[ಕಾವೇರಿ ನದಿ ನೀರು ವಿವಾದ] ಸಾಕಷ್ಟು ನೀರು ಹರಿಸಿರುವ ಕರ್ನಾಟಕ: ತಮಿಳುನಾಡಿಗೆ ತಿಳಿಸಿದ ಸುಪ್ರೀಂ ಕೋರ್ಟ್‌

ತನ್ನ ಪಾಲಿನ ಕಾವೇರಿ ನೀರನ್ನು ತಕ್ಷಣ ಬಿಡುಗಡೆ ಮಾಡುವಂತೆ ಕರ್ನಾಟಕಕ್ಕೆ ನಿರ್ದೇಶಿಸಬೇಕು ಎಂದು ಕೋರಿರುವ ತಮಿಳುನಾಡು ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ನಡೆಸಿತು.
Krishna Raja Sagara dam and Cauvery River
Krishna Raja Sagara dam and Cauvery RiverImage for representative purpose
Published on

ತಮಿಳುನಾಡು ರಾಜ್ಯವು ತನಗೆ ಹಂಚಿಕೆಯಾಗಿರುವುದಕ್ಕಿಂತ ಹೆಚ್ಚಿನ ನೀರನ್ನು ಕಾವೇರಿ ನದಿಯಿಂದ ಪಡೆದುಕೊಂಡಂತೆ ಕಾಣುತ್ತಿದೆ ಎಂದು ಸುಪ್ರೀಂ ಕೋರ್ಟ್‌ ಸೋಮವಾರ ಹೇಳಿದೆ.

ತಕ್ಷಣ ತನ್ನ ಪಾಲಿನ ಕಾವೇರಿ ನೀರು ಬಿಡುಗಡೆ ಮಾಡಲು ಕರ್ನಾಟಕಕ್ಕೆ ನಿರ್ದೇಶಿಸಬೇಕು ಎಂದು ಕೋರಿ ತಮಿಳುನಾಡು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ವೇಳೆ ನ್ಯಾಯಮೂರ್ತಿಗಳಾದ ವಿಕ್ರಮ್‌ ನಾಥ್‌ ಮತ್ತು ಸಂದೀಪ್‌ ಮೆಹ್ತಾ ಅವರ ವಿಭಾಗೀಯ ಪೀಠ ಮೇಲಿನಂತೆ ಹೇಳಿದೆ.

ಮಳೆ ಕೊರತೆಯ ಸಂದರ್ಭದಲ್ಲಿಯೂ ಕರ್ನಾಟಕದಿಂದ ರಾಜ್ಯಕ್ಕೆ ಹಂಚಿಕೆಯಾಗಿರುಷ್ಟು ನೀರು ಬಿಡುಗಡೆಯಾಗಿಲ್ಲ ಎಂದು ತಮಿಳುನಾಡು ಆರೋಪಿಸಿದೆ.

ಆಗ ಪೀಠವು “9.720ಕ್ಕೆ ಬದಲಾಗಿ ಒಟ್ಟಾರೆ ನೀರನ್ನು ಸೇರಿಸಿದರೆ ನಿಮಗೆ ಹೆಚ್ಚೇ ಲಭ್ಯವಾಗಿದೆ. ಈ ಹಿಂದೆಯೂ ಕರ್ನಾಟಕವು ಸಾಕಷ್ಟು ನೀರು ಹರಿಸಿದೆ” ಎಂದು ನ್ಯಾಯಾಲಯ ಹೇಳಿತು.

ತಮಿಳುನಾಡಿಗೆ ನೀರು ಹಂಚಿಕೆ ವಿಚಾರದಲ್ಲಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ನಿರ್ದೇಶನಗಳನ್ನು ಪಾಲಿಸುವಂತೆ ಕರ್ನಾಟಕಕ್ಕೆ ನಿರ್ದೇಶಿಸಿದ ಸುಪ್ರೀಂ ಕೋರ್ಟ್‌ ವಿಚಾರಣೆ ಮುಂದೂಡಿತು.

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಶಿಫಾರಸ್ಸು ಮಾಡಿರುವ ನೀರಿನ ಪ್ರಮಾಣ ಮತ್ತು ಕರ್ನಾಟಕ ಪೂರೈಸಿರುವ ನೀರು ಎರಡೂ ಕಡಿಮೆಯಾಗಿದೆ. ಕೃಷಿಗೆ ಸೂಕ್ತ ಪ್ರಮಾಣದಲ್ಲಿ ನೀರು ಹಂಚಿಕೆ ಮಾಡಲಾಗುತ್ತಿಲ್ಲ ಎಂದು ತಮಿಳುನಾಡು ವಾದಿಸಿದೆ.

“ತಮಿಳುನಾಡು 14.814 ಟಿಎಂಸಿ ನೀರು ಪಡೆದಿದೆ. ಆದರೆ, 64 ಟಿಎಂಸಿ ನೀರು ಬರಬೇಕಿತ್ತು. ಕನಿಷ್ಠ 35 ಟಿಎಂಸಿಯಾದರೂ ಬರಬೇಕು. ಹಿಂಬಾಕಿಯ ಪ್ರಮಾಣ 20 ಟಿಎಂಸಿಯಾಗಿದೆ. ಪ್ರತಿದಿನ 12,000 ಕ್ಯೂಸೆಕ್ಸ್‌ ನೀರನ್ನು ಪ್ರತಿದಿನ ಪಡೆಯಲು ನಮಗೆ ನಿರ್ದೇಶನವಿದೆ” ಎಂದು ತಮಿಳುನಾಡು ವಕೀಲರು ವಾದಿಸಿದರು.

