ಮುಸ್ಲಿಂ ಮತದಾರರ ಹೆಸರು ಅಳಿಸಲು ಯತ್ನಿಸಿದ ಆರೋಪ: ಬಿಜೆಪಿ ಶಾಸಕ ರಾಮಮೂರ್ತಿ ವಿರುದ್ಧದ ತನಿಖೆಗೆ ಹೈಕೋರ್ಟ್ ಅನುಮತಿ

ತನಿಖೆಗೆ ತಡೆ ನೀಡಲು ನಿರಾಕರಿಸಿದ ನ್ಯಾಯಾಲಯವು ತನ್ನ ಅನುಮತಿಯಿಲ್ಲದೆ ಅರ್ಜಿದಾರರನ್ನು ಬಂಧಿಸದಂತೆ ಮತ್ತು ಆರೋಪ ಪಟ್ಟಿ ಸಲ್ಲಿಸದಂತೆ ಪೊಲೀಸರಿಗೆ ನಿರ್ದೇಶನ ನೀಡಿದೆ.
SIR
SIR
Published on: 

ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ವೇಳೆ ನಕಲಿ ಫಾರಂ-7 ಅರ್ಜಿಗಳನ್ನು ಸಲ್ಲಿಸುವ ಮೂಲಕ ಆರು ಮುಸ್ಲಿಂ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಳಿಸಲು ಯತ್ನಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಜಯನಗರದ ಬಿಜೆಪಿ ಶಾಸಕ ಸಿಕೆ ರಾಮಮೂರ್ತಿ ಹಾಗೂ ಇತರ ಮೂವರ ವಿರುದ್ಧದ ಪೊಲೀಸ್ ತನಿಖೆಗೆ ಕರ್ನಾಟಕ ಹೈಕೋರ್ಟ್ ಅನುಮತಿ ನೀಡಿದೆ.

ಆದರೆ, ನ್ಯಾಯಾಲಯದ ಅನುಮತಿ ಪಡೆಯದೆ ಅರ್ಜಿದಾರರನ್ನು ಬಂಧಿಸಬಾರದು ಮತ್ತು ಆರೋಪ ಪಟ್ಟಿ ಸಲ್ಲಿಸಬಾರದು ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಈ ಸಂಬಂಧ ರಾಮಕೃಷ್ಣ ಸೇರಿದಂತೆ ನಾಲ್ವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನಂತ್ ರಾಮನಾಥ್ ಹೆಗಡೆ ಅವರು ನವೆಂಬರ್ 20ರಂದು ಈ ಆದೇಶ ನೀಡಿದ್ದಾರೆ. ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸುವಂತೆ ಅರ್ಜಿದಾರರು ಕೋರಿದ್ದರು.

Justice Anant Ramanath Hegde
Justice Anant Ramanath Hegde

ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 7ರಂದು ದಾಖಲಾದ ಎಫ್‌ಐಆರ್‌ನಲ್ಲಿ ಪ್ರಜಾಪ್ರತಿನಿಧಿ ಕಾಯಿದೆ-1950ರ ಸೆಕ್ಷನ್ 31 (ತಪ್ಪು ಹೇಳಿಕೆ ಅಥವಾ ಘೋಷಣೆ ನೀಡುವುದು), ಸೆಕ್ಷನ್ 217(b) (ಸಾರ್ವಜನಿಕ ಸೇವಕರಿಗೆ ಸುಳ್ಳು ಮಾಹಿತಿ ನೀಡುವುದು) ಮತ್ತು ಸೆಕ್ಷನ್ 3(5) (ಹಲವರು ಒಟ್ಟಾಗಿ ಎಸಗುವ ಕೃತ್ಯಕ್ಕೆ ಸಂಬಂಧಿಸಿದ ಸಾಮೂಹಿಕ ಹೊಣೆಗಾರಿಕೆ) ಹಾಗೂ ಭಾರತೀಯ ನ್ಯಾಯ ಸಂಹಿತೆ-2023ರ ಸೆಕ್ಷನ್ 336(2) (ನಕಲಿ ದಾಖಲೆ ಸೃಷ್ಟಿಸುವುದು), 340(2) (ನಕಲಿ ದಾಖಲೆಯನ್ನು ಅಸಲಿ ಎಂದು ತಿಳಿದು ವಂಚನೆಯಿಂದ ಬಳಸುವುದು) ಮತ್ತು 61(2) (ಕ್ರಿಮಿನಲ್ ಪಿತೂರಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ದೂರುದಾರ ತೆಹ್ರಾನ್ ಅಲಿ ಖಾನ್ ಅವರು ತಮ್ಮ ಹೆಸರು ಸೇರಿದಂತೆ ತಮ್ಮ ಕುಟುಂಬದ ಐವರು ಸದಸ್ಯರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುವ ಉದ್ದೇಶದಿಂದ ಅರ್ಜಿದಾರರು ನಕಲಿ ಫಾರಂ-7 ಅರ್ಜಿಗಳನ್ನು ಸಲ್ಲಿಸಿದ್ದಾರೆ ಎಂದು ಆರೋಪಿಸಿದ್ದರು.

ತಾವು ಹಾಗೂ ತಮ್ಮ ಕುಟುಂಬದ ಸದಸ್ಯರು ಕಳೆದ ಸುಮಾರು 50 ವರ್ಷಗಳಿಂದ ಬೆಂಗಳೂರಿನ ಓಲ್ಡ್ ಗುರಪ್ಪನಪಾಳ್ಯದಲ್ಲಿ ವಾಸವಿದ್ದು, ಮತದಾನದ ಹಕ್ಕು ಹೊಂದಿರುವುದಾಗಿ ದೂರಿನಲ್ಲಿ ತಿಳಿಸಿದ್ದರು.

ಅಕ್ಟೋಬರ್ 5ರಂದು ರಾಮಕೃಷ್ಣ ಅವರನ್ನು ಸಂಪರ್ಕಿಸಿದಾಗ, ರಾಮಮೂರ್ತಿ ಅವರ ಕಚೇರಿಯಲ್ಲಿ ರವಿ ಎಂಬ ವ್ಯಕ್ತಿ ನೀಡಿದ್ದ ಫಾರಂ-7 ಅರ್ಜಿಗೆ ತಾನು ಸಹಿ ಹಾಕಿದ್ದಾಗಿ ಅವರು ತಿಳಿಸಿದ್ದರು ಎಂದು ದೂರುದಾರ ಆರೋಪಿಸಿದ್ದರು.

ಬಳಿಕ ರಾಮಕೃಷ್ಣ ಅವರು ಶಾಸಕ ಸಿಕೆ ರಾಮಮೂರ್ತಿ ಅವರೊಂದಿಗೆ ಕಾನ್ಫರೆನ್ಸ್ ಕರೆ ಮೂಲಕ ಮಾತನಾಡಿದ್ದು, ಈ ವೇಳೆ ಫಾರಂ-7 ಅರ್ಜಿ ಸಲ್ಲಿಸಿರುವುದನ್ನು ಶಾಸಕರು ಒಪ್ಪಿಕೊಂಡಿದ್ದರು. ಅಲ್ಲದೆ, ಅರ್ಜಿಯನ್ನು ಹಿಂಪಡೆದು ತಪ್ಪನ್ನು ಸರಿಪಡಿಸುವುದಾಗಿ ಭರವಸೆ ನೀಡಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.

ಇದಕ್ಕೆ ಪ್ರತಿಯಾಗಿ, ಇದೇ ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಫಾರಂ-7 ಅರ್ಜಿಗಳ ಸಲ್ಲಿಕೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕಿ ಸೌಮ್ಯಾ ರೆಡ್ಡಿ ನೀಡಿದ ದೂರಿನ ಮೇರೆಗೆ ಅಕ್ಟೋಬರ್ 5ರಂದು ಜಯನಗರ ಪೊಲೀಸರು ಮತ್ತೊಂದು ಎಫ್‌ಐಆರ್ ದಾಖಲಿಸಿದ್ದಾರೆ. ಆ ಪ್ರಕರಣದಲ್ಲಿಯೂ ತಮ್ಮನ್ನು ಆರೋಪಿಗಳನ್ನಾಗಿ ಮಾಡಲಾಗಿದೆ ಎಂದು ಅರ್ಜಿದಾರರು ವಾದಿಸಿದ್ದರು.

ಒಂದೇ ಫಾರಂ-7 ಪ್ರಕ್ರಿಯೆಗೆ ಸಂಬಂಧಿಸಿದ ಆರೋಪಗಳ ಹಿನ್ನೆಲೆಯಲ್ಲಿ ಎರಡನೇ ಎಫ್‌ಐಆರ್ ದಾಖಲಿಸಿರುವುದು ಕಾನೂನುಬಾಹಿರ ಎಂದು ಅವರು ಪ್ರತಿಪಾದಿಸಿದ್ದರು. ಅಲ್ಲದೆ, ತಮ್ಮ ವಿರುದ್ಧ ನಕಲಿ ದಾಖಲೆ ಸೃಷ್ಟಿಸಿರುವ ಅಥವಾ ನಕಲಿ ದಾಖಲೆಗಳನ್ನು ಬಳಸಿರುವ ಆರೋಪಗಳ ಅಗತ್ಯ ಕಾನೂನು ಅಂಶಗಳು ಸಾಬೀತಾಗಿಲ್ಲ ಎಂದು ವಾದಿಸಿದ್ದರು.

ಆದರೆ, ಈ ವಾದಗಳನ್ನು ಪರಿಗಣಿಸಿದ ನ್ಯಾಯಾಲಯವು ತನಿಖೆಗೆ ತಡೆ ನೀಡಲು ನಿರಾಕರಿಸಿದ್ದು, ಪೊಲೀಸರಿಗೆ ತನಿಖೆ ಮುಂದುವರಿಸಲು ಅವಕಾಶ ನೀಡಿದೆ. ಅದೇ ವೇಳೆ, ನ್ಯಾಯಾಲಯದ ಅನುಮತಿಯಿಲ್ಲದೆ ಬಂಧನ ಹಾಗೂ ಆರೋಪ ಪಟ್ಟಿ ಸಲ್ಲಿಕೆಗೆ ನಿರ್ಬಂಧ ವಿಧಿಸಿದೆ.

MV Anoo Kumar, ASPP
MV Anoo Kumar, ASPP

ಇದೇ ವೇಳೆ, ನವೆಂಬರ್ 17ರಂದು ಕರ್ನಾಟಕ ಹೈಕೋರ್ಟ್, ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಫಾರಂ-7 ಅರ್ಜಿಗಳನ್ನು ದುರ್ಬಳಕೆ ಮಾಡಿಕೊಂಡು ಮುಸ್ಲಿಂ ಮತದಾರರ ಹೆಸರುಗಳನ್ನು ಅಳಿಸಲು ಯತ್ನಿಸಿದ ಆರೋಪಕ್ಕೆ ಸಂಬಂಧಿಸಿದಂತೆ 10 ಮಂದಿಯ ವಿರುದ್ಧ ದಾಖಲಾಗಿದ್ದ ಮೂರು ಎಫ್‌ಐಆರ್‌ಗಳ ತನಿಖೆಗೆ ತಡೆ ನೀಡಿತ್ತು.

ಆದರೆ, ಪ್ರಸ್ತುತ ಪ್ರಕರಣದಲ್ಲಿ ತನಿಖೆಗೆ ತಡೆ ನೀಡಲು ನಿರಾಕರಿಸಿರುವ ಹೈಕೋರ್ಟ್, ದೂರುದಾರರಿಗೆ ನೋಟಿಸ್ ಜಾರಿಗೊಳಿಸಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು 2027ರ ಜನವರಿ 8ಕ್ಕೆ ಮುಂದೂಡಿದೆ.

ಅರ್ಜಿದಾರರ ಪರ ವಕೀಲರಾದ ಅಯ್ಯಪ್ಪ ಕೆ ಜಿ ಮತ್ತು ವಸಂತ ಕುಮಾರ್ ವಾದ ಮಂಡಿಸಿದರು. ರಾಜ್ಯ ಸರ್ಕಾರದ ಪರ ಹೆಚ್ಚುವರಿ ರಾಜ್ಯ ಸರ್ಕಾರಿ ಅಭಿಯೋಜಕ ಅನೂಪ್ ಕುಮಾರ್ ಹಾಜರಿದ್ದರು.