ನ್ಯಾಯಾಲಯ ಕಲಾಪದ ಲೈವ್‌ ಸ್ಟ್ರೀಮ್‌ ವಿಡಿಯೋಗಳನ್ನು ಖಾಸಗಿ ವೇದಿಕೆಗಳು ಬಳಸದಂತೆ ಹೈಕೋರ್ಟ್‌ ಕಟ್ಟುನಿಟ್ಟಿನ ಆದೇಶ

ಲೈವ್‌ ಸ್ಟ್ರೀಮ್‌ ವಿಡಿಯೊ ತೆಗೆಯಲು ಕಹಳೆ ನ್ಯೂಸ್‌, ಫ್ಯಾನ್ಸ್‌ ಟ್ರೋಲ್‌, ಪ್ರತಿಧ್ವನಿ, ಅವನಿಯಾನಗೆ ಹೈಕೋರ್ಟ್‌ ಆದೇಶ. ಈ ವಿಡಿಯೋಗಳನ್ನು ಯೂಟ್ಯೂಬ್‌, ಫೇಸ್‌ಬುಕ್‌, ಎಕ್ಸ್‌ ಕಾರ್ಪ್‌ಗಳು ತಕ್ಷಣ ಡಿಲೀಟ್‌ ಮಾಡಬೇಕು ಎಂದ ನ್ಯಾಯಾಲಯ.
Karnataka HC and Video conference
Karnataka HC and Video conference
Published on

ಕಹಳೆ ನ್ಯೂಸ್‌, ಫ್ಯಾನ್ಸ್‌ ಟ್ರೋಲ್‌, ಪ್ರತಿಧ್ವನಿ, ಅವನಿಯಾನ ಮತ್ತು ರವೀಂದ್ರ ಜೋಶಿ ಕ್ರಿಯೇಷನ್ಸ್‌ ತಮ್ಮ ವೇದಿಕೆಗಳಲ್ಲಿ ಬಳಕೆ ಮಾಡಿರುವ ಕರ್ನಾಟಕ ಹೈಕೋರ್ಟ್‌ ಲೈವ್‌ಸ್ಟ್ರೀಮ್‌ ವಿಡಿಯೋಗಳನ್ನು ತಕ್ಷಣ ತೆಗೆದು ಹಾಕುವಂತೆ ಯೂಟ್ಯೂಬ್‌, ಫೇಸ್‌ಬುಕ್‌, ಎಕ್ಸ್‌ ಕಾರ್ಪ್‌ಗಳಿಗೆ ಕರ್ನಾಟಕ ಹೈಕೋರ್ಟ್‌ ಮಂಗಳವಾರ ನಿರ್ದೇಶಿಸಿದೆ. ಇದೇ ವೇಳೆ ಯಾವುದೇ ಖಾಸಗಿ ವೇದಿಕೆಗಳು ಹೈಕೋರ್ಟ್‌ನ ಲೈವ್‌ಸ್ಟ್ರೀಮ್‌ ವಿಡಿಯೊಗಳನ್ನು ಬಳಸಕೂಡದು ಎಂದು ಕಟ್ಟುನಿಟ್ಟಾಗಿ ಸೂಚಿಸಿದೆ.

ಹೈಕೋರ್ಟ್‌ನ ಲೈವ್‌ ಸ್ಟ್ರೀಮ್‌ ವಿಡಿಯೋಗಳನ್ನು ಹಣ ಮಾಡುವ ಉದ್ದೇಶದಿಂದ ಮನಸೋಇಚ್ಛೆ ಎಡಿಟ್‌ ಮಾಡಿ ಪ್ರಸಾರ ಮಾಡುತ್ತಿರುವುದಕ್ಕೆ ಆಕ್ಷೇಪಿಸಿ ಬೆಂಗಳೂರು ವಕೀಲರ ಸಂಘ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಹೇಮಂತ್‌ ಚಂದನ್‌ಗೌಡರ್‌ ಏಕಸದಸ್ಯ ಪೀಠ ನಡೆಸಿತು.

ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ಪ್ರತಿವಾದಿಗಳಾಗಿರುವ ಕಹಳೆ ನ್ಯೂಸ್‌, ಫ್ಯಾನ್ಸ್‌ ಟ್ರೋಲ್‌, ಪ್ರತಿಧ್ವನಿ, ಅವನಿಯಾನ ಮತ್ತು ರವೀಂದ್ರ ಜೋಶಿ ಕ್ರಿಯೇಷನ್ಸ್‌ ತಮ್ಮ ವೇದಿಕೆಯಲ್ಲಿ ಬಳಸಿರುವ ಹೈಕೋರ್ಟ್‌ ಲೈವ್‌ಸ್ಟ್ರೀಮ್‌ ವಿಡಿಯೊಗಳನ್ನು ತಕ್ಷಣ ತೆಗೆದು ಹಾಕಬೇಕು. ಈ ವೇದಿಕೆಗಳಲ್ಲಿನ ಲೈವ್‌ಸ್ಟ್ರೀಮ್‌ ವಿಡಿಯೊಗಳನ್ನು ಯೂಟ್ಯೂಬ್‌, ಫೇಸ್‌ಬುಕ್‌, ಎಕ್ಸ್‌ ಕಾರ್ಪ್‌ಗಳು ತಕ್ಷಣ ಡಿಲೀಟ್‌ ಮಾಡಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.

ಕಹಳೆ ನ್ಯೂಸ್‌, ಫ್ಯಾನ್ಸ್‌ ಟ್ರೋಲ್‌, ಪ್ರತಿಧ್ವನಿ, ಅವನಿಯಾನ ಮತ್ತು ರವೀಂದ್ರ ಜೋಶಿ ಕ್ರಿಯೇಷನ್ಸ್‌ ಸೇರಿದಂತೆ ಖಾಸಗಿ ವೇದಿಕೆಗಳು ಹೈಕೋರ್ಟ್‌ನ ಲೈವ್‌ಸ್ಟ್ರೀಮ್‌ ವಿಡಿಯೊಗಳನ್ನು ಬಳಸಕೂಡದು. 2022ರ ಜನವರಿ 1ರಂದು ಕರ್ನಾಟಕ ನ್ಯಾಯಾಲಯ ಕಲಾಪಗಳ ನೇರಪ್ರಸಾರ (ಲೈವ್‌ಸ್ಟ್ರೀಮ್‌) ಮತ್ತು ರೆಕಾರ್ಡಿಂಗ್‌ ನಿಯಮಗಳು 2021” ಅನ್ನು ಕರ್ನಾಟಕ ಹೈಕೋರ್ಟ್‌ ಜಾರಿಗೊಳಿಸಿದೆ. ಈ ನಿಯಮಗಳನ್ನು ಕಡ್ಡಾಯವಾಗಿ ಎಲ್ಲರೂ ಪಾಲಿಸಬೇಕು ಎಂದು ಕಟ್ಟುನಿಟ್ಟಿನ ಆದೇಶ ಮಾಡಿದೆ.

ಅಲ್ಲದೇ, ಕೇಂದ್ರ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಇಲಾಖೆ, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ, ಕರ್ನಾಟಕ ಹೈಕೋರ್ಟ್‌ನ ಹೈಕೋರ್ಟ್‌ನ ರಿಜಿಸ್ಟ್ರಾರ್‌ ಜನರಲ್‌, ರಾಜ್ಯ ಸರ್ಕಾರ, ರಾಜ್ಯ ಪೊಲೀಸ್‌ ಮಹಾನಿರ್ದೇಶಕರು, ಯೂಟ್ಯೂಬ್‌, ಫೇಸ್‌ಬುಕ್‌, ಎಕ್ಸ್‌ ಕಾರ್ಪ್‌, ಕಹಳೆ ನ್ಯೂಸ್‌, ಫ್ಯಾನ್ಸ್‌ ಟ್ರೋಲ್‌, ಪ್ರತಿಧ್ವನಿ, ಅವನಿಯಾನ ಮತ್ತು ರವೀಂದ್ರ ಜೋಶಿ ಕ್ರಿಯೇಷನ್ಸ್‌ಗಳಿಗೆ ನ್ಯಾಯಾಲಯ ನೋಟಿಸ್‌ ಜಾರಿ ಮಾಡಿದೆ.  

Also Read
ಕಲಾಪದ ವಿಡಿಯೋಗಳನ್ನು ಸಾರ್ವಜನಿಕರು ಬಳಕೆ ಮಾಡುವುದಕ್ಕೆ ನಿರ್ಬಂಧ: ಹೈಕೋರ್ಟ್‌ ಕದತಟ್ಟಿದ ಎಎಬಿ

ಎಎಬಿ ಪ್ರತಿನಿಧಿಸಿದ್ದ ಹಿರಿಯ ವಕೀಲ ವಿವೇಕ್‌ ಸುಬ್ಬಾರೆಡ್ಡಿ ಮತ್ತು ಇತರರು “ಲೈವ್‌ಸ್ಟ್ರೀಮ್‌ ವಿಡಿಯೊಗಳನ್ನು ಹಣಕ್ಕಾಗಿ ದುರ್ಬಳಕೆಗೆ ಇಳಿದಿರುವ ಕೆಲವು ಡಿಜಿಟಲ್‌ ವೇದಿಕೆಗಳು ಮನಸೋಇಚ್ಛೆ ಎಡಿಟ್‌ ಮಾಡಿ ಪ್ರಸಾರ ಮಾಡುತ್ತಿವೆ. ಅವುಗಳ ವೇದಿಕೆಯಲ್ಲಿ ಪ್ರಸಾರವಾಗಿರುವ ವಿಡಿಯೊಗಳಿಗೆ ಸಾರ್ವಜನಿಕರು ನ್ಯಾಯಮೂರ್ತಿಗಳು ಮತ್ತು ವಕೀಲರು ಎನ್ನದೇ ಅಸಭ್ಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಇದು ನ್ಯಾಯಾಂಗ ನಿಂದನೆಯಾಗಿದೆ. ಈ ವಿಡಿಯೊಗಳನ್ನು ತೆಗೆದು ಹಾಕಲು ನಿರ್ದೇಶಿಸಬೇಕು. ಇಂಥ ವೇದಿಕೆಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದರು.

ಕೇಂದ್ರ ಸರ್ಕಾರದ ಪರವಾಗಿ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಕೆ ಅರವಿಂದ್‌ ಕಾಮತ್‌ ಅವರು “ಲೈವ್‌ಸ್ಟ್ರೀಮ್‌ ವಿಡಿಯೊಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್‌ ನಿಯಮ ರೂಪಿಸಿದೆ. ಈ ಸಂಬಂಧ ಹೈಕೋರ್ಟ್‌ನ ರಿಜಿಸ್ಟ್ರಾರ್‌ ಜನರಲ್‌ ಅವರು ಕ್ರಮಕೈಗೊಂಡರೆ ಸಾಕು" ಎಂದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ನೋಟಿಸ್‌ ಜಾರಿ ಮಾಡಿ, ವಿಚಾರಣೆ ಮುಂದೂಡಿತು.

Kannada Bar & Bench
kannada.barandbench.com