ಇದನ್ನು ಅಲ್ಲಗಳೆದ ಕರ್ನಾಟಕದ ಹಿರಿಯ ವಕೀಲ ಶ್ಯಾಮ್‌ ದಿವಾನ್‌ ಅವರು “ಈ ಬಾರಿ ಕಾವೇರಿಯಲ್ಲಿ ಅಪಾರ ಪ್ರಮಾಣದ ಮಳೆ ಕೊರತೆಯಾಗಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಪರಿಸ್ಥಿತಿಯ ಅರಿವಿದೆ. ಎರಡು ನಿರ್ದೇಶನಗಳನ್ನು ಪ್ರಾಧಿಕಾರ ನೀಡಿದ್ದು, 3,500 ಕ್ಯೂಸೆಕ್ಸ್‌ ನೀರಿನ ಭರವಸೆ ನೀಡಲಾಗಿತ್ತಾದರೂ ಅದನ್ನು ಮೀರಿ ನೀರು ಹರಿಸಲಾಗಿದೆ. ಸಿಡಬ್ಲ್ಯುಎಂಎ ಆದೇಶ ಪಾಲಿಸುತ್ತಿಲ್ಲ ಎಂಬುದು ಸುಳ್ಳು. ಇಂದು ಬೆಳಿಗ್ಗೆ ತಮಿಳುನಾಡಿಗೆ 12,000 ಕ್ಯೂಸೆಕ್ಸ್‌ ನೀರು ಹರಿದಿದೆ” ಎಂದರು.

ಇದನ್ನು ಪರಿಗಣಿಸಿದ ನ್ಯಾಯಾಲಯವು ಒಂದು ವಾರ ವಿಚಾರಣೆ ಮುಂದೂಡಿತು.

ಕಾವೇರಿ ನದಿ ನೀರು ಹಂಚಿಕೆ ವಿವಾದವು ತಮಿಳುನಾಡು ಮತ್ತು ಕರ್ನಾಟಕದ ನಡುವೆ 1892 ಮತ್ತು 1924ರ ಹಿಂದಿನ ಮದ್ರಾಸ್‌ ಪ್ರೆಸಿಡೆನ್ಸಿ ಮತ್ತು ರಾಜರ ಆಡಳಿತಕ್ಕೆ ಒಳಪಟ್ಟಿದ್ದ ಮೈಸೂರು ರಾಜ್ಯದ ಕಾಲದಿಂದಲೂ ಇದೆ. ಹಲವಾರು ಸುತ್ತಿನ ಸಂಧಾನ ವಿಫಲವಾದ ಬಳಿಕ ಸುಪ್ರೀಂ ಕೋರ್ಟ್‌ ಕಾವೇರಿ ನೀರು ಇತ್ಯರ್ಥ ನ್ಯಾಯ ಮಂಡಳಿಯನ್ನು ರಚಿಸಿದ್ದು, 2007ರಲ್ಲಿ ಅದು ತಮಿಳುನಾಡಿಗೆ ಪ್ರತಿದಿನ ನಿಗದಿತ ನೀರು ಪಡೆಯಲು ಅನುಮತಿಸಿದೆ. ಎರಡೂ ರಾಜ್ಯಗಳು ಆದೇಶ ಮರುಪರಿಶೀಲನಾ ಅರ್ಜಿ ಸಲ್ಲಿಸಿದ ಬಳಿಕ ವಿವಾದ ಮುಂದುವರಿದಿತ್ತು.

ಜಲಾಶಯದಿಂದ ನೀರು ಹಂಚಿಕೆ ಮಾಡಲು ತನ್ನ ಬಳಿ ನೀರಿಲ್ಲ ಎಂದು ಕರ್ನಾಟಕ ಹೇಳಿದ್ದರಿಂದ 2016ರಲ್ಲಿ ಸುಪ್ರೀಂ ಕೋರ್ಟ್‌ಗೆ ಮತ್ತೆ ತಮಿಳುನಾಡು ಅರ್ಜಿ ಸಲ್ಲಿಸಿತ್ತು. ಕಾವೇರಿ ನಿರ್ವಣಾ ಮಂಡಳಿ ರಚಿಸುವಂತೆ ಕೇಂದ್ರಕ್ಕೆ ಸುಪ್ರೀಂ ಕೋರ್ಟ್‌ ನಿರ್ದೇಶಿಸಿತ್ತು. 2023ರಲ್ಲಿ ಪ್ರತಿದಿನ ಪಡೆಯುತ್ತಿರುವ 5,000 ರಿಂದ 7,200 ಕ್ಯೂಸೆಕ್ಸ್‌ ನೀರು ಪಡೆಯಲು ಕೋರಿದ್ದ ತಮಿಳುನಾಡು ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯ ತಿರಸ್ಕರಿಸಿತ್ತು.

Kannada Bar & Bench
kannada.barandbench.com