ರಾಜ್ಯ ಪಠ್ಯಕ್ರಮದ ಶಾಲೆಗಳ 5 ಮತ್ತು 8ನೇ ತರಗತಿಯ ವಿದ್ಯಾರ್ಥಿಗಳಿಗೆ ಮಂಡಳಿ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರಕ್ಕೆ ಬುಧವಾರ ಅನುಮತಿಸಿ ಕರ್ನಾಟಕ ಹೈಕೋರ್ಟ್ ಮಧ್ಯಂತರ ಆದೇಶ ಮಾಡಿದೆ.
ಮಂಡಳಿ ಪರೀಕ್ಷೆ ನಡೆಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹೊರಡಿಸಿದ್ದ ಸುತ್ತೋಲೆಯನ್ನು ರದ್ದುಪಡಿಸಿದ್ದ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿರುವ ಮೇಲ್ಮನವಿಯನ್ನು ಆಲಿಸಿದ ನ್ಯಾಯಮೂರ್ತಿಗಳಾದ ಜಿ ನರೇಂದರ್ ಮತ್ತು ಅಶೋಕ್ ಎಸ್. ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠವು ಏಕಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಿದೆ.
ಹತ್ತು ದಿನಗಳ ಬಳಿಕ ಮರು ವೇಳಾಪಟ್ಟಿ ಪ್ರಕಟಿಸಿ, ಪರೀಕ್ಷೆ ನಡೆಸಬೇಕು. ಪಠ್ಯಕ್ರಮದ ಹೊರತಾದ ಪ್ರಶ್ನೆಗಳನ್ನು ಪ್ರಶ್ನೆ ಪತ್ರಿಕೆಯಲ್ಲಿ ಕೇಳುವಂತಿಲ್ಲ. ಮಂಡಳಿಯ ಪರೀಕ್ಷೆಯ ಫಲಿತಾಂಶವನ್ನು ಅರ್ಜಿ ಇತ್ಯರ್ಥವಾಗುವವರೆಗೆ ಸಾರ್ವಜನಿಕಗೊಳಿಸುವಂತಿಲ್ಲ. ಫಲಿತಾಂಶವನ್ನು ಗೌಪ್ಯವಾಗಿ ಶಾಲೆಗಳಿಗೆ ತಲುಪಿಸಬಹುದು. ಆನಂತರ ಶಾಲೆಗಳು ಮಕ್ಕಳಿಗೆ ಗೌಪ್ಯವಾಗಿ ತಲುಪಿಸಬೇಕು ಎಂದು ನ್ಯಾಯಾಲಯವು ಆದೇಶದಲ್ಲಿ ತಿಳಿಸಿದೆ. ಎಲ್ಲವೂ ಅರ್ಜಿಯ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.
ಮಾರ್ಚ್ 10ರಂದು ನ್ಯಾ. ಪ್ರದೀಪ್ ಸಿಂಗ್ ಯೆರೂರ್ ಅವರ ನೇತೃತ್ವದ ಏಕಸದಸ್ಯ ಪೀಠವು ರಾಜ್ಯ ಪಠ್ಯಕ್ರಮದ ಐದು ಮತ್ತು ಎಂಟನೇ ತರಗತಿಯ ವಿದ್ಯಾರ್ಥಿಗಳಿಗೆ ಶಾಲಾ ಮಟ್ಟದ ಮೌಲ್ಯಮಾಪನಕ್ಕೆ ಬದಲಾಗಿ ರಾಜ್ಯ ಮಟ್ಟದ ಮಂಡಳಿ ಪರೀಕ್ಷೆ (ಪಬ್ಲಿಕ್) ನಡೆಸಲು ಶಿಕ್ಷಣ ಇಲಾಖೆ ಹೊರಡಿಸಿದ್ದ ಸುತ್ತೋಲೆಯನ್ನು ಪ್ರಸಕ್ತ ಸಾಲಿಗೆ ಅನ್ವಯಿಸುವಂತೆ ರದ್ದುಪಡಿಸಿತ್ತು.