ರಾಜ್ಯದಲ್ಲಿನ 'ಬೇಚರಾಕ್‌' ಗ್ರಾಮಗಳ ಮಾಹಿತಿ ಸಲ್ಲಿಸಲು ಸರ್ಕಾರಕ್ಕೆ ಸೂಚಿಸಿದ ಹೈಕೋರ್ಟ್‌

ಶವ ಸಂಸ್ಕಾರಕ್ಕೆ ಜಾಗ ಇಲ್ಲದ ಗ್ರಾಮಗಳಿಗೆ ಸ್ಮಶಾನ ಭೂಮಿ ಒದಗಿಸಿರುವ ಸರ್ಕಾರದ ವರದಿಯನ್ನು ಪರಿಶೀಲಿಸಿ ವಸ್ತುಸ್ಥಿತಿಯನ್ನು ತಿಳಿಸುವಂತೆ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಹಿಂದಿನ ವಿಚಾರಣೆಯಲ್ಲಿ ಹೈಕೋರ್ಟ್ ನಿರ್ದೇಶನ ನೀಡಿತ್ತು.
Karnataka High Court
Karnataka High Court
Published on

ರಾಜ್ಯದಲ್ಲಿರುವ ಜನವಸತಿ ರಹಿತ ‘ಬೇಚರಾಕ್’ ಗ್ರಾಮಗಳ ಪಟ್ಟಿಯನ್ನು ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಮಂಗಳವಾರ ಸೂಚನೆ ನೀಡಿದೆ.

ರಾಜ್ಯದಲ್ಲಿ ಸ್ಮಶಾನ ಜಾಗ ಇಲ್ಲದ ಗ್ರಾಮ ಮತ್ತು ಪಟ್ಟಣ ಪ್ರದೇಶಗಳಿಗೆ ಅಗತ್ಯ ಜಮೀನು ಒದಗಿಸಲು ಸರ್ಕಾರಕ್ಕೆ ನಿರ್ದೇಶಿಸಿದ್ದ ಹೈಕೋರ್ಟ್ ಆದೇಶ ಜಾರಿಯಾಗಿಲ್ಲ ಎಂದು ಆಕ್ಷೇಪಿಸಿ ಬೆಂಗಳೂರು ನಿವಾಸಿ ಮಹಮ್ಮದ್ ಇಕ್ಬಾಲ್ ಎಂಬುವರು ಸಲ್ಲಿಸಿದ್ದ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿಯನ್ನು ನ್ಯಾಯಮೂರ್ತಿ ಬಿ. ವೀರಪ್ಪ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠವು ವಿಚಾರಣೆ ನಡೆಸಿತು.

ಈ ಹಿಂದಿನ ವಿಚಾರಣೆಯ ವೇಳೆ ಶವ ಸಂಸ್ಕಾರಕ್ಕೆ ಜಾಗ ಇಲ್ಲದ ಗ್ರಾಮಗಳಿಗೆ ಸ್ಮಶಾನ ಭೂಮಿ ಒದಗಿಸಿರುವ ಸರ್ಕಾರದ ವರದಿಯನ್ನು ಪರಿಶೀಲಿಸಿ ವಸ್ತುಸ್ಥಿತಿಯನ್ನು ತಿಳಿಸುವಂತೆ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿತ್ತು. ಸರ್ಕಾರದ ಅಂಕಿ-ಅಂಶಗಳಿಗೂ ಮತ್ತು ಪ್ರಾಧಿಕಾರ ಸಂಗ್ರಹಿಸಿದ ಮಾಹಿತಿಗೂ ವ್ಯತ್ಯಾಸವಿದೆ. ರಾಜ್ಯದಲ್ಲಿ ಒಟ್ಟು 29,616 ಗ್ರಾಮಗಳಿದ್ದು, ಅದರಲ್ಲಿ 1,394 ‘ಬೇಚರಾಕ್’ ಗ್ರಾಮಗಳಿವೆ ಎಂದು ಸರ್ಕಾರ ಹೇಳಿದೆ. ಸರ್ಕಾರದ ವರದಿಯಲ್ಲಿ ಗ್ರಾಮಗಳ ಸಂಖ್ಯೆ ಹೇಳಲಾಗಿದೆಯೇ ಹೊರತು ಬೇಚರಾಕ್ ಗ್ರಾಮಗಳ ಪಟ್ಟಿ ಇಲ್ಲ ಎಂದು ಪ್ರಾಧಿಕಾರವು ನ್ಯಾಯಾಲಯದ ಗಮನಕ್ಕೆ ತಂದಿತ್ತು.

ಅದರಂತೆ, ಇಂದು ನಡೆದ ವಿಚಾರಣೆ ವೇಳೆಯೂ ಪ್ರಾಧಿಕಾರದ ಪರ ವಕೀಲರು ಈ ವಿಷಯವನ್ನು ಪೀಠದ ಗಮನಕ್ಕೆ ತಂದರು. ಈ ವೇಳೆ ಪ್ರತಿಕ್ರಿಯಿಸಿದ ಸರ್ಕಾರದ ಪರ ವಕೀಲರು ಬೇಚರಾಕ್ ಗ್ರಾಮಗಳ ಪಟ್ಟಿ ಸಲ್ಲಿಸಲು ಕಾಲಾವಕಾಶ ಕೋರಿದರು. ಇದನ್ನು ಪರಿಗಣಿಸಿದ ನ್ಯಾಯಪೀಠ ವಿಚಾರಣೆಯನ್ನು ಒಂದು ವಾರ ಮುಂದೂಡಿತು.

ಈ ಹಿಂದಿನ ವಿಚಾರಣೆ ಸಂದರ್ಭದಲ್ಲಿ, ಸರ್ಕಾರ ಸಲ್ಲಿಸಿದ್ದ ಪ್ರಮಾಣ ಪತ್ರದಲ್ಲಿ ರಾಜ್ಯದ ಒಟ್ಟು 29,616 ಗ್ರಾಮಗಳ ಪೈಕಿ ಈವರೆಗೆ 27,903 ಗ್ರಾಮಗಳಿಗೆ ಸ್ಮಶಾನಕ್ಕೆ ಜಮೀನು ಒದಗಿಸಲಾಗಿದೆ. 319 ಗ್ರಾಮಗಳಿಗೆ ಸ್ಮಶಾನ ಸೌಲಭ್ಯ ಒದಗಿಸಬೇಕಾಗಿದೆ . 56 ಗ್ರಾಮಗಳಲ್ಲಿ ಆಗಿರುವ ಸ್ಮಶಾನ ಜಾಗದ ಒತ್ತುವರಿಯನ್ನು ತೆರವುಗೊಳಿಸಲಾಗುತ್ತಿದೆ. ಒಟ್ಟು 1,394 ಗ್ರಾಮಗಳು ಬೇಚರಾಕ್ (ಅಧಿಕೃತವಾಗಿ ಕಂದಾಯ ಸ್ಥಾನಮಾನ ಮತ್ತು ಜನ ವಸತಿ ಇಲ್ಲದ) ಗ್ರಾಮಗಳಾಗಿವೆ ಎಂದು ಮಾಹಿತಿ ನೀಡಿತ್ತು.

Kannada Bar & Bench
kannada.barandbench.com