

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಾಕ್ಷಿಗಳ ಪ್ರತಿ ವಿಚಾರಣೆ ದಿನದಂದು ಆರೋಪಿಗಳ ಖುದ್ದು ಹಾಜರಿ ಅಗತ್ಯವಿಲ್ಲ. ಪಾಟಿ ಸವಾಲು ದಿನದಂದು ಆರೋಪಿಗಳ ಖುದ್ದು ಹಾಜರಾತಿಗೆ ಅವಕಾಶ ಕಲ್ಪಿಸುವುದು ಸೂಕ್ತ ಎಂದು ಗುರುವಾರ ಅಭಿಪ್ರಾಯಪಟ್ಟಿರುವ ಕರ್ನಾಟಕ ಹೈಕೋರ್ಟ್, ಯಾವ ದಿನದಂದು ಪಾಟಿ ಸವಾಲು ನಡೆಸಲಾಗುತ್ತದೆ ಎಂಬುದನ್ನು ನಿರ್ಧರಿಸಿ ಮಾಹಿತಿ ನೀಡುವಂತೆ ದರ್ಶನ್ ಮತ್ತು ತನಿಖಾಧಿಕಾರಿಗಳ ಪರ ವಕೀಲರಿಗೆ ನಿರ್ದೇಶಿಸಿದೆ.
ಸಾಕ್ಷಿಗಳ ವಿಚಾರಣೆ ಸಂದರ್ಭದಲ್ಲಿ ನ್ಯಾಯಾಲಯದಲ್ಲಿ ಖುದ್ದು ಹಾಜರಾಗಲು ದರ್ಶನ್‌ಗೆ ಅನುಮತಿ ನಿರಾಕರಿಸಿದ ಬೆಂಗಳೂರಿನ 59ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯ ಆದೇಶ ಪ್ರಶ್ನಿಸಿ ದರ್ಶನ್ ಪರವಾಗಿ ಪತ್ನಿ ವಿಜಯಲಕ್ಷ್ಮಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ವಿ ಶ್ರೀಶಾನಂದ ಅವರ ಏಕಸದಸ್ಯ ಪೀಠ ನಡೆಸಿತು.
ಅಲ್ಲದೆ, ಪ್ರಕರಣದ ವಿಚಾರಣೆ ಯಾವುದೇ ಕಿರಿಕಿರಿಯಿಲ್ಲದೆ ಸೌಹಾರ್ದಯುತವಾಗಿ ಮತ್ತು ವಿಳಂಬವಿಲ್ಲದೆ ಪೂರ್ಣಗೊಳ್ಳಬೇಕು. ಸಾಕ್ಷಿಗಳ ವಿಚಾರಣೆ ತ್ವರಿತಗತಿಯಲ್ಲಿ ಪೂರ್ಣಗೊಳ್ಳಬೇಕು. ತಾಂತ್ರಿಕ ಸಮಸ್ಯೆಗಳಿಂದ ವಿಳಂಬವಾಗಬಾರದು. ವಿಚಾರಣೆ ವಿಳಂಬವಾದಷ್ಟು ಪ್ರಾಸಿಕ್ಯೂಷನ್‌ಗೆ (ಅಭಿಯೋಜನೆ) ಅಪಾಯ. ತ್ವರಿತಗತಿಯಲ್ಲಿ ವಿಚಾರಣೆ ಪೂರ್ಣಗೊಳ್ಳಲು ಆರೋಪಿಗಳು ಮತ್ತು ಪ್ರಾಸಿಕ್ಯೂಷನ್ ಪರಸ್ಪರ ಸಹಕಾರ ನೀಡಬೇಕು. ಶೀಘ್ರ ವಿಚಾರಣೆ ಮುಗಿದು, ಒಂದು ವೇಳೆ ಖುಲಾಸೆಯಾದರೆ ಆರೋಪಿಗಳು ಬೇಗ ಜೈಲಿನಿಂದ ಬಿಡುಗಡೆಯಾಗಬಹುದು ಎಂದು ನ್ಯಾಯಮೂರ್ತಿಗಳು ಮೌಖಿಕವಾಗಿ ಅಭಿಪ್ರಾಯ ವ್ಯಕ್ತಪಡಿಸಿದರು.
