ಆರು ಮಂದಿ ಹತ್ಯೆ: ಖುಲಾಸೆಯಾಗಿದ್ದ ಕೆಎಸ್‌ಆರ್‌ಟಿಸಿ ನಿವೃತ್ತ ಬಸ್‌ ಚಾಲಕನಿಗೆ ಜೀವವಾಧಿ ಶಿಕ್ಷೆ ವಿಧಿಸಿದ ಹೈಕೋರ್ಟ್‌

ಪ್ರಕರಣದಿಂದ ಆರೋಪಿಯನ್ನು ಖುಲಾಸೆಗೊಳಿಸಿದ್ದ ಮೈಸೂರಿನ ಸತ್ರ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಪುರಸ್ಕರಿಸಿರುವ ನ್ಯಾಯಾಲಯ.
ಆರು ಮಂದಿ ಹತ್ಯೆ: ಖುಲಾಸೆಯಾಗಿದ್ದ ಕೆಎಸ್‌ಆರ್‌ಟಿಸಿ ನಿವೃತ್ತ ಬಸ್‌ ಚಾಲಕನಿಗೆ ಜೀವವಾಧಿ ಶಿಕ್ಷೆ ವಿಧಿಸಿದ ಹೈಕೋರ್ಟ್‌
Published on

ಮೈಸೂರಿನಲ್ಲಿ 13 ವರ್ಷಗಳ ಹಿಂದೆ ಹಣಕಾಸಿನ ವೈಷಮ್ಯದಿಂದ ಮನೆಗೆ ಬೆಂಕಿ ಹಚ್ಚಿ ಒಂದೇ ಕುಟುಂಬದ 6 ಜನರ ಹತ್ಯೆ ಮಾಡಿದ ಪ್ರಕರಣದಲ್ಲಿ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ನಿವೃತ್ತ ಚಾಲಕ ಅಬ್ದುಲ್‌ ಷರೀಫ್‌ ಎಂಬಾತನನ್ನು ದೋಷಿ ಎಂದು ಈಚೆಗೆ ಕರ್ನಾಟಕ ಹೈಕೋರ್ಟ್‌ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದೆ.

ಪ್ರಕರಣದಿಂದ ಆರೋಪಿಯನ್ನು ಖುಲಾಸೆಗೊಳಿಸಿದ್ದ ಮೈಸೂರಿನ ಸತ್ರ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಪುರಸ್ಕರಿಸಿರುವ ನ್ಯಾಯಮೂರ್ತಿಗಳಾದ ಎಚ್‌ ಪಿ ಸಂದೇಶ್‌ ಮತ್ತು ಬಿ ಪ್ರಮೋದ್‌ ಅವರ ವಿಭಾಗೀಯ ಪೀಠವು ಆರೋಪಿಯನ್ನು ಖುಲಾಸೆಗೊಳಿಸಿ 2018ರ ಏಪ್ರಿಲ್ 28ರಂದು ಮೈಸೂರಿನ ಎರಡನೇ ಹೆಚ್ಚುವರಿ ಸತ್ರ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿದೆ.

