ವೈಜ್ಞಾನಿಕ ಮತ್ತು ಕೈಗಾರಿಕ ಸಂಶೋಧನಾ ಒಕ್ಕೂಟ (ಸಿಎಸ್‌ಐಆರ್) – ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆ (ಎನ್‌ಇಇಆರ್‌ಐ), ಪೆಟ್ರೋಲಿಯಂ ಸ್ಫೋಟಕಗಳ ಸಂರಕ್ಷಣಾ ಸಂಸ್ಥೆಯ (ಪಿಇಎಸ್‌ಒ) ಲೋಗೊ ಮತ್ತು ಕ್ಯುಆರ್ ಕೋಡ್ ಹೊಂದಿರುವ ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡುವುದರ ಮೇಲೆ ನಿಗಾ ಇಡುವಂತೆ ರಾಜ್ಯ ಸರ್ಕಾರದ ಪ್ರಾಧಿಕಾರಗಳು, ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಮತ್ತು ಪೊಲೀಸರಿಗೆ ಕರ್ನಾಟಕ ಹೈಕೋರ್ಟ್ ಶುಕ್ರವಾರ ಸೂಚಿಸಿದೆ.
ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರಿದ್ದ ವಿಭಾಗೀಯ ಪೀಠವು ಹಸಿರು ಪಟಾಕಿಗೆ ಸಂಬಂಧಿಸಿದಂತೆ ಆದೇಶ ಹೊರಡಿಸಿದೆ.
ಸಿಎಸ್‌ಐಆರ್ ಅಭಿವೃದ್ಧಿಪಡಿಸಿರುವ ಪಟಾಕಿಗಳು ಸಾಂಪ್ರದಾಯಿಕ ಪಟಾಕಿಗಳಿಗೆ ಹೋಲಿಕೆ ಮಾಡಿದರೆ ಶೇ. 30ರಷ್ಟು ಕಡಿಮೆ ಮಾಲಿನ್ಯಕಾರಕಗಳನ್ನು ಹೊರಸೂಸುತ್ತವೆ.
ಪರಿಸರದಲ್ಲಿ ಕಡಿಮೆ ಮಾಲಿನ್ಯ ಉಂಟು ಮಾಡಬಲ್ಲ ಕಚ್ಚಾ ವಸ್ತುಗಳನ್ನು ಬಳಸಿ ಹಸಿರು ಪಟಾಕಿ ತಯಾರಿಸಲಾಗುತ್ತದೆ. ಈ ಪಟಾಕಿಗಳಲ್ಲಿ ಬಳಸುವ ರಾಸಾಯನಿಕಗಳು ಮಾಲಿನ್ಯಕಾರಕ ಕಣಗಳು ಪರಿಸರದ ಜೊತೆ ಸೇರುವುದನ್ನು ಗಣನೀಯವಾಗಿ ಕಡಿಮೆ ಮಾಡುತ್ತವೆ.
ಸಾಂಪ್ರದಾಯಿಕ ಪಟಾಕಿಗಳು 160 ಡೆಸಿಬಲ್ ಶಬ್ದ ಉಂಟು ಮಾಡಿದರೆ ಹಸಿರು ಪಟಾಕಿಗಳು 110-125 ಡೆಸಿಬಲ್ ಶಬ್ದ ಮಾಡುತ್ತವೆ.
ಹಸಿರು ಪಟಾಕಿಗಳ ಸಮ್ಮಿಶ್ರ ಬಳಸಿ ಪಟಾಕಿ ತಯಾರಿಸುವ ಸಂಬಂಧ ಉತ್ಪಾದಕರು ಸಿಎಸ್‌ಐಆರ್ ಜೊತೆ ಒಪ್ಪಂದ ಮಾಡಿಕೊಳ್ಳಬೇಕು. ಇದುವರೆಗೆ 230 ಕಂಪೆನಿಗಳ ಜೊತೆ ಸಿಎಸ್‌ಐಆರ್ ಜೊತೆ ಒಪ್ಪಂದ ಮಾಡಿಕೊಂಡಿದೆ.
ಭಾರತದಲ್ಲಿ ಮೂರು ವಿಧದ ಹಸಿರು ಪಟಾಕಿಗಳು ಲಭ್ಯ ಇವೆ. ಸುರಕ್ಷಿತವಾಗಿ ನೀರಿನ ಅಂಶ ಬಿಡುಗಡೆ ಮಾಡುವ ಪಟಾಕಿ (ಎಸ್‌ಡಬ್ಲುಎಎಸ್), ಸುರಕ್ಷಿತ ಥರ್ಮೈಟ್ (ಅಲ್ಯೂಮಿನಿಯಂ ಮತ್ತು ಐರನ್ ಆಕ್ಸೈಡ್ ಪೌಡರ್) ಬಳಕೆ ಮಾಡಲಾದ ಪಟಾಕಿ (ಸ್ಟಾರ್), ಕನಿಷ್ಠ ಅಲ್ಯೂಮಿನಿಯಂ ಅಂಶ ಬಳಸಿ ತಯಾರಿಸಲಾದ ಸುರಕ್ಷಿತ ಪಟಾಕಿ (ಎಸ್‌ಎಫ್‌ಎಎಲ್).
ಹಲವು ಸಂದರ್ಭಗಳಲ್ಲಿ ಹಸಿರು ಪಟಾಕಿಯಲ್ಲೂ ಅಲ್ಯೂಮಿನಿಯಂ, ಬೇರಿಯಂ, ಪೊಟಾಷಿಯಂ ನೈಟ್ರೇಟ್ ಮತ್ತು ಕಾರ್ಬನ್ ನಂಥ ಪರಿಸರ ಹಾನಿಕರ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಆದರೆ, ಅವುಗಳ ಸಮ್ಮಿಶ್ರಣ ಕಡಿಮೆ ಪ್ರಮಾಣದಲ್ಲಿರುತ್ತದೆ. ಕೆಲವು ಹಸಿರು ಪಟಾಕಿಗಳಲ್ಲಿ ಅವುಗಳನ್ನು ಬಳಸುವುದಿಲ್ಲ.
ಬೇರಿಯಂ ಸಾಲ್ಟ್ ಹೊಂದಿಲ್ಲದ ಹಸಿರು ಪಟಾಕಿ ಉತ್ಪಾದಿಸಲು ಅನುಮತಿ. ಪರವಾನಗಿ ಹೊಂದಿರುವ ನೋಂದಾಯಿತ ಮಾರಾಟಗಾರರು ನವೆಂಬರ್ 7 ರಿಂದ 16ರ ವರೆಗೆ ಸೂಚಿತ ಸ್ಥಳಗಳಲ್ಲಿ ಪಟಾಕಿ ಮಾರಾಟಕ್ಕೆ ಅವಕಾಶ ನೀಡಲಾಗಿದೆ.
ಪಟಾಕಿ ಮಾರಾಟ ಮಾಡುವ ಪ್ರತಿ ಅಂಗಡಿಗಳ ನಡುವೆ ಆರು ಮೀಟರ್ ಅಂತರವಿರಬೇಕು. ಅಂಗಡಿ ಮಾಲೀಕರು ಪರವಾನಗಿ ಪತ್ರವನ್ನು ಕಾಣುವಂತೆ ಇಡಬೇಕು.
ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದ್ದು, ಸ್ಯಾನಿಟೈಜರ್ ಮತ್ತು ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆಯನ್ನು ಅಂಗಡಿಯಲ್ಲಿ ಮಾಡಬೇಕು.