

ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಕನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಗೆ ಮುಂದಿನ ವರ್ಷದ ಜನವರಿ 3ರವರೆಗೆ ಧಾರವಾಡ ಜಿಲ್ಲೆಗೆ ಪ್ರವೇಶ ನಿರ್ಬಂಧಿಸಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಹೊರಡಿಸಿದ್ದ ಆದೇಶವನ್ನು ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠವು ಮಂಗಳವಾರ ವಜಾಗೊಳಿಸಿದೆ. ಇದರಿಂದ ಕಾಡಸಿದ್ದೇಶ್ವರ ಸ್ವಾಮೀಜಿ ಧಾರವಾಡ ಜಿಲ್ಲಾ ಪ್ರವೇಶವು ಸುಗಮಗೊಂಡಿದೆ.
ಧಾರವಾಡ ಜಿಲ್ಲಾಧಿಕಾರಿಯು 05.11.2025ರಿಂದ 3.01.2026ರವರೆಗೆ ನಿರ್ಬಂಧ ವಿಧಿಸಿ ನವೆಂಬರ್ 4ರಂದು ಹೊರಡಿಸಿದ್ದ ಆದೇಶ ಪ್ರಶ್ನಿಸಿ ಕಾಡಸಿದ್ದೇಶ್ವರ ಸ್ವಾಮೀಜಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.
“ಸ್ವಾಮೀಜಿಯನ್ನು ನಿರ್ಬಂಧಿಸಿ ಜಿಲ್ಲಾಡಳಿತ ಮಾಡಿರುವ ಆದೇಶವು ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಮತ್ತು ಕಾನೂನಾತ್ಮಕ ಪರೀಕ್ಷೆಯಲ್ಲಿ ನಪಾಸಾಗಿದೆ. ಅನುಮಾನದ ಆಧಾರದಲ್ಲಿ ಸ್ವಾಮೀಜಿಯನ್ನು ನಿರ್ಬಂಧಿಸಲಾಗಿದ್ದು, ಯಾವುದೇ ಕಾರಣಗಳನ್ನು ಸರ್ಕಾರ ನೀಡಿಲ್ಲ. ಅರ್ಜಿದಾರ ಸ್ವಾಮೀಜಿಯು ಎಚ್ಚರಿಕೆಯಿಂದ ನಡೆದುಕೊಳ್ಳುತ್ತಾರೆ, ಸ್ವಾತಂತ್ರ್ಯದ ಎಲ್ಲೆಯನ್ನು ಮೀರುವುದಿಲ್ಲ ಎಂಬ ಅವರ ಪರ ವಕೀಲ ಮುಚ್ಚಳಿಕೆಯನ್ನು ದಾಖಲೆಯಲ್ಲಿ ಸ್ವೀಕರಿಸಲಾಗಿದ್ದು, ಅರ್ಜಿ ಪುರಸ್ಕರಿಸಲಾಗಿದೆ” ಎಂದು ನ್ಯಾಯಾಲಯ ಆದೇಶಿಸಿದೆ.
“4.11.2025ರಂದು ಧಾರವಾಡ ಜಿಲ್ಲಾಧಿಕಾರಿ ಹೊರಡಿಸಿರುವ ಆದೇಶವನ್ನು ವಜಾಗೊಳಿಸಲಾಗಿದೆ. ಆಕ್ಷೇಪಿತ ಆದೇಶದ ಪ್ರಕಾರ ಕೈಗೊಂಡಿದ್ದ ಕ್ರಮ ಹಾಗೂ ಕೈಗೊಳ್ಳಬಹುದಾದ ಕ್ರಮಗಳನ್ನೂ ವಜಾಗೊಳಿಸಲಾಗಿದೆ” ಎಂದು ನ್ಯಾಯಾಲಯ ಆದೇಶಿಸಿತು.
ಕಾಡಸಿದ್ದೇಶ್ವರ ಸ್ವಾಮೀಜಿ ಪ್ರತಿನಿಧಿಸಿದ್ದ ವಕೀಲ ದಳವಾಯಿ ವೆಂಕಟೇಶ್ ಅವರು “ಕಾಡಸಿದ್ದೇಶ್ವರ ಸ್ವಾಮೀಜಿಗೆ ಯಾವುದೇ ಷೋಕಾಸ್ ನೋಟಿಸ್ ನೀಡದೇ ಬಿಎನ್‌ಎಸ್‌ಎಸ್ ಸೆಕ್ಷನ್ 163(4) ಅಡಿ ನಿರ್ಬಂಧ ಆದೇಶ ಮಾಡಿರುವ ರಾಜ್ಯ ಸರ್ಕಾರದ ನಿರ್ಧಾರವು ಅಧಿಕಾರ ಮೀರಿದ ದುರುದ್ದೇಶಪೂರಿತ ಕ್ರಮ. ವಿಜಯಪುರ ಜಿಲ್ಲೆ ಪ್ರವೇಶಕ್ಕೆ ನಿರ್ಬಂಧ ವಿಧಿಸಿ ಮಾಡಿರುವ ಆದೇಶವನ್ನು ಬೇರೆ ಕಡೆ ನಿರ್ಬಂಧ ವಿಧಿಸಲು ಬಳಕೆ ಮಾಡಬಾರದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ನಿರ್ಬಂಧ ಆದೇಶದಿಂದ ಅರ್ಜಿದಾರರು ಬೇಕೆಂದಲ್ಲಿಗೆ ಹೋಗಲು ದೊರೆತಿರುವ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಲಿದೆ. ಇಲ್ಲಿ ಸಕಾರಣವಿಲ್ಲದೇ ನಿರ್ಬಂಧ ಆದೇಶ ಮಾಡಲಾಗಿದೆ. 05.11.2025 ರಿಂದ 07.11.2025ರವರೆಗೆ ಕಾಡಸಿದ್ದೇಶ್ವರ ಸ್ವಾಮೀಜಿಯನ್ನು ಜಿಲ್ಲೆಗೆ ಪ್ರವೇಶಿಸದಂತೆ ನಿರ್ಬಂಧಿಸಬೇಕು ಎಂದು ಧಾರವಾಡ ಜಿಲ್ಲೆಯ ಬಸವಪರ ಸಂಘಟನೆ ಮತ್ತು ಜಿಲ್ಲೆಯ ಸಮಸ್ತ ಲಿಂಗಾಯತರು ಮನವಿ ನೀಡಿದ್ದರು. ಆದರೆ, ಎರಡು ದಿನಕ್ಕೆ ಬದಲಾಗಿ ಅವರನ್ನು ಎರಡು ತಿಂಗಳು ನಿರ್ಬಂಧಿಸಿ ಆದೇಶ ಮಾಡಲಾಗಿದೆ” ಎಂದು ಆಕ್ಷೇಪಿಸಿದ್ದರು.
“ಧಾರವಾಡದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ನವೆಂಬರ್ 7ರಂದು ಮುಗಿದಿದೆ. ಬೀದರ್‌ನಲ್ಲಿ ನಡೆದಿದ್ದ ಬಸವ ಸಮಿತಿ ಕಾರ್ಯಕ್ರಮದಲ್ಲಿ ಹಿಂದುತ್ವ ಮತ್ತು ಬಸವತತ್ವ ಬೇರೆ ಬೇರೆ ಎಂದು ಹೇಳಲಾಗಿದ್ದು, ಲಕ್ಷ್ಮಿ ದೇವಿಯನ್ನು ಜೂಲಿ ಲಕ್ಷ್ಮಿ ಇತ್ಯಾದಿ ಎಂದು ಕರೆದಿದ್ದರು. ಇದಕ್ಕೆ ಕಾಡಸಿದ್ದೇಶ್ವರ ಸ್ವಾಮೀಜಿ ಪ್ರತಿಕ್ರಿಯಿಸಿದ್ದಾರೆ. ಖಂಡಿತವಾಗಿಯೂ ಅವಹೇಳನಕಾರಿ ಪದ ಬಳಸುವುದಿಲ್ಲ. ನವೆಂಬರ್ 7ರಂದು ಕಾರ್ಯಕ್ರಮ ಮುಗಿದಿದ್ದು, ಏತಕ್ಕಾಗಿ ಕಾಡಸಿದ್ದೇಶ್ವರ ಸ್ವಾಮೀಜಿ ಅವರನ್ನು 2026 ಜನವರಿ ತಿಂಗಳವರೆಗೆ ನಿರ್ಬಂಧಿಸುತ್ತಿದ್ದಾರೆ ಎನ್ನುವುದು ಗೊತ್ತಿಲ್ಲ. ಕಾರಣವನ್ನೂ ನೀಡಿಲ್ಲ” ಎಂದಿದ್ದರು.
ರಾಜ್ಯ ಸರ್ಕಾರದ ಪರ ಹೆಚ್ಚುವರಿ ಅಡ್ವೊಕೇಟ್ ಜನರಲ್ ಜೆ ಎಂ ಗಂಗಾಧರ್, ಮತ್ತು ಸರ್ಕಾರಿ ವಕೀಲ ಟಿ ಹನುಮರೆಡ್ಡಿ ಅವರು “ಪೊಲೀಸ್ ವರಿಷ್ಠಾಧಿಕಾರಿಯ ವರದಿ ಪಡೆದು ಮ್ಯಾಜಿಸ್ಟ್ರೇಟ್ ಆದೇಶ ಮಾಡಿದ್ದಾರೆ. ಕಾಡಸಿದ್ದೇಶ್ವರ ಸ್ವಾಮೀಜಿಗೆ ಭಾಷೆಯ ಮೇಲೆ ಹಿಡಿತವಿಲ್ಲ. ಮುನ್ನಚ್ಚೆರಿಕೆಯ ಭಾಗವಾಗಿ ನಿರ್ಬಂಧ ವಿಧಿಸಲಾಗಿದೆ. ಸುಪ್ರೀಂ ಕೋರ್ಟ್ ಸಹ ಅವರಿಗೆ ಯಾವುದೇ ಪರಿಹಾರ ನೀಡಿಲ್ಲ. ಜನರ ಭಾವನೆಗಳ ಜೊತೆ ಆಟವಾಡಲು ಸ್ವಾಮೀಜಿ ಯತ್ನಿಸುತ್ತಿದ್ದಾರೆ” ಎಂದಿದ್ದರು.
ವಿಚಾರಣೆಯ ಸಂದರ್ಭದಲ್ಲಿ ಪೀಠವು “ಎಚ್ಚರಿಕೆಯಿಂದ ಮಾತನಾಡುವಂತೆ ಕಾಡಸಿದ್ದೇಶ್ವರ ಸ್ವಾಮೀಜಿಗೆ ನೀವೇಕೆ (ದಳವಾಯಿ ಅವರಿಗೆ) ಹೇಳುವುದಿಲ್ಲ. ನೀವು ಮಠಾಧೀಶರಾಗಿರುವುದರಿಂದ ಪ್ರವಚನ ನೀಡಬೇಕು ಅಷ್ಟೆ. ಅದನ್ನು ರಾಜಕೀಯಗೊಳಿಸಬಾರದು” ಎಂದು ಕಿಡಿಯಾಗಿತ್ತು.
ಪ್ರಕರಣದ ಹಿನ್ನೆಲೆ: ಕಾಡಸಿದ್ದೇಶ್ವರ ಸ್ವಾಮೀಜಿ ಅವರು ಧಾರವಾಡದ ಅಣ್ಣಿಗೇರಿ ತಾಲ್ಲೂಕಿನ ಹಳ್ಳಿಕೇರಿ ಗ್ರಾಮದಲ್ಲಿ 05.11.2025 ರಿಂದ 07.11.2025ರವರೆಗೆ ನಡೆಯಲಿದ್ದ ಸಮರ್ಥ ಸಹಜಾನಂದ ಮಹಾರಾಜರ ಸಪ್ತಾದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಬರಲಿದ್ದರು. ಇದನ್ನು ವಿರೋಧಿಸಿ, ಕಾಡಸಿದ್ಧೇಶ್ವರ ಸ್ವಾಮೀಜಿ ಪ್ರವೇಶಕ್ಕೆ ನಿರ್ಬಂಧಿಸುವಂತೆ ಕೋರಿ ಧಾರವಾಡ ಜಿಲ್ಲೆಯ ಬಸವಪರ ಸಂಘಟನೆ ಮತ್ತು ಜಿಲ್ಲೆಯ ಸಮಸ್ತ ಲಿಂಗಾಯತರು ಜಿಲ್ಲಾಧಿಕಾರಿಗೆ ಮನವಿ ನೀಡಿದ್ದರು. ಇದನ್ನು ಕಾನೂನು ಸುವ್ಯವಸ್ಥೆ ಕಾರಣ ನೀಡಿ ಧಾರವಾಡ ಜಿಲ್ಲಾಧಿಕಾರಿಯು 04.11.2025ರಂದು ಬಿಎನ್‌ಎಸ್‌ಎಸ್ ಸೆಕ್ಷನ್ 163(4) ಅಡಿ ಸ್ವಾಮೀಜಿಗೆ ಧಾರವಾಡ ಜಿಲ್ಲೆಗೆ 05.11.2025ರಿಂದ 3.01.2026ರವರೆಗೆ ಪ್ರವೇಶಿಸದಂತೆ ನಿರ್ಬಂಧಿಸಿದ್ದರು.
ಈಚೆಗೆ ವಿಜಯಪುರಕ್ಕೆ ಪ್ರವೇಶ ನಿರ್ಬಂಧಿಸಿ ಅಲ್ಲಿನ ಜಿಲ್ಲಾಧಿಕಾರಿ ಮಾಡಿದ್ದ ಆದೇಶವನ್ನು ಕಲಬುರ್ಗಿ ಪೀಠವು ಎತ್ತಿ ಹಿಡಿದಿತ್ತು. ಈ ಆದೇಶವನ್ನು ಸುಪ್ರೀಂ ಕೋರ್ಟ್ ಕಾಯಂಗೊಳಿಸಿತ್ತು.