

ಕಲಬುರ್ಗಿ ಜಿಲ್ಲೆಯ ಆಳಂದಲ್ಲಿರುವ ಲಾಡ್ಲೆ ಮಶಾಖ್ ದರ್ಗಾದ ಆವರಣದಲ್ಲಿ ಮಹಾ ಶಿವರಾತ್ರಿ ಪೂಜೆ ತಡೆಯಬೇಕು ಮತ್ತು ಸ್ಥಳದ ಪ್ರಸ್ತುತ ಧಾರ್ಮಿಕ ಸ್ವರೂಪ ಬದಲಿಸುವ ಯಾವುದೇ ಕಾಮಗಾರಿ ಇಲ್ಲವೇ ಬದಲಾವಣೆ ನಿರ್ಬಂಧಿಸಬೇಕು ಎಂದು ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.
ಸಿಜೆಐ ಸೂರ್ಯಕಾಂತ್ ಹಾಗೂ ನ್ಯಾಯಮೂರ್ತಿ ಜೊಯಮಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠದೆದುರು ಇಂದು ಪ್ರಕರಣ ಪ್ರಸ್ತಾಪಿಸಲಾಯಿತು.
ದರ್ಗಾ ಪರವಾಗಿ ಹಾಜರಾದ ಹಿರಿಯ ವಕೀಲೆ ವಿಭಾ ದತ್ತ ಮಖೀಜಾ ಅವರು, ಫೆಬ್ರವರಿ 15ರಂದು ನಡೆಯಲಿರುವ ಮಹಾ ಶಿವರಾತ್ರಿಗೂ ಮುನ್ನವೇ ಈ ಮನವಿಯನ್ನು ವಿಚಾರಣೆಗೊಳಪಡಿಸುವಂತೆ ನ್ಯಾಯಾಲಯವನ್ನು ವಿನಂತಿಸಿದರು.
ನ್ಯಾಯಾಲಯ ಮನವಿ ಪರಿಗಣಿಸುವುದಾಗಿ ಹೇಳಿತು. ಆದರೆ ಇಂತಹ ಪ್ರಕರಣಗಳನ್ನು ಸಂಬಂಧಿತ ಹೈಕೋರ್ಟ್‌ಗಳನ್ನು ಸಂಪರ್ಕಿಸದೆ ನೇರವಾಗಿ ಸುಪ್ರೀಂ ಕೋರ್ಟ್‌ಗೆ ತರುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿತು.
“ಎಲ್ಲಾ ಅರ್ಜಿಗಳನ್ನು ಏಕೆ ಸಂವಿಧಾನದ 32ನೇ ವಿಧಿಯಡಿ ಸಲ್ಲಿಸಲಾಗುತ್ತಿದೆ? ಕಾನೂನು ಅನುಕೂಲಕರವಾಗಿರುವುದರಿಂದ ಮನವಿಗಳು ಇಲ್ಲಿ ಬರುತ್ತಿವೆ ಎಂಬ ಭಾವನೆ ಮೂಡುತ್ತಿದೆ. ಹೀಗೆ ಮಾಡಿದರೆ ಹೈಕೋರ್ಟ್‌ಗಳು ಕಾರ್ಯನಿರ್ವಹಿಸುತ್ತಿಲ್ಲ ಎಂಬ ಸಂದೇಶ ಹೋಗುತ್ತದೆ. ನಾವು ಪರಿಶೀಲಿಸುತ್ತೇವೆ. ನೋಡೋಣ,” ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಹೇಳಿದರು.
ವಿವಾದದ ಕೇಂದ್ರದಲ್ಲಿರುವ ಈ ಪವಿತ್ರ ಸ್ಥಳವು 14ನೇ ಶತಮಾನದ ಸೂಫಿ ಸಂತ ಹಜರತ್ ಶೈಖ್ ಅಲಾವುದ್ದೀನ್ ಅಂಸಾರಿ (ಲಡ್ಲೆ ಮಶಾಯಿಕ್ ಎಂದು ಪರಿಚಿತ) ಹಾಗೂ 15ನೇ ಶತಮಾನದ ಹಿಂದೂ ಸಂತ ರಾಘವ ಚೈತನ್ಯರೊಂದಿಗೆ ಸಂಬಂಧ ಹೊಂದಿದೆ. ಇವರಿಬ್ಬರ ಸಮಾಧಿಗಳೂ ಇದೇ ಸ್ಥಳದಲ್ಲಿವೆ. ಆವರಣದಲ್ಲಿ “ರಾಘವ ಚೈತನ್ಯ ಶಿವಲಿಂಗ” ಎಂದು ಕರೆಯಲಾಗುವ ನಿರ್ಮಿತಿಯೂ ಇದೆ.
ಸ್ಥಳದಲ್ಲಿ ಮುಸ್ಲಿಮರು ಮತ್ತು ಹಿಂದೂಗಳು ಪೂಜೆ ಸಲ್ಲಿಸುತ್ತಿದ್ದರು. ಆದರೆ 2022ರಲ್ಲಿ ಶಿವಲಿಂಗದ ಮೇಲೆ ಕೆಲ ದುಷ್ಕರ್ಮಿಗಳು ಮಲ ತೂರಿದ ಘಟನೆ ಬಳಿಕ ಪೂಜಾ ಹಕ್ಕುಗಳ ವಿಷಯವಾಗಿ ಸಮುದಾಯಗಳ ಮಧ್ಯೆ ಉದ್ವಿಗ್ನತೆ ಉಂಟಾಯಿತು.