ಜತೆಗೆ, ಅಪರಾಧಿ ಎಸಗಿದ ಕೃತ್ಯದಿಂದ ಆರು ಮಂದಿ ಮೃತಪಟ್ಟಿದ್ದಾರೆ. ಕೃತ್ಯವೆಸಗಿದಾಗ ಆತ 50 ವರ್ಷವಾಗಿತ್ತು, ಈಗ 63 ವರ್ಷವಾಗಿದೆ. ಎಲ್ಲ ಅಂಶಗಳನ್ನು ಪರಿಗಣಿಸಿದರೆ ಐಪಿಸಿ ಸೆಕ್ಷನ್‌ 302 (ಕೊಲೆ), 307 (ಕೊಲೆ ಯತ್ನ) ಮತ್ತು 436 (ಮನೆ, ಪೂಜಾ ಸ್ಥಳ ಅಥವಾ ಆಸ್ತಿ ಪಾಲನೆಗೆ ಬಳಸುವ ಕಟ್ಟಡವನ್ನು ಬೆಂಕಿ ಅಥವಾ ಸ್ಫೋಟಕ ವಸ್ತುಗಳನ್ನು ಬಳಸಿ ನಾಶ ಮಾಡುವುದು) ಅಡಿಯ ಅಪರಾಧ ಕೃತ್ಯ ಸಾಬೀತಾಗಿರುವುದರಿಂದ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತಿದೆ ಎಂದು ಆದೇಶಿಸಿರುವ ನ್ಯಾಯಾಲಯವು, ಅಬ್ದುಲ್ ಷರೀಫ್‌ಗೆ ನ್ಯಾಯಾಲಯದ ಮುಂದೆ ಶರಣಾಗುವಂತೆ ಸೂಚನೆ ನೀಡಿದೆ.

ಆರೋಪಿಯನ್ನು ಖುಲಾಸೆಗೊಳಿಸಲು ವಿಚಾರಣಾ ನ್ಯಾಯಾಲಯ ನೀಡಿರುವ ಕಾರಣಗಳಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್‌) ವರದಿಯನ್ನು ಪರಿಗಣಿಸುವಲ್ಲಿ ಒಂದು ವಿಚಿತ್ರ ನಿರ್ಧಾರ ತಳೆದಿದೆ. ಏಕೆಂದರೆ, ನ್ಯಾಯಾಲಯದ ಮುಂದೆ ಸ್ಪಷ್ಟವಾದ ಎಫ್‌ಎಸ್‌ಎಲ್‌ ವರದಿ ಇದ್ದು, ವಶಪಡಿಸಿಕೊಂಡ ವಸ್ತುಗಳಲ್ಲಿ ಪೆಟ್ರೋಲಿಯಂ ಅವಶೇಷಗಳು ಕಂಡುಬಂದಿವೆ ಮತ್ತು ಅದು ಸಕಾರಾತ್ಮಕವಾಗಿದೆ ಎಂದು ಪರೀಕ್ಷಿಸಲಾಗಿದೆ. ಆದರೆ, ವಿಚಾರಣಾ ನ್ಯಾಯಾಲಯವು ಅದನ್ನು ಸರಿಯಾದ ದೃಷ್ಟಿಕೋನದಿಂದ ಪರಿಗಣಿಸಬೇಕಾಗಿತ್ತು ಮತ್ತು ಅದನ್ನು  ಪರಿಗಣಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಹೈಕೋರ್ಟ್ ಆದೇಶದಲ್ಲಿ ಹೇಳಿದೆ.

