗಿದ್ದ ತಾತ್ಕಾಲಿಕ ನಿರ್ಬಂಧಕಾದೇಶವನ್ನು ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯವು ಬುಧವಾರ ತೆರವುಗೊಳಿಸಿದೆ.

‘ಸ್ವಾತಿ ಮುತ್ತಿನ ಮಳೆ ಹನಿಯೇ’ ಹೆಸರು ಬಳಸದಂತೆ 2023ರ ಜನವರಿ 16ರಂದು ಮಾಡಿರುವ ತಡೆಯಾಜ್ಞೆ ತೆರವುಗೊಳಿಸುವಂತೆ ಕೋರಿ ನಟಿ ರಮ್ಯಾ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು 18ನೇ ಹೆಚ್ಚುವರಿ ಸಿವಿಲ್ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಪದ್ಮ ಪ್ರಸಾದ್‌ ಅವರು ಮಾನ್ಯ ಮಾಡಿದ್ದಾರೆ.  ಇದರಿಂದ ಪ್ರಕರಣದಲ್ಲಿ ಫಿರ್ಯಾದಿ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರಿಗೆ ಹಿನ್ನಡೆಯಾಗಿದೆ.

ಆಪಲ್‌ ಬಾಕ್ಸ್‌ ಎಂಬ ನಿರ್ಮಾಣ ಸಂಸ್ಥೆಯನ್ನು ರಮ್ಯಾ ಅವರು ಆರಂಭಿಸಿದ್ದು, ಅದರ ಅಡಿ ರಾಜ್ ಬಿ.ಶೆಟ್ಟಿ ಪ್ರಧಾನ ಭೂಮಿಕೆಯಲ್ಲಿರುವ ʼಸ್ವಾತಿ ಮುತ್ತಿನ ಮಳೆ ಹನಿಯೇʼ ಚಿತ್ರ ನಿರ್ಮಾಣ ಮಾಡಿದ್ದಾರೆ. ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಆದರೆ, ನಿರ್ದೇಶಕ ಎಸ್‌ ವಿ ರಾಜೇಂದ್ರ ಸಿಂಗ್ ಬಾಬು ಅವರು ಅಸಲು ದಾವೆ ಹೂಡಿ, ಈ ಹೆಸರು ನನ್ನ ‘ಬಣ್ಣದ ಗೆಜ್ಜೆ’ ಸಿನಿಮಾದ ಹಾಡಿನ ಸಾಲಿನದ್ದಾಗಿದೆ. ಈ ಹೆಸರನ್ನು ನನ್ನ ಅನುಮತಿ ಇಲ್ಲದೆ ಬಳಸುವಂತಿಲ್ಲ ಎಂದು ಆಕ್ಷೇಪಿಸಿದ್ದರು.

ಅಲ್ಲದೇ, ಇದೇ ಹೆಸರು ಇಟ್ಟುಕೊಂಡು ಅಂಬರೀಶ್ ಮತ್ತು ನಟಿ ಸುಹಾಸಿನಿ ಅವರೊಂದಿಗೆ ಸಿನಿಮಾ ಮಾಡಲು ಮುಂದಾಗಿದ್ದೆ. ಆದರೆ, ಅದು ಸಾಧ್ಯವಾಗಲಿಲ್ಲ. ಆದ್ದರಿಂದ, ಅವರ ಪುತ್ರ ಅಭಿಷೇಕ್ ಅಂಬರೀಶ್ ಜತೆ ಸಿನಿಮಾಗೆ ತಯಾರಿ ಮಾಡಿಕೊಳ್ಳಲಾಗಿದೆ. ಅಷ್ಟರಲ್ಲಿ ರಮ್ಯಾ ಹೆಸರು ಬಳಸಿಕೊಂಡಿದ್ದಾರೆ. ಆದ್ದರಿಂದ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಹೆಸರು ಬಳಸಲು ಹಾಗೂ ಚಿತ್ರ ನಿರ್ಮಿಸಿ ಮತ್ತು ಬಿಡುಗಡೆ ಮಾಡುವುದಕ್ಕೆ ತಡೆ ನೀಡಬೇಕು ಎಂದು ರಾಜೇಂದ್ರಸಿಂಗ್ ಬಾಬು ಕೋರಿದ್ದರು.

