[ಪಿಎಸ್‌ಐ ನೇಮಕಾತಿ ಹಗರಣ] ಅಮೃತ್ ಪೌಲ್ ವಿರುದ್ಧ ಇಲಾಖಾ ವಿಚಾರಣೆಗೆ ಹೈಕೋರ್ಟ್ ನಿವೃತ್ತ ನ್ಯಾ. ವೇಣುಗೋಪಾಲ ಗೌಡ ನೇಮಕ

ನೇಮಕಾತಿ ವಿಭಾಗದ ಪೊಲೀಸ್ ಮಹಾನಿರ್ದೇಶಕ ಉಮೇಶ್ ಕುಮಾರ್ ಅವರನ್ನು ಮಂಡನಾಧಿಕಾರಿಯಾಗಿ ನೇಮಿಸಲಾಗಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು ಸೆಪ್ಟೆಂಬರ್ 11ರಂದು ಈ ಸಂಬಂಧ ಪ್ರತ್ಯೇಕ ಆದೇಶಗಳನ್ನು ಹೊರಡಿಸಿದೆ.
IPS officer Amrit Paul and Karnataka HC
IPS officer Amrit Paul and Karnataka HC
Published on

ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿದ್ದ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ (ಪಿಎಸ್‌ಐ) ನೇಮಕಾತಿ ಹಗರಣದ ಪ್ರಮುಖ ಆರೋಪಿಯಾಗಿರುವ ಅಮಾನತುಗೊಂಡಿರುವ ಹಿರಿಯ ಐಪಿಎಸ್ ಅಧಿಕಾರಿ ಅಮೃತ್ ಪೌಲ್‌ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎ ಎನ್ ವೇಣುಗೋಪಾಲ ಗೌಡ ಅವರನ್ನು ವಿಚಾರಣಾಧಿಕಾರಿಯಾಗಿ ರಾಜ್ಯ ಸರ್ಕಾರ ನೇಮಿಸಿದೆ.

ನೇಮಕಾತಿ ವಿಭಾಗದ ಪೊಲೀಸ್ ಮಹಾನಿರ್ದೇಶಕ ಉಮೇಶ್ ಕುಮಾರ್ ಅವರನ್ನು ಮಂಡನಾಧಿಕಾರಿಯಾಗಿ ನೇಮಿಸಲಾಗಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು ಸೆಪ್ಟೆಂಬರ್ 11ರಂದು ಈ ಸಂಬಂಧ ಪ್ರತ್ಯೇಕ ಆದೇಶಗಳನ್ನು ಹೊರಡಿಸಿದೆ.

ಬೆಂಗಳೂರು ನಗರದ ಹೈಗ್ರೌಂಡ್ಸ್, ಹಲಸೂರು, ಕೋರಮಂಗಲ, ಯಲಹಂಕ ನ್ಯೂಟೌನ್ ಮತ್ತು ರಾಮಮೂರ್ತಿನಗರ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಐದು ಪ್ರಕರಣಗಳಿಗೆ ಸಂಬಂಧಿಸಿದ ಆರೋಪಗಳ ಕುರಿತು ಇಲಾಖಾ ವಿಚಾರಣೆ ನಡೆಯಲಿದೆ.

ಪಿಎಸ್‌ಐ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ಸಿಐಡಿ ತನಿಖೆ ನಡೆಸುತ್ತಿದ್ದು, ಆಗ ನೇಮಕಾತಿ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿದ್ದ ಅಮೃತ್ ಪೌಲ್‌ ಅವರನ್ನು ಬಂಧಿಸಲಾಗಿತ್ತು. ಬಳಿಕ ಅಖಿಲ ಭಾರತ ಸೇವೆಗಳ (ಶಿಸ್ತು ಮತ್ತು ಮೇಲ್ಮನವಿ) ನಿಯಮಗಳು–1969ರ ಅಡಿ ಅವರನ್ನು ಅಮಾನತುಗೊಳಿಸಲಾಗಿತ್ತು. ಈ ಐದು ಪ್ರಕರಣಗಳಲ್ಲಿ ಅವರ ವಿರುದ್ಧ ತನಿಖೆ ಮತ್ತು ಕಾನೂನು ಕ್ರಮ ಮುಂದುವರಿಸಲು ಸರ್ಕಾರ ಈಗಾಗಲೇ ಸಿಆರ್‌ಪಿಸಿ ಸೆಕ್ಷನ್ 197 ಹಾಗೂ ಕರ್ನಾಟಕ ಪೊಲೀಸ್ ಕಾಯಿದೆಯ ಸೆಕ್ಷನ್ 170ರ ಅಡಿ ಅನುಮತಿ ನೀಡಿತ್ತು.

ಅಮೃತ್ ಪೌಲ್ ಅವರಿಗೆ 2026ರ ಜುಲೈ 9ರಂದು ಆರೋಪಪಟ್ಟಿಯ ಅಂಶಗಳೊಂದಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿತ್ತು. ಆಗಸ್ಟ್ 6ರಂದು ಲಿಖಿತ ಪ್ರತಿವಾದ ಸಲ್ಲಿಸಿದ್ದ ಅವರು, ತಮ್ಮ ವಿರುದ್ಧ ಹೊರಿಸಲಾಗಿರುವ ಎಲ್ಲ ಆರೋಪಗಳನ್ನು ನಿರಾಕರಿಸಿದ್ದರು. ಅವರ ಪ್ರತಿವಾದವನ್ನು ಪರಿಶೀಲಿಸಿದ ಶಿಸ್ತು ಪ್ರಾಧಿಕಾರವು ಆರೋಪಗಳ ಕುರಿತು ಇಲಾಖಾ ವಿಚಾರಣೆ ನಡೆಸಲು ನಿರ್ಧರಿಸಿದೆ.

ಅಖಿಲ ಭಾರತ ಸೇವೆಗಳ (ಶಿಸ್ತು ಮತ್ತು ಮೇಲ್ಮನವಿ) ನಿಯಮಗಳ ನಿಯಮ 8(6)(ಎ) ಅಡಿ ನಿವೃತ್ತ ನ್ಯಾಯಮೂರ್ತಿ ವೇಣುಗೋಪಾಲ ಗೌಡ ಅವರನ್ನು ವಿಚಾರಣಾಧಿಕಾರಿಯಾಗಿ ನೇಮಿಸಲಾಗಿದೆ. ನಿಯಮ 8(6)(ಸಿ) ಅಡಿ ಉಮೇಶ್ ಕುಮಾರ್ ಅವರು ಸರ್ಕಾರದ ಪರವಾಗಿ ಆರೋಪಗಳನ್ನು ಸಮರ್ಥಿಸುವ ದಾಖಲೆ ಮತ್ತು ವಾದಗಳನ್ನು ವಿಚಾರಣಾಧಿಕಾರಿಯ ಮುಂದೆ ಮಂಡಿಸಲಿದ್ದಾರೆ.

ವಿಚಾರಣೆಗೆ ಸ್ಥಳ, ವೈಯಕ್ತಿಕ ಸಹಾಯಕ, ವಾಹನ ಮತ್ತು ಇತರ ಅಗತ್ಯ ಸೌಲಭ್ಯಗಳನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕರು ಮತ್ತು ಪೊಲೀಸ್ ಮಹಾನಿರೀಕ್ಷಕರ ಕಚೇರಿ ಒದಗಿಸಲಿದೆ. ವಿಚಾರಣಾಧಿಕಾರಿಯ ಸಂಭಾವನೆ ಹಾಗೂ ಇತರ ವೆಚ್ಚಗಳ ಕುರಿತು ಪ್ರತ್ಯೇಕ ಆದೇಶ ಹೊರಡಿಸಲಾಗುವುದು ಎಂದು ಸರ್ಕಾರ ಆದೇಶದಲ್ಲಿ ತಿಳಿಸಿದೆ.

ಪ್ರಕರಣದ ಹಿನ್ನೆಲೆ: ರಾಜ್ಯದಲ್ಲಿ 545 ಪಿಎಸ್‌ಐ ಹುದ್ದೆ ನೇಮಕಾತಿಗೆ ನಡೆದ ಪರೀಕ್ಷೆಯನ್ನು 54,287 ಅಭ್ಯರ್ಥಿಗಳು ಎದುರಿಸಿದ್ದರು. ಇಲ್ಲಿ ಪ್ರಾವಿಷನಲ್‌ ಆಯ್ಕೆ ಪಟ್ಟಿಯಲ್ಲಿ ಹೆಸರು ಹೊಂದಿದ್ದ ಹಲವು ಅಭ್ಯರ್ಥಿಗಳು ವಿದ್ಯುನ್ಮಾನ ಸಾಧನಗಳು, ಆನಂತರ ಓಎಂಆರ್‌ ತಿರುಚುವ ಮೂಲಕ ಅನುಕೂಲ ಪಡೆದಿದ್ದರು ಎಂಬುದು ಆರೋಪವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿಯು ಹಲವು ಮಂದಿಯನ್ನು ಬಂಧಿಸಿತ್ತು. ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯದ ಹಲವು ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.

ಅಮೃತ್‌ ಪೌಲ್‌ ಅವರಿಗೆ 5 ಕೋಟಿ ರೂಪಾಯಿ ನೀಡಿದ್ದು, ಹೀಗಾಗಿ ಅವರು ಪಿಎಸ್‌ಐ ಪರೀಕ್ಷೆ ಬರೆದಿದ್ದ ಅಭ್ಯರ್ಥಿಗಳ ಒಎಂಆರ್‌ ಕಿಟ್‌ಬಾಕ್ಸ್‌ಗಳನ್ನು ಇರಿಸಿದ್ದ ಅಲ್ಮೇರಾಗಳ ಕೀಗಳನ್ನು ನೀಡಿದ್ದು, ಇದನ್ನು ಬಳಸಿ ಒಎಂಆರ್‌ ತಿರುಚಿರುವುದಾಗಿ ಪೊಲೀಸ್‌ ನೇಮಕಾತಿ ವಿಭಾಗದಲ್ಲಿ ಉಪ ಪೊಲೀಸ್‌ ವರಿಷ್ಠಾಧಿಕಾರಿಯಾಗಿದ್ದ ಬಂಧಿತರಾಗಿ ಅಮಾನತುಗೊಂಡಿರುವ 31ನೇ ಆರೋಪಿ ಶಾಂತಕುಮಾರ್‌ ಹೇಳಿಕೆ ನೀಡಿದ್ದರು.

ಪ್ರಕರಣ ಸಂಬಂಧ 2022ರ ಜುಲೈ 4ರಂದು ಪೌಲ್ ಅವರನ್ನು ತನಿಖಾಧಿಕಾರಿಗಳು ಬಂಧಿಸಿದ್ದರು. ನಂತರ ಪ್ರಕರಣದ ತನಿಖೆ ನಡೆಸಿದ್ದ ಸಿಐಡಿ ಪೊಲೀಸರು, ಪೌಲ್‌ ವಿರುದ್ಧ ಏಳು ಆರೋಪ ಪಟ್ಟಿ ಸಲ್ಲಿಸಿದ್ದರು. ಹೈಕೋರ್ಟ್‌ 2023ರ ಸೆಪ್ಟೆಂಬರ್‌ 25ರಂದು ಪೌಲ್‌ಗೆ ಜಾಮೀನು ಮಂಜೂರು ಮಾಡಿತ್ತು.

Attachment
PDF
Appointment of IO and PO0001 (1)
Preview
Kannada Bar & Bench
kannada.barandbench.com