ಶಿವಮೊಗ್ಗ ಜಿಲೆಟಿನ್‌ ಸ್ಫೋಟ ಪ್ರಕರಣ: ತನಿಖೆಯ ಬಗ್ಗೆ ಹೈಕೋರ್ಟ್‌ಗೆ ಮಾಹಿತಿ ನೀಡಿದ ಸರ್ಕಾರ

ಪ್ರಕರಣದ ತನಿಖೆಯನ್ನು ಇದಾಗಲೇ ಪೂರ್ಣಗೊಳಿಸಲಾಗಿದ್ದು ಮೂವರು ಆರೋಪಿಗಳ ವಿರುದ್ಧ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ ಎಂದು ನ್ಯಾಯಾಲಯಕ್ಕೆ ಮಾಹಿತಿ.
ಶಿವಮೊಗ್ಗ ಜಿಲೆಟಿನ್‌ ಸ್ಫೋಟ ಪ್ರಕರಣ: ತನಿಖೆಯ ಬಗ್ಗೆ ಹೈಕೋರ್ಟ್‌ಗೆ ಮಾಹಿತಿ ನೀಡಿದ ಸರ್ಕಾರ
Karnataka High Court

ಶಿವಮೊಗ್ಗದ ಹುಣಸೋಡು ಬಳಿ ನಡೆದಿದ್ದ ಜಿಲೆಟಿನ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರವು ಹೈಕೋರ್ಟ್‌ಗೆ ಮಾಹಿತಿ ನೀಡಿದ್ದು ತನಿಖೆ ಪೂರ್ಣಗೊಳಿಸಿ ಮೂವರು ಆರೋಪಿಗಳ ವಿರುದ್ಧ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿರುವುದಾಗಿ ತಿಳಿಸಿದೆ.

ಶಿವಮೊಗ್ಗದ ಹುಣಸೋಡು ಬಳಿಯ ಕಲ್ಲು ಗಣಿಗಾರಿಕೆ ಪ್ರದೇಶದಲ್ಲಿ ರಾತ್ರಿ ವೇಳೆ ವಾಹನದಲ್ಲಿದ್ದ ಜಿಲೆಟಿನ್ ಸ್ಫೋಟಗೊಂಡು ಐವರು ಕಾರ್ಮಿಕರು ಸಾವಿಗೀಡಾಗಿದ್ದ ಘಟನೆ ಇದೇ ವರ್ಷ ಜನವರಿ 22ರಂದು ನಡೆದಿತ್ತು. ಘಟನೆಯ ಕುರಿತಾದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕೋರಿ ಹಾಗೂ ಸಾವನ್ನಪ್ಪಿದವರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಮನವಿ ಮಾಡಿ ವಕೀಲ ಡಾ. ಕೆ ಬಿ ವಿಜಯಕುಮಾರ್ ಎನ್ನುವರು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದರು. ಪ್ರಕರಣದ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠವು ಶುಕ್ರವಾರ ನಡೆಸಿತು.

ಈ ವೇಳೆ ವಿಚಾರಣೆಗೆ ಹಾಜರಾದ ರಾಜ್ಯ ಸರ್ಕಾರದ ಪರ ವಕೀಲರು, ಪ್ರಕರಣದ ತನಿಖೆಯನ್ನು ಇದಾಗಲೇ ಪೂರ್ಣಗೊಳಿಸಲಾಗಿದ್ದು ಸುಧಾಕರ್, ನರಸಿಂಹ ಮತ್ತು ಅವಿನಾಶ್ ಕುಲಕರ್ಣಿ ಎಂಬ ಆರೋಪಿಗಳ ವಿರುದ್ಧ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.

ಮುಂದುವರೆದು, ಘಟನೆಯಲ್ಲಿ ಮೃತಪಟ್ಟ ಐವರ ಕುಟುಂಬಗಳಿಗೆ ತಲಾ ರೂ. 5 ಲಕ್ಷ ಪರಿಹಾರ ನೀಡಲಾಗಿದೆ. ಹಿರಿಯ ಅಧಿಕಾರಿ ಮತ್ತು ತಜ್ಞರ ನೇತೃತ್ವದಲ್ಲಿ ತಂಡ ರಚನೆ ಮಾಡಿದ್ದು ಇದು ಶಿವಮೊಗ್ಗ ಹಾಗೂ ಸುತ್ತಲಿನ ಪ್ರದೇಶದಲ್ಲಿ ಅಕ್ರಮವಾಗಿ ಕಾರ್ಯಚರಣೆ ನಡೆಸುತ್ತಿರುವ ಕಲ್ಲು ಗಣಿಗಾರಿಕೆ ಮತ್ತು ಕ್ರಷರ್ ಘಟಕಗಳ ವಿರುದ್ಧ ಕ್ರಮ ಜರುಗಿಸುತ್ತಿದೆ ಎಂದು ವಿವರಿಸಿದರು.

ಸರ್ಕಾರಿ ವಕೀಲರ ಹೇಳಿಕೆ ದಾಖಲಿಸಿಕೊಂಡ ಪೀಠವು ಪ್ರಕರಣ ಸಂಬಂಧ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ. ಹಾಗಾಗಿ, ಅರ್ಜಿ ವಿಚಾರಣೆ ಮುಂದುವರಿಸುವ ಅಗತ್ಯವಿಲ್ಲ ಎಂದು ತಿಳಿಸಿ ಅರ್ಜಿ ವಿಲೇವಾರಿ ಮಾಡಿತು.

Related Stories

No stories found.
Kannada Bar & Bench
kannada.barandbench.com