ಪರೀಕ್ಷಾ ಅವಧಿಗೂ ಮೊದಲು ಪರೀಕ್ಷಾ ಅಂಗಳದಲ್ಲಿ ಮೊಬೈಲ್ ಫೋನ್ ಇರಿಸಿಕೊಂಡಿದ್ದ ಹಿನ್ನೆಲೆಯಲ್ಲಿ ‘ಅಕ್ರಮ ಎಸಗಿದ್ದಾರೆ’ ಎಂದು ಆರೋಪಿಸಿ ವಿದ್ಯಾರ್ಥಿನಿಯೊಬ್ಬರಿಗೆ ಮರುಪರೀಕ್ಷೆ ಬರೆಯಲು ಸಿಬಿಎಸ್ಇ ನೀಡಿದ್ದ ಸೂಚನಾಪತ್ರವನ್ನು ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ರದ್ದುಗೊಳಿಸಿದೆ.
ಆಕೆಯ ಪರೀಕ್ಷೆ ರದ್ದುಗೊಳಿಸುವುದು, ಪುನಃ ಪರೀಕ್ಷೆ ತೆಗೆದುಕೊಳ್ಳಲು ಒತ್ತಾಯಿಸುವುದು ಅಸಮಂಜಸ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ವಿದ್ಯಾರ್ಥಿನಿ ಬರೆಯಬೇಕಿದ್ದ ಜೀವಶಾಸ್ತ್ರ ಪರೀಕ್ಷೆ ರದ್ದುಗೊಳಿಸಿ ಸಿಬಿಎಸ್‌ಇ ಈ ಸೂಚನಾ ಪತ್ರ ನೀಡಿತ್ತು. ಪರೀಕ್ಷೆಯ ಅಂಗಳಕ್ಕೆ ಫೋನ್ ಒಯ್ಯುವುದನ್ನು ಸಿಬಿಎಸ್ಇ ಪರೀಕ್ಷೆಯ ನಿಯಮಾವಳಿಗಳಡಿ ನಿರ್ಬಂಧಿಸಲಾಗಿತ್ತು.
ಪ್ರಕರಣದ ವಿಚಾರಣೆಯನ್ನು ನಡೆಸಿದ ನ್ಯಾಯಮೂರ್ತಿ ಕೃಷ್ಣ ಪಿ ದೀಕ್ಷಿತ್ ಅವರು ‘ಪರೀಕ್ಷೆ ರದ್ದುಪಡಿಸುವುದು ಅಸಮರ್ಪಕ ಪ್ರಮಾಣದ ದಂಡವಾಗುತ್ತದೆ’ ಎಂದು ತೀರ್ಪು ನೀಡಿ ಸಿಬಿಎಸ್ಇ ಆದೇಶ ರದ್ದುಪಡಿಸಿದ್ದಾರೆ.
ಪರೀಕ್ಷೆಗೆ ಮೊದಲು ಯಾವದೇ ವಸ್ತುಗಳನ್ನು ವಿದ್ಯಾರ್ಥಿ ಇರಿಸಿಕೊಳ್ಳುವುದು ಸಿಬಿಎಸ್ಇ ರೂಪಿಸಿರುವ ನಿಯಮಗಳಿಗೆ ವಿರುದ್ಧವಲ್ಲ ಎಂದು ಕೂಡ ನ್ಯಾಯಾಲಯ ಸ್ಪಷ್ಟಪಡಿಸಿದೆ.
ಸಿಬಿಎಸ್ಇ ನೀಡಿದ ಆದೇಶದಿಂದಾಗಿ ಆಕೆ ಗಣಿತ ಪರೀಕ್ಷೆಯಲ್ಲಿ ಅನುತ್ತೀರ್ಣಳಾಗಿದ್ದರಿಂದ 2020ರ ಸೆಪ್ಟೆಂಬರ್ ತಿಂಗಳಲ್ಲಿ ನಿಗದಿಯಾಗಿದ್ದ ಸಿಬಿಎಸ್ಇ ಪೂರಕ ಪರೀಕ