

ಕಳೆದ ವರ್ಷ ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಮುಂಭಾಗ ಸಂಭವಿಸಿದ ಕಾಲ್ತುಳಿತದ ಹಿನ್ನೆಲೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಆರೋಪಿಗಳಾಗಿರುವ ಡಿಎನ್‌ಎ ಎಂಟರ್‌ಟೈನ್‌ಮೆಂಟ್ ನೆಟ್‌ವರ್ಕ್ಸ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕ ಸುನೀಲ್ ಮ್ಯಾಥ್ಯೂ ಮತ್ತು ಎಸ್ ಕಿರಣ್ ಕುಮಾರ್ ಅವರು ಕರ್ತವ್ಯ ನಿಮಿತ್ತ ವಿದೇಶ ಪ್ರವಾಸ ಕೈಗೊಳ್ಳಲು ಮಂಗಳವಾರ ಕರ್ನಾಟಕ ಹೈಕೋರ್ಟ್ ಅನುಮತಿಸಿದೆ.
ಸುನೀಲ್ ಮತ್ತು ಕಿರಣ್ ಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್ ಆರ್ ಕೃಷ್ಣ ಕುಮಾರ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಸುನೀಲ್ ಮ್ಯಾಥ್ಯೂ ಮತ್ತು ಕಿರಣ್ ಕುಮಾರ್ ಅವರ ಮುಚ್ಚಳಿಕೆಯ ಅಫಿಡವಿಟ್ ಹಾಗೂ ಪ್ರವಾಸದ ಪಟ್ಟಿಯನ್ನು ಪರಿಗಣಿಸಿ ಜೂನ್ 1ರಿಂದ 10ರವರೆಗೆ ಬ್ರೆಜಿಲ್‌ನ ರಿಯೊ ಡಿ ಜನೈರೊಗೆ ಕರ್ತವ್ಯದ ನಿಮಿತ್ತ ಪ್ರವಾಸ ಕೈಗೊಳ್ಳಲು ಅನುಮತಿಸಿ, ವಿಚಾರಣೆಯನ್ನು ಜೂನ್ 12ಕ್ಕೆ ಮುಂದೂಡಿತು.
ಇದಕ್ಕೂ ಮುನ್ನ, ಅರ್ಜಿದಾರರ ಪರ ಹಿರಿಯ ವಕೀಲ ಬಿ ಕೆ ಸಂಪತ್ ಕುಮಾರ್ ಅವರು “ತನಿಖೆ ಮುಗಿದಿದ್ದು, ನ್ಯಾಯಾಲಯದ ಮುಂದೆ ಆರೋಪ ಪಟ್ಟಿ ಇದೆ. ಹನ್ನೊಂದು ತಿಂಗಳಿಂದ ಅರ್ಜಿದಾರರು ಜಾಮೀನಿನ ಮೇಲೆ ಹೊರಗಿದ್ದಾರೆ. ನ್ಯಾಯಾಲಯ ವಿಧಿಸಿರುವ ಯಾವ ಷರತ್ತನ್ನೂ ಉಲ್ಲಂಘಿಸಿಲ್ಲ” ಎಂದರು.
ರಾಜ್ಯ ಸರ್ಕಾರದ ಪರ ವಿಶೇಷ ವಕೀಲ ಬಿ ಟಿ ವೆಂಕಟೇಶ್ ಅವರು “ಆರೋಪ ಪಟ್ಟಿಯಲ್ಲಿ ಅರ್ಜಿದಾರರ ವಿರುದ್ಧ ಗಂಭೀರ ಆರೋಪ ಮಾಡಲಾಗಿದೆ. ಈ ಹಂತದಲ್ಲಿ ಅರ್ಜಿದಾರರಿಗೆ ನೀಡಿರುವ ಜಾಮೀನು ಷರತ್ತುಗಳನ್ನು ಸಡಿಲಿಕೆ ಮಾಡುವುದು ಸರಿಯಲ್ಲ” ಎಂದರು.
ಈ ಹಂತದಲ್ಲಿ ಪೀಠವು “ವಿದೇಶದಿಂದ ಬರುವ ಖಾತರಿ ನೀಡಬೇಕು. ಇದಕ್ಕೆ ಮನೆಯವರಿಂದ ಅಫಿಡವಿಟ್ ಸಲ್ಲಿಸಬೇಕು” ಎಂದಿತು.