2025ರ ಫೆಬ್ರವರಿಯಲ್ಲಿ ಕರ್ನಾಟಕ ಹೈಕೋರ್ಟ್ ಹಿಂದೂ ಸಮುದಾಯದ 15 ಮಂದಿಗೆ ರಾಘವ ಚೈತನ್ಯ ಶಿವಲಿಂಗದ ಬಳಿ ಶಿವರಾತ್ರಿ ಪೂಜೆ ನಡೆಸಲು ಅನುಮತಿ ನೀಡಿತ್ತು. ಅದೇ ಸಂದರ್ಭದಲ್ಲಿ ಕಠಿಣ ಪೊಲೀಸ್ ಬಂದೋಬಸ್ತ್‌ನಡಿ ಪೂಜೆ ನೆರವೇರಿಸಲಾಯಿತು.
ಅದರ ಹಿಂದಿನ ವರ್ಷ ಕೂಡ ನ್ಯಾಯಾಲಯದ ಆದೇಶದ ಮೇರೆಗೆ 15 ಹಿಂದೂಗಳಿಗೆ ದರ್ಗಾ ಆವರಣ ಪ್ರವೇಶಿಸಿ ಶಿವರಾತ್ರಿ ಆಚರಣೆ ಮಾಡಲು ಅನುಮತಿ ನೀಡಲಾಗಿದ್ದು, ಯಾವುದೇ ಅಹಿತಕರ ಘಟನೆಗಳಿಲ್ಲದೆ ಪೂಜೆ ನಡೆದಿರುವುದು ವರದಿಯಾಗಿತ್ತು.
ಪ್ರಸ್ತುತ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಮನವಿ ನ್ಯಾಯಾಲಯಗಳಿಂದ ಮಧ್ಯಂತರ ಆದೇಶಗಳನ್ನು ಪಡೆಯುವ ಮೂಲಕ ಧಾರ್ಮಿಕ ಸ್ಥಳದ ಸ್ವರೂಪ ಬದಲಾಯಿಸುವ ಸಂಘಟಿತ ಮಾದರಿ ಇದೆ ಎಂದಿದೆ.
1991ರ ಧಾರ್ಮಿಕ ಸ್ಥಳಗಳ ಕಾಯಿದೆಯಲ್ಲಿ ನಿರ್ಬಂಧಿತವಾಗಿರುವ ವಿಷಯಗಳನ್ನು ಹಬ್ಬದ ಸಂದರ್ಭಗಳಲ್ಲಿ ಪೊಲೀಸ್ ಸಹಾಯದಿಂದ ಪ್ರವೇಶ ಪಡೆದು ಸಾಧಿಸಲು ಯತ್ನಿಸಲಾಗುತ್ತಿದೆ ಎಂದು ಆರೋಪಿಸಲಾಗಿದೆ.
1968ರಲ್ಲಿ ಆಳಂದ ಪಟ್ಟಣ ಪಂಚಾಯಿತಿ ದರ್ಗಾ ಆವರಣದಲ್ಲಿ ಸಮಾಧಿ/ದೇವಾಲಯ ನಿರ್ಮಾಣಕ್ಕೆ ಅನುಮತಿ ನಿರಾಕರಿಸಿ, ಅದು ಮುಸ್ಲಿಂ ಮಜಾರ್ ಮತ್ತು ವಕ್ಫ್ ಆಸ್ತಿ ಎಂದು ದಾಖಲಿಸಿತ್ತು. ನಂತರವೂ ಸಿವಿಲ್ ಮೊಕದ್ದಮೆಗಳ ಮೂಲಕ ಧಾರ್ಮಿಕ ಸ್ವರೂಪ ಪ್ರಶ್ನಿಸಲು ನಡೆದ ಯತ್ನಗಳು ವಿಫಲವಾಗಿವೆ. ವ್ಯಾಜ್ಯಗಳು ವಿಫಲವಾದ ಬಳಿಕ 2022ರಲ್ಲಿ “ಆಳಂದ್ ಚಲೋ” ಪಾದಯಾತ್ರೆ ಘೋಷಿಸಲಾಯಿತಾದರೂ, ವಕ್ಫ್ ನ್ಯಾಯಮಂಡಳಿ ಅದನ್ನು ತಡೆದಿತ್ತು ಎಂದು ಅರ್ಜಿ ವಿವರಿಸಿದೆ.
ಪ್ರತಿ ವರ್ಷ ಶಿವರಾತ್ರಿಯ ಸಮಯದಲ್ಲಿ ಬೇರೆ ಬೇರೆ ನ್ಯಾಯಾಲಯಗಳಲ್ಲಿ ಮನವಿ ಸಲ್ಲಿಸಿ ತಾತ್ಕಾಲಿಕ ಪ್ರವೇಶವನ್ನು ಸ್ಥಿರ ಧಾರ್ಮಿಕ ಆಚರಣೆ ಎಂದು ಸ್ಥಾಪಿಸಲು ಮತ್ತು ನಂತರ ಸ್ಥಳದ ಸ್ವರೂಪ ಬದಲಿಸಲು ಯತ್ನಿಸಲಾಗುತ್ತಿದೆ. ಪ್ರಸಕ್ತ ವರ್ಷವೂ ಸಿದ್ರಾಮಯ್ಯ ಹಿರೇಮಠ ಎಂಬುವರು ಹೈಕೋರ್ಟ್‌ನಲ್ಲಿ ಸಲ್ಲಿಸಿದ ಹೊಸ ರಿಟ್ ಮನವಿ ಕೂಡ ಇದೇ ಕ್ರಮದ ಮುಂದುವರಿಕೆಯಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.