ಆ ಮನವಿ ಆಲಿಸಿದ್ದ ನ್ಯಾಯಾಲಯವು ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಬಳಕಗೆ ತಡೆಯಾಜ್ಞೆ ನೀಡಿ 2023ರ ಜನವರಿ 16ರಂದು ಮಧ್ಯಂತರ ಆದೇಶ ಮಾಡಿತ್ತು. ಬಾಬು ಅವರು ಕರ್ನಾಟಕ ಫಿಲ್ಮ ಚೇಂಬರ್‌ ಆಫ್‌ ಕಾಮರ್ಸ್‌, ಜಯದುರ್ಗ ಮೂವೀಸ್‌ ಮತ್ತು ಕೇಂದ್ರೀಯ ಸಿನಿಮಾ ಸರ್ಟಿಫಿಕೇಶನ್‌ ಮಂಡಳಿಯ ವಿರುದ್ಧ ದಾವೆ ಹೂಡಿದ್ದರು.

ರಮ್ಯಾ ಒಡೆತನದ ಆಪಲ್‌ಬಾಕ್ಸ್‌ ಸ್ಟುಡಿಯೋಸ್‌ ದಾವೆಯಲ್ಲಿ ತಮ್ಮನ್ನು ಪ್ರತಿವಾದಿ ಮಾಡಬೇಕು. ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಹೆಸರು ಬಳಸಲು ನೀಡಲಾಗಿರುವ ತಡೆಯಾಜ್ಞೆ ತೆರವುಗೊಳಿಸಬೇಕು ಎಂದು ಕೋರಿ ಎರಡು ಪ್ರತ್ಯೇಕ ಮಧ್ಯಂತರ ಅರ್ಜಿ ಸಲ್ಲಿಸಿದ್ದರು.

ʼಸ್ವಾತಿ ಮುತ್ತಿನ ಮಳೆ ಹನಿಯೇʼ ಚಿತ್ರದ ಹಕ್ಕುಗಳು ಶ್ರೀ ಜಯದುರ್ಗ ಮೂವೀಸ್‌ ಬಳಿ ಇದ್ದು, ಅವುಗಳು ಬಾಬು ಅವರ ಬಳಿ ಇಲ್ಲ. ಕಾನೂನು ಬದ್ಧವಾಗಿ ಸಿನಿಮಾದ ಹಕ್ಕುಗಳನ್ನು ವರ್ಗಾವಣೆ ಮಾಡಲಾಗಿದ್ದು, ಅದನ್ನು ಕರ್ನಾಟಕ ಫಿಲ್ಮ್‌ ಚೇಂಬರ್‌ ಆಫ್‌ ಕಾಮರ್ಸ್‌ನಲ್ಲಿ ನೋಂದಾಯಿಸಲಾಗಿದೆ ಎಂದು ಆಪಲ್‌ಬಾಕ್ಸ್‌ ಪರವಾಗಿ ವಾದಿಸಲಾಗಿತ್ತು. ಈ ವಾದ ಪುರಸ್ಕರಿಸಿದ ನ್ಯಾಯಾಲಯವು ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಹೆಸರು ಬಳಕೆಗೆ ನೀಡಲಾಗಿದ್ದ ತಡೆಯಾಜ್ಞೆ ತೆರವುಗೊಳಿಸಿದೆ. ಜತೆಗೆ, ದಾವೆಯಲ್ಲಿ ರಮ್ಯಾ ಅವರನ್ನು ಪ್ರತಿವಾದಿ ಮಾಡಿದೆ.

ರಮ್ಯಾ ಅಲಿಯಾಸ್‌ ದಿವ್ಯ ಸ್ಪಂದನಾ ಅವರನ್ನು ಸ್ಪೆಕ್ಟ್ರಂ ಲೀಗಲ್‌ ಪಾರ್ಟ್ನರ್‌ನ ವಕೀಲರಾದ ಚಿಂತನ್‌ ಚಿನ್ನಪ್ಪ, ವಿಶಾಕ ನಿಕ್ಕಂ, ದಿವ್ಯಾ ಜೈನ್‌ ಮತ್ತು ಅಕ್ಷಯ್‌ ರಾವ್‌ ಪ್ರತಿನಿಧಿಸಿದ್ದರು. ರಾಜೇಂದ್ರ ಸಿಂಗ್‌ ಬಾಬು ಅವರನ್ನು ವಕೀಲ ಎಸ್‌ ಆರ್‌ ಶ್ರೀನಿವಾಸ ಮೂರ್ತಿ ಪ್ರತಿನಿಧಿಸಿದ್ದರು.

Related Stories

No stories found.
Kannada Bar & Bench
kannada.barandbench.com