ಅದಕ್ಕೆ ಸಂಪತ್ ಕುಮಾರ್ ಅವರು “ಸುನೀಲ್ ಮ್ಯಾಥ್ಯೂ ಅವರು ಐಪಿಎಲ್‌ನ ಎಂಟು ತಂಡಗಳನ್ನು ನಿರ್ವಹಿಸುತ್ತಾರೆ. ಐಪಿಎಲ್‌ನಲ್ಲಿ ಪ್ರತಿದಿನ ಮೂರು ಕಾರ್ಯಕ್ರಮ ಆಯೋಜಿಸಬೇಕು. ಎಲ್ಲಿಗೂ ಸುನೀಲ್ ಹೋಗುವುದಿಲ್ಲ. ಅವರ ಪತ್ನಿ ಇಲ್ಲೇ ಉದ್ಯೋಗದಲ್ಲಿದ್ದಾರೆ” ಎಂದರು.
ಇದಕ್ಕೆ ಪೀಠವು ಸುನೀಲ್ ಮತ್ತು ಕಿರಣ್ ವಿದೇಶದಿಂದ ವಾಪಸ್ಸಾಗುವವರೆಗೆ ಮನೆಯವರು ದೇಶ ತೊರೆಯುವುದಿಲ್ಲ ಎಂಬುದಕ್ಕೆ ಸಂಬಂಧಿಸಿದಂತೆ ಅಫಿಡವಿಟ್ ಸಲ್ಲಿಸಬೇಕು ಎಂದು ನಿರ್ದೇಶಿಸಿತು. ಇದರ ಅನುಪಾಲನೆಗೆ ಸಂಬಂಧಿಸಿದಂತೆ ಅಫಿಡವಿಟ್ ಸಲ್ಲಿಸಿದ್ದನ್ನು ಪರಿಗಣಿಸಿ, ವಿದೇಶ ಪ್ರವಾಸಕ್ಕೆ ಪೀಠ ಅನುಮತಿಸಿತು.
2025ರ ಜೂನ್ 4ರಂದು ಚಿನ್ನಸ್ವಾಮಿ ಕ್ರೀಡಾಂಗಣದ ಮುಂದೆ ಸಂಭವಿಸಿದ ಕಾಲ್ತುಳಿತದಲ್ಲಿ 11 ಜನ ಮೃತಪಟ್ಟು, 50ಕ್ಕೂ ಹೆಚ್ಚು ಜನರು ಗಾಯಗೊಳ್ಳಲು ಆರ್‌ಸಿಬಿ ಮತ್ತು ಡಿಎನ್‌ಎ ಸೂಕ್ತ ರೀತಿಯಲ್ಲಿ ಜನ ಸಂದಣಿ ನಿರ್ವಹಣೆ ಮಾಡದಿರುವುದೇ ಕಾರಣ ಎಂದು ಜೂನ್ 6ರಂದು ಆರ್‌ಸಿಬಿ ಸಂಸ್ಥೆಯ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ನಿಖಿಲ್, ಸುನೀಲ್ ಮ್ಯಾಥ್ಯೂ, ಕಿರಣ್ ಮತ್ತು ಸಮಂತ್ ಅವರನ್ನು ಕಬ್ಬನ್ ಪಾರ್ಕ್ ಪೊಲೀಸರು ಬಂಧಿಸಿದ್ದರು. ಅಂದೇ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು.
ಆನಂತರ 2025ರ ಜೂನ್ 12ರಂದು ಸುನೀಲ್ ಮ್ಯಾಥ್ಯೂ ಮತ್ತಿತರರಿಗೆ ಜಾಮೀನು ಮಂಜೂರು ಮಾಡುವಾಗ ನ್ಯಾಯಾಲಯ ಅನುಮತಿ ಪಡೆಯದೇ ವ್ಯಾಪ್ತಿ ತೊರೆಯುವಂತಿಲ್ಲ ಎಂದು ನಿರ್ದೇಶಿಸಿತ್ತು. ಈ ಷರತ್ತಿನ ಸಡಲಿಕೆ ಮಾಡುವಂತೆ ಸುನೀಲ್ ಮತ್ತು ಕಿರಣ್ ಕೋರಿದ್ದರು.