ಇದಕ್ಕೂ ಮುನ್ನ, ದರ್ಶನ್ ಪರ ಹಿರಿಯ ವಕೀಲ ಹಷ್ಮತ್ ಪಾಷಾ ಅವರು “ಸಾಕ್ಷಿಗಳ ಪರ ವಿಚಾರಣೆ ವೇಳೆ ದರ್ಶನ್ ಖುದ್ದು ಹಾಜರಿ ಅವಶ್ಯಕತೆ ಇದೆ. ಆದರೆ ಖುದ್ದಾಗಿ ಹಾಜರಾದರೆ ಅನುಕೂಲವಾಗುತ್ತದೆ” ಎಂದರು.
ತನಿಖಾಧಿಕಾರಿಗಳ ಪರ ವಿಶೇಷ ಸರ್ಕಾರಿ ಅಭಿಯೋಜಕ ಪಿ ಪ್ರಸನ್ನಕುಮಾರ್ ಅವರು “ಯಾವುದೇ ಕಿರಿಕಿರಿಯಿಲ್ಲದೆ ವಿಚಾರಣೆ ನಡೆಯುತ್ತಿದೆ. ವಿಡಿಯೋ ಕಾನ್ಫರೆನ್ಸ್ ವ್ಯವಸ್ಥೆಯಿದ್ದು, ಅದರ ಮೂಲಕವೇ ಆರೋಪಿಗಳು ಹಾಜರಾಗುವುದೇ ಸೂಕ್ತ” ಎಂದರು.
ಆಗ ದರ್ಶನ್ ಪರ ಪಾಷಾ ಅವರನ್ನು ಉದ್ದೇಶಿಸಿ ಪ್ರತಿಕ್ರಿಯಿಸಿದ ಪೀಠವು “ನಿಮ್ಮ ಕಕ್ಷಿದಾರರೊಂದಿಗೆ ಮಾತನಾಡುವುದು ಎಲ್ಲರಿಗೂ ಕೇಳುತ್ತದೆಂಬುದು ನಿಮ್ಮ ಆಕ್ಷೇಪವಿರಬಹುದು. ವಿಡಿಯೋ ಕಾನ್ಫರೆನ್ಸ್‌ನಲ್ಲಿ ಖಾಸಗಿತನದ ಮಾತುಕತೆಗೆ ವ್ಯವಸ್ಥೆ ಮಾಡಿಕೊಡುತ್ತೇವೆ. ಕೋರ್ಟ್ ಕಲಾಪಕ್ಕೆ 15 ನಿಮಿಷ ಮುನ್ನ ವಕೀಲರು ಆರೋಪಿಗಳೊಂದಿಗೆ ಮಾತನಾಡಿ ಅಗತ್ಯ ಸಲಹೆ-ಸೂಚನೆ ಪಡೆಯಬಹುದು. ಆದರೆ, ನ್ಯಾಯಾಲಯಕ್ಕೆ ಕರೆತರಬೇಕೆಂದರೆ ದರ್ಶನ್‌ಗೆ ಪೊಲೀಸರ ಭದ್ರತೆ ಕೊಡಬೇಕು. ನ್ಯಾಯಾಲಯದ ಆವರಣದಲ್ಲಿ ಜನದಟ್ಟಣೆ ಉಂಟಾಗುತ್ತದೆ. ಅದನ್ನ ತಡೆಯುವುದು ಕಷ್ಟ. ಖುದ್ದು ಹಾಜರಾಗಲೇಬೇಕು ಎಂದಾದರೆ ಪರಪ್ಪನ ಅಗ್ರಹಾರ ಜೈಲಿನಲ್ಲೇ ನ್ಯಾಯಾಲಯದ ವ್ಯವಸ್ಥೆ ಮಾಡಿ, ಅಲ್ಲಿಯೇ ವಿಚಾರಣೆ ಮಾಡಲು ಸೂಚಿಸಬಹುದು” ಎಂದಿತು.
