ಬರ ಪರಿಹಾರ: ಮುಂದಿನ ಸೋಮವಾರದೊಳಗೆ ಸಕಾರಾತ್ಮಕ ಬೆಳವಣಿಗೆಯ ಭರವಸೆಯನ್ನು ಸುಪ್ರೀಂ ಕೋರ್ಟ್‌ಗೆ ನೀಡಿದ ಕೇಂದ್ರ

ದೇಶದಲ್ಲಿ ಒಕ್ಕೂಟ ವ್ಯವಸ್ಥೆ ಇರುವುದರಿಂದ ಸೌಹಾರ್ದಯುತವಾಗಿ ನಡೆದುಕೊಳ್ಳಬೇಕು ಎಂದು ನ್ಯಾಯಾಲಯ ಕಿವಿಮಾತು ಹೇಳಿತು.
karnataka and supreme court
karnataka and supreme court

ಬರಪರಿಸ್ಥಿತಿಗೆ ಸಂಬಂಧಿಸಿದಂತೆ ಕರ್ನಾಟಕದ ಕೆಲ ಪ್ರದೇಶಗಳಿಗೆ ನೆರವು ನೀಡುವುದಕ್ಕಾಗಿ ರಾಜ್ಯ ಸರ್ಕಾರಕ್ಕೆ ಹಣಕಾಸು ನೆರವು ಬಿಡುಗಡೆ ಮಾಡಲು ಭಾರತ ಚುನಾವಣಾ ಆಯೋಗ (ಇಸಿಐ) ಅನುಮತಿ ನೀಡಿರುವುದಾಗಿ ಕೇಂದ್ರ ಸರ್ಕಾರ  ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ [ಕರ್ನಾಟಕ ಸರ್ಕಾರ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].

ಸಮಸ್ಯೆ ಕುರಿತು ಶೀಘ್ರ ವ್ಯವಹರಿಸಲಾಗುವುದು ಎಂದು ಕೇಂದ್ರ ಸರ್ಕಾರದ ಪರಮೋಚ್ಚ ಕಾನೂನು ಅಧಿಕಾರಿಯಾದ ಅಟಾರ್ನಿ ಜನರಲ್‌ ಆರ್‌ ವೆಂಕಟರಮಣಿ ಅವರು ನ್ಯಾಯಾಲಯಕ್ಕೆ ತಿಳಿಸಿದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠ ವಿಚಾರಣೆ ಮುಂದೂಡಿತು.

ಈಗ ಯಾವುದೇ ವಾದದ ಅಗತ್ಯವಿಲ್ಲ. ಸೋಮವಾರದ ವೇಳೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ಬೆಳವಣಿಗೆಗಳು ನಡೆಯಲಿವೆ ಎಂದು ಎ ಜಿ ನ್ಯಾಯಾಲಯಕ್ಕೆ ತಿಳಿಸಿದರು.

ಕರ್ನಾಟಕ ಸರ್ಕಾರವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಕಪಿಲ್‌ ಸಿಬಲ್‌ ಅವರು ಕೇಂದ್ರ ಸರ್ಕಾರದ ಮುಂದೂಡಿಕೆ ಮನವಿಯನ್ನು ವಿರೋಧಿಸಲಿಲ್ಲ.

ದೇಶದಲ್ಲಿ ಒಕ್ಕೂಟ ವ್ಯವಸ್ಥೆ ಇರುವುದರಿಂದ ಸೌಹಾರ್ದಯುತವಾಗಿ ನಡೆದುಕೊಳ್ಳಬೇಕು ಎಂದು ನ್ಯಾಯಾಲಯ ಕಿವಿಮಾತು ಹೇಳಿತು.

ರಾಜ್ಯ ತೀವ್ರ ಬರದ ಸಂಕಷ್ಟಕ್ಕೆ ಸಿಲುಕಿದ್ದು, ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ (ಎನ್‌ಡಿಆರ್‌ಎಫ್‌) ಕೇಂದ್ರ ಸರ್ಕಾರ ರಾಜ್ಯಕ್ಕೆ ಹಣಕಾಸು ನೆರವು ನೀಡುತ್ತಿಲ್ಲ ಎಂದು ಆರೋಪಿಸಿ ಕರ್ನಾಟಕ ಸಲ್ಲಿಸಿದ್ದ ಮನವಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಅಂಶಗಳನ್ನು ತಿಳಿಸಿತು.

ಕೇಂದ್ರ ಸರ್ಕಾರದ ಮನಸೋಇಚ್ಛೆಯ ಕ್ರಮಗಳಿಂದಾಗಿ ಕರ್ನಾಟಕದ ಜನತೆಯ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುವುದರಿಂದ ಸುಪ್ರೀಂ ಕೋರ್ಟ್‌ಅನ್ನು ತಾನು ವಿಧಿಯಿಲ್ಲದೇ ಎಡತಾಕಬೇಕಾಯಿತು ಸರ್ಕಾರ ಮನವಿಯಲ್ಲಿ ತಿಳಿಸಿತ್ತು.

ವಿಪತ್ತು ನಿರ್ವಹಣಾ ಕೈಪಿಡಿಯ ಅಡಿ ಅಂತರ-ಸಚಿವಾಲಯ ಕೇಂದ್ರ ತಂಡ (ಐಎಂಸಿಟಿ) ವರದಿ ನೀಡಿದ ತಿಂಗಳ ಒಳಗೆ ಎನ್‌ಡಿಆರ್‌ಎಫ್‌ನಿಂದ ನೆರವು ಬಿಡುಗಡೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಅಂತಿಮ ನಿರ್ಧಾರ ಕೈಗೊಳ್ಳಬೇಕು. ಐಎಂಸಿಟಿ ತಂಡ 2023ರ ಅಕ್ಟೋಬರ್‌ 4ರಿಂದ 9ರವರೆಗೆ ಹಲವು ಜಿಲ್ಲೆಗಳಿಗೆ ಭೇಟಿ ನೀಡಿ ಬರ ಕುರಿತ ಸಮಗ್ರ ವರದಿ ಸಲ್ಲಿಸಿ ಆರು ತಿಂಗಳಾದರೂ ಕೇಂದ್ರ ಸರ್ಕಾರ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಸರ್ಕಾರ ದೂರಿತ್ತು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಯಾವುದೇ ಪೈಪೋಟಿ ಇರಬಾರದು ಎಂಬುದಾಗಿ ಪ್ರಕರಣದ ಹಿಂದಿನ ವಿಚಾರಣೆ ವೇಳೆ ನ್ಯಾಯಾಲಯ ಬುದ್ಧಿಮಾತು ಹೇಳಿತ್ತು.

Related Stories

No stories found.
Kannada Bar & Bench
kannada.barandbench.com