ನ್ಯಾ. ದಿನೇಶ್‌ ಕುಮಾರ್‌ ನೇತೃತ್ವದ ಸಲಹಾ ಮಂಡಳಿ ವರದಿ ಆಧರಿಸಿ ಪುನೀತ್‌ ಕೆರೆಹಳ್ಳಿ ಬಿಡುಗಡೆ ಮಾಡಿದ ರಾಜ್ಯ ಸರ್ಕಾರ

ಆಗಸ್ಟ್‌ 19ರಂದು ಪುನೀತ್‌ ಪ್ರಕರಣವನ್ನು ಗೂಂಡಾ ಕಾಯಿದೆ ಅಡಿ ರಚಿಸಲ್ಪಟ್ಟಿರುವ ಸಲಹಾ ಮಂಡಳಿಯ ಮುಂದೆ ಮಂಡಿಸಲಾಗಿದೆ. ನ್ಯಾ. ಪಿ ಎಸ್‌ ದಿನೇಶ್‌ ಕುಮಾರ್‌ ಅವರು ಸಲಹಾ ಮಂಡಳಿಯ ಅಧ್ಯಕ್ಷರಾಗಿದ್ದಾರೆ ಎಂದು ಪೀಠಕ್ಕೆ ತಿಳಿಸಿದ್ದ ಎಸ್‌ಪಿಪಿ.
Punith Kerehalli
Punith Kerehalli
Published on

ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ನೇತೃತ್ವದ ಸಲಹಾ ಮಂಡಳಿಯು ಗೂಂಡಾ ಕಾಯಿದೆ ಅಡಿ ರಾಷ್ಟ್ರ ರಕ್ಷಣಾ ಪಡೆ ಸಂಘಟನೆಯ ಮುಖಂಡ ಪುನೀತ್ ಕುಮಾರ್ ಅಲಿಯಾಸ್ ಪುನೀತ್ ಕೆರೆಹಳ್ಳಿಯನ್ನು “ಬಂಧನದಲ್ಲಿಡಲು ಸಾಕಷ್ಟು ಕಾರಣಗಳಿಲ್ಲ” ಎಂದು ನೀಡಿರುವ ವರದಿ ಆಧರಿಸಿ ರಾಜ್ಯ ಸರ್ಕಾರವು ಪುನೀತ್‌ನನ್ನು ಜೈಲಿನಿಂದ ಬಿಡುಗಡೆ ಮಾಡಿದೆ.

ಕರ್ನಾಟಕ ಕಳ್ಳ ಭಟ್ಟಿ ವ್ಯಾಪಾರಿಗಳ, ಮಾದಕ ವಸ್ತು ಅಪರಾಧಿಗಳ, ಜೂಜುಕೋರರ, ಗೂಂಡಾಗಳ, ಅನೈತಿಕ ವ್ಯವಹಾರ ಅಪರಾಧಿಗಳ, ಕೊಳಚೆ ಪ್ರದೇಶಗಳನ್ನು ಕಬಳಿಸುವವರ, ವಿಡಿಯೋ ಮತ್ತು ಆಡಿಯೋ ಪೈರೇಟ್ಸ್‌ ಚಟುವಟಿಕೆಗಳ ತಡೆ ಅಧಿನಿಯಮ 1985ರ 3ನೇ ಸೆಕ್ಷನ್‌ 1 ಮತ್ತು 2ನೇ ಉಪ ಸೆಕ್ಷನ್‌ ಅಡಿ ಪುನೀತ್‌ನನ್ನು ಬಂಧಿಸಿ ಆಗಸ್ಟ್‌ 11ರಂದು ಬೆಂಗಳೂರು ಪೊಲೀಸ್‌ ಆಯುಕ್ತರು ಆದೇಶ ಹೊರಡಿಸಿದ್ದರು. ಇದನ್ನು ಆಗಸ್ಟ್‌ 17ರಂದು ರಾಜ್ಯ ಸರ್ಕಾರ ಅನುಮೋದಿಸಿತ್ತು.

ಗೂಂಡಾ ಕಾಯಿದೆಯ 9ನೇ ಸೆಕ್ಷನ್‌ ಅಡಿ ರಚಿಸಲ್ಪಟ್ಟ ಹೈಕೋರ್ಟ್‌ ನ್ಯಾಯಮೂರ್ತಿಯೂ ಆದ ಪಿ ಎಸ್‌ ದಿನೇಶ್‌ ಕುಮಾರ್‌ ಅವರ ನೇತೃತ್ವದ ಸಲಹಾ ಮಂಡಳಿಯು ಸೆಪ್ಟೆಂಬರ್‌ 13ರಂದು “ಬಂಧಿಯನ್ನು ಬಂಧನದಲ್ಲಿಡಲು ಸಾಕಷ್ಟು ಕಾರಣಗಳಿಲ್ಲ” ಎಂದು ಅಭಿಪ್ರಾಯಪಟ್ಟು, ವರದಿ ನೀಡಿತ್ತು.

ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಬೆಂಗಳೂರು ಪೊಲೀಸ್‌ ಆಯುಕ್ತರ ಬಂಧನ ಆದೇಶವನ್ನು ಹಿಂಪಡೆದು, ಪುನೀತ್‌ ಕೆರೆಹಳ್ಳಿಯನ್ನು ಬಂಧ ಮುಕ್ತಗೊಳಿಸಿ ಸೆಪ್ಟೆಂಬರ್‌ 16ರಂದು ಆದೇಶಿಸಿದೆ.

ಇದಕ್ಕೂ ಮುನ್ನ, ಪುನೀತ್‌ ಕೆರೆಹಳ್ಳಿಯು ತಮ್ಮನ್ನು ಅಕ್ರಮವಾಗಿ ಗೂಂಡಾ ಕಾಯಿದೆ ಅಡಿ ಬಂಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸ್‌ ಆಯುಕ್ತರು ಮತ್ತು ರಾಜ್ಯ ಸರ್ಕಾರದ ಆದೇಶಗಳನ್ನು ವಜಾ ಮಾಡಬೇಕು ಎಂದು ಕೋರಿ ಕರ್ನಾಟಕ ಹೈಕೋರ್ಟ್‌ಗೆ ಆಗಸ್ಟ್‌ 22ರಂದು ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಸಿದ್ದರು.

ಈ ಪ್ರಕರಣವು ನ್ಯಾಯಮೂರ್ತಿಗಳಾದ ಪಿ ಎಸ್‌ ದಿನೇಶ್‌ ಕುಮಾರ್‌ ಮತ್ತು ಟಿ ಜಿ ಶಿವಶಂಕರೇಗೌಡ ಅವರ ನೇತೃತ್ವದ ವಿಭಾಗೀಯ ಪೀಠದ ಮುಂದೆ ಆಗಸ್ಟ್‌ 30ರಂದು ವಿಚಾರಣೆಗೆ ನಿಗದಿಯಾಗಿತ್ತು.

Also Read
ಗೂಂಡಾ ಕಾಯಿದೆ ಅಡಿ ಪುನೀತ್ ಕೆರೆಹಳ್ಳಿ ಬಂಧನ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌

ಅಂದು ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕ-1 ಬಿ ಎ ಬೆಳ್ಳಿಯಪ್ಪ ಅವರು ಆಗಸ್ಟ್‌ 19ರಂದು ಪುನೀತ್‌ ಕೆರೆಹಳ್ಳಿ ಪ್ರಕರಣವನ್ನು ಗೂಂಡಾ ಕಾಯಿದೆಯ ನಿಬಂಧನೆಯಗಳ ಅಡಿ ರಚಿಸಲ್ಪಟ್ಟಿರುವ ಸಲಹಾ ಮಂಡಳಿಯ ಮುಂದೆ ಮಂಡಿಸಲಾಗಿದೆ. ನ್ಯಾ. ಪಿ ಎಸ್‌ ದಿನೇಶ್‌ ಕುಮಾರ್‌ ಅವರು ಸಲಹಾ ಮಂಡಳಿಯ ಅಧ್ಯಕ್ಷರಾಗಿದ್ದಾರೆ ಎಂದು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಮೂರ್ತಿಗಳಿಂದ ಅಗತ್ಯ ಆದೇಶ ಪಡೆದು ಹಾಲಿ ಪ್ರಕರಣವನ್ನು ನ್ಯಾ. ದಿನೇಶ್‌ ಕುಮಾರ್‌ ಅವರು ಇಲ್ಲದ ಪೀಠದ ಮುಂದೆ ವಿಚಾರಣೆಗೆ ನಿಗದಿಪಡಿಸುವಂತೆ ಪೀಠ ಆದೇಶಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಪುನೀತ್‌ ಕೆರೆಹಳ್ಳಿ ವಿರುದ್ಧ ರಾಜ್ಯದ ವಿವಿಧ ಠಾಣೆಗಳಲ್ಲಿ 11 ಪ್ರಕರಣ ದಾಖಲಾಗಿದ್ದು, ಒಂದರಲ್ಲಿ ಅಪರಾಧಿ ಎಂದು ಘೋಷಿಸಲಾಗಿದೆ. ಇನ್ನೊಂದು ಪ್ರಕರಣದಲ್ಲಿ ಖುಲಾಸೆಯಾಗಿದ್ದಾರೆ ಎಂದು ನ್ಯಾಯಮೂರ್ತಿಗಳಾದ ಕೆ ಸೋಮಶೇಖರ್‌ ಮತ್ತು ಉಮೇಶ್‌ ಎಂ. ಅಡಿಗ ಅವರ ನೇತೃತ್ವದ ವಿಭಾಗೀಯ ಪೀಠಕ್ಕೆ ಆಗಸ್ಟ್‌ 31ರಂದು ಪುನೀತ್‌ ಪ್ರತಿನಿಧಿಸಿದ್ದ ಹಿರಿಯ ವಕೀಲ ಅರುಣ್‌ ಶ್ಯಾಮ್‌ ಅವರು ವಿವರಿಸಿದ್ದರು.

Kannada Bar & Bench
kannada.barandbench.com