ಅಲ್ಲದೆ, “ನಾಳೆ ಸಾಕ್ಷಿಗಳ ವಿಚಾರಣೆ ನಡೆಯುತ್ತದೆ ಎಂದರೆ; ಇಂದೇ ಆರೋಪಿಗಳೊಂದಿಗೆ ಚರ್ಚಿಸಲು ವಕೀಲರಿಗೆ ಅವಕಾಶ ನೀಡಬಹುದು. ಹೆಡ್ ಫೋನ್ ವ್ಯವಸ್ಥೆ ಸಹ ಮಾಡಿಕೊಡುತ್ತೇವೆ. ಲ್ಯಾಪ್‌ಟಾಪ್ನಲ್ಲೇ ವಿಡಿಯೋ ಕಾನ್ಫರೆನ್ಸ್‌ಗೆ ಅವಕಾಶ ಕೊಡಬಹುದು. ಖುದ್ದಾಗಿ ಹಾಜರಾಗುವುದಕ್ಕಿಂತ ವಿಸಿಯಲ್ಲಿಯೇ ಚೆನ್ನಾಗಿ ಕೇಳುತ್ತದೆ. ಮುಖ್ಯ ಸಾಕ್ಷಿಗಳ ವಿಚಾರಣೆಯನ್ನು ಪರಪ್ಪನ ಅಗ್ರಹಾರ ಜೈಲಿನ ನ್ಯಾಯಾಲಯದಲ್ಲೇ ನಡೆಸಬಹುದು. ಯಾವುದೇ ತೊಂದರೆ ಆಗದಂತೆ ವ್ಯವಸ್ಥೆ ಮಾಡಬಹುದು. ಸಂಬಂಧಪಟ್ಟವರನ್ನು ಬಿಟ್ಟು ಬೇರೆ ಯಾರಿಗೂ ಅವಕಾಶ ನೀಡುವುದಿಲ್ಲ. ತಂತ್ರಜ್ಞಾನ ಬಳಸುವುದೇ ಉತ್ತಮ ಆಯ್ಕೆ. ಸಾಕ್ಷಿಗಳ ಎಲ್ಲಾ ವಿಚಾರಣಾ ದಿನದಂದು ಖುದ್ದು ಹಾಜರಾತಿಯಾಗುವ ಬದಲು ಪಾಟಿ ಸವಾಲು ವೇಳೆ ಆರೋಪಿಗಳ ಹಾಜರಿರಲು ಸೂಚಿಸಬಹುದು. ನಿರ್ಬಂಧಿತ ಕೊಠಡಿಯಲ್ಲಿ ವಿಚಾರಣೆ ನಡೆಸಲು ಅವಕಾಶ ನೀಡಬಹುದು” ಎಂದಿತು.
ಆಗ ಹಷ್ಮತ್ ಪಾಷಾ ಅವರು “ಈ ವಾಹನ ದಟ್ಟಣೆಯಲ್ಲಿ ಪರಪ್ಪನ ಅಗ್ರಹಾರ ಜೈಲಿಗೆ ಹೋಗುವುದಕ್ಕೆ ಸಾಧ್ಯವಿಲ್ಲ. ಹೀಗಾಗಿ ಸಾಕ್ಷಿಗಳ ಪಾಟಿ ಸವಾಲು ವೇಳೆ ನ್ಯಾಯಾಲಯಕ್ಕೆ ಹಾಜರುಪಡಿಸಿದರೆ ಉತ್ತಮ. 10 ದಿನಗಳು ಮಾತ್ರ ಖುದ್ದು ಹಾಜರಿಪಡಿಸಿದರೆ ಸಾಕು” ಎಂದು ತಿಳಿಸಿದರು.
ವಾದ-ಪ್ರತಿವಾದ ಆಲಿಸಿದ ಪೀಠವು “ನಾಲ್ಕೈದು ಮಂದಿ ಮಾತ್ರ ಮುಖ್ಯ ಸಾಕ್ಷಿಗಳಿದ್ದಾರೆ. ಹಾಗಾಗಿ, ಸಾಕ್ಷಿಗಳ ಪಾಟಿ ಸವಾಲಿಗೆ ಮೂರು ಸಾಕುತ್ತದೆ. ಅದಕ್ಕೆ ಯಾವ ದಿನಬೇಕು ಆರೋಪಿ ಮತ್ತು ಪ್ರಾಸಿಕ್ಯೂಷನ್ ಪರ ವಕೀಲರು ಚರ್ಚಿಸಿ ಒಂದು ತೀರ್ಮಾನಕ್ಕೆ ಬಂದು ತಿಳಿಸಿದರೆ, ವಿಚಾರಣಾ ನ್ಯಾಯಾಲಯದ ಜೊತೆಗೆ ಸಮಾಲೋಚಿಸಿ ತೀರ್ಮಾನಿಸಬಹುದು” ಎಂದು ವಿಚಾರಣೆಯನ್ನು ಸೆಪ್ಟೆಂಬರ್ 16ಕ್ಕೆ ಮುಂದೂಡಿತು.