ಆರೋಪ ಹೊರಿಸುವ ಸಾಕ್ಷ್ಯಗಳನ್ನು ಪರಿಗಣಿಸುವ ಬದಲು, ವಿಚಾರಣಾ ನ್ಯಾಯಾಲಯವು ತಪ್ಪು ದಾರಿಯಲ್ಲಿ ಮುನ್ನಡೆದಿದೆ.  ಸ್ಪೋಟವು ತಕ್ಷಣ ಸಂಭವಿಸಿದೆಯೇ ಅಥವಾ ನಂತರ ಸಂಭವಿಸಿದೆಯೇ ಎಂಬುದನ್ನು ದೊಡ್ಡದಾಗಿ ತೋರಿಸಲಾಗಿದೆ ಮತ್ತು ಅದನ್ನು ಪರಿಗಣಿಸುವ ಅಗತ್ಯವಿಲ್ಲ. ಏಕೆಂದರೆ, ಪ್ರಕರಣದಲ್ಲಿ ಆ ವಿಷಯ ಅಪ್ರಸ್ತುತ. ಆದ್ದರಿಂದ, ವಿಚಾರಣಾ ನ್ಯಾಯಾಲಯ ದಾಖಲೆಯಲ್ಲಿ ಲಭ್ಯವಿರುವ ಸಾಕ್ಷ್ಯಗಳನ್ನು ಪರಿಗಣಿಸುವಲ್ಲಿ ಲೋಪ ಎಸಗಿದೆ. ದಾಖಲೆಯಲ್ಲಿ ಲಭ್ಯವಿರುವ ಸಂಗತಿಯನ್ನು ಸರಿಯಾದ ದೃಷ್ಟಿಕೋನದಿಂದ ಪರಿಗಣಿಸಲಾಗಿಲ್ಲ. ಇದು ನ್ಯಾಯದಾನ ವಿಫಲತೆಗೆ  ಕಾರಣವಾಗಿದೆ. ವಿಚಾರಣಾ ನ್ಯಾಯಾಲಯ ಆರೋಪಿಯನ್ನು ಖುಲಾಸೆಗೊಳಿಸಿ ತಪ್ಪು ಮಾಡಿದೆ ಮತ್ತು ಆ ಆದೇಶ ದೋಷಪೂರಿತವಾಗಿದೆ. ಆದ್ದರಿಂದ, ಆ ಆದೇಶ ರದ್ದುಗೊಳಿಸಿ ಆರೋಪಿಯನ್ನು ಶಿಕ್ಷೆಗೆ ಗುರಿಪಡಿಸಲಾಗುತ್ತಿದೆ ಎಂದು ನ್ಯಾಯಾಲಯ ಹೇಳಿದೆ.

SPP B N Jagadeesha
SPP B N Jagadeesha

ಪ್ರಕರಣದ ಹಿನ್ನೆಲೆ: ಮೈಸೂರಿನ ಉದಯಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನೆಲೆಸಿದ್ದ ಆರೋಪಿ ಅಬ್ದುಲ್‌ ಷರೀಫ್‌ ಮತ್ತು ಮಹಮ್ಮದ್‌ ಅಮೀರ್‌ ಜಾನ್‌ ಕುಟುಂಬದ ನಡುವೆ ಹಣಕಾಸು ವಿಚಾರಕ್ಕೆ ಗಲಾಟೆ ನಡೆದು ವೈಷಮ್ಯ ಉಂಟಾಗಿತ್ತು. ಅದೇ ದ್ವೇಷದಲ್ಲಿ ಷರೀಫ್‌ 2013ರ ಏಪ್ರಿಲ್ 12ರಂದು ಮಧ್ಯರಾತ್ರಿ ಅಮೀರ್ ಜಾನ್ ಮನೆಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ್ದರು. ಘಟನೆಯಲ್ಲಿ ಅಮೀರ್‌ಜಾನ್‌, ತಾಯಿ ಅಪ್ರೋಜ್‌ ಬೇಗಂ, ರೇಷ್ಮಾ, ಅಂಜುಂ, ರಿಜ್ವಾನ್‌, ರಿಜ್ವಾನಾ ಸೇರಿ 6 ಮಂದಿ ಗಂಭೀರವಾಗಿ ಗಾಯಗೊಂಡು ನಂತರ ಮೃತಪಟ್ಟಿದ್ದರು. ಆಗಿನ ಇನ್‌ಸ್ಪೆಕ್ಟರ್‌ ಆರ್‌ ಪಿ ಅಶೋಕ್‌ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದರು.

ರಾಜ್ಯ ಸರ್ಕಾರಿ ಅಭಿಯೋಜಕ ಬಿ ಎನ್‌ ಜಗದೀಶ್‌ ಸರ್ಕಾರವನ್ನು ಪ್ರತಿನಿಧಿಸಿದ್ದರು.

Attachment
PDF
State of Karnataka Vs Abdul Sharief @ Ameer Jan
Preview
Kannada Bar & Bench
kannada.barandbench.com