ನಿಜಗಲ್ಲು ಸಿದ್ದರಬೆಟ್ಟದಲ್ಲಿ ಹನುಮ ಜಯಂತಿಗೆ ಹೈಕೋರ್ಟ್‌ ಅಸ್ತು

ನಿಜಗಲ್ಲು ಸಿದ್ದರಬೆಟ್ಟದಲ್ಲಿ ಹನುಮ ಜಯಂತಿಗೆ ಹೈಕೋರ್ಟ್‌ ಅಸ್ತು
Karnataka High Court

ನಿಜಗಲ್ಲು ಸಿದ್ದರಬೆಟ್ಟದಲ್ಲಿ ಹನುಮ ಜಯಂತಿ ಆಚರಿಸಲು ಬುಧವಾರ ಹೈಕೋರ್ಟ್‌ ಅನುಮತಿ ನೀಡಿದೆ. ನೆಲಮಂಗಲ ವಲಯ ಅರಣ್ಯಾಧಿಕಾರಿಯವರು ಸಿದ್ದರಬೆಟ್ಟದಲ್ಲಿ ಹನುಮ ಜಯಂತಿ ಅಚರಣೆಗೆ ಅನುಮತಿ ನಿರಾಕರಿಸಿದ್ದ ಹಿನ್ನೆಲೆಯಲ್ಲಿ ಪ್ರಕರಣ ಹೈಕೋರ್ಟ್‌ ಮೆಟ್ಟಿಲೇರಿತ್ತು.

ನೆಲಮಂಗಲ ತಾಲ್ಲೂಕಿನ ಸೋಂಪುರ ಹೋಬಳಿಯ ನಿಜಗಲ್‌ ಸಿದ್ದರಬೆಟ್ಟದಲ್ಲಿ ಡಿ.16ರಂದು ಹನುಮ ಜಯಂತಿ ಆಚರಿಸಲು ಶ್ರೀ ನಿಜಗಲ್ಲು ಸಿದ್ದರಬೆಟ್ಟ ದೇವಸ್ಥಾನ ಸೇವಾ ಸಮಿತಿ ಮುಂದಾಗಿತ್ತು. ಆದರೆ ಇದಕ್ಕೆ ವಲಯ ಅರಣ್ಯಾಧಿಕಾರಿಯವರು ಅನುಮತಿ ನಿರಾಕರಿಸಿದ್ದರಿಂದ ದೇವಸ್ಥಾನ ಸೇವಾ ಸಮಿತಿಯು ಜಯಂತಿ ಆಚರಣೆಗೆ ಅನುಮತಿಸಲು ಕೋರಿ ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರ ಪೀಠವು ಅರಣ್ಯಾಧಿಕಾರಿಯವರ ಅದೇಶವನ್ನು ಬದಿಗೆ ಸರಿಸಿ ಉತ್ಸವಕ್ಕೆ ಅನುವು ಮಾಡಿಕೊಟ್ಟಿತು. ಅರ್ಜಿದಾರರನ್ನು ವಕೀಲ ಎಚ್. ಪವನ ಚಂದ್ರ ಶೆಟ್ಟಿ ಪ್ರತಿನಿಧಿಸಿದ್ದರು.

ಹಿನ್ನೆಲೆ:

ಸಿದ್ದರಬೆಟ್ಟದ ಹುನುಮ ದೇವಸ್ಥಾನದಲ್ಲಿ ಹನುಮ ಜಯಂತಿಯಂದು ಪೂಜಾದಿ ಕೈಂಕರ್ಯ ನೆರವೇರಿಸಲು, ಭಕ್ತರು ಹನುಮ ಮಾಲೆಯನ್ನು ಧರಿಸಿ ಬೆಟ್ಟ ಹತ್ತಲು, ಬೆಟ್ಟದ ತಪ್ಪಲಿನ ವೇದಿಕೆಯಲ್ಲಿ ಕಾರ್ಯಕ್ರಮ ಆಯೋಜಿಸಲು ಅನುಮತಿ ನೀಡುವಂತೆ ದೇವಸ್ಥಾನ ಸಮಿತಿಯು ನೆಲಮಂಗಲ ವಲಯ ಅರಣ್ಯಾಧಿಕಾರಿಗೆ ಮನವಿ ಮಾಡಿತ್ತು. ಆದರೆ, ನಿಜಗಲ್ಲು ಸಿದ್ದರಬೆಟ್ಟ ಅರಣ್ಯ ವಲಯವಾಗಿದ್ದು ಬೆಟ್ಟದಲ್ಲಿ ಕಾರ್ಯಕ್ರಮ ನಡೆಸಲು ಅರಣ್ಯ ಇಲಾಖೆ ಅನುಮತಿ ಅಗತ್ಯವಾಗಿದೆ. ತಪ್ಪಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಮಿತಿಗೆ ಸೂಚಿಸಿ ನೆಲಮಂಗಲ ಅರಣ್ಯಾಧಿಕಾರಿಯವರು ಆದೇಶ ಹೊರಡಿಸಿದ್ದರು. ಇದನ್ನು ಪ್ರಶ್ನಿಸಿ ದೇವಸ್ಥಾನ ಸಮಿತಿಯು ಹೈಕೋರ್ಟ್‌ನಲ್ಲಿ ಜಯಂತಿ ಆಚರಣೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿತ್ತು.

Related Stories

No stories found.
Kannada Bar & Bench
kannada.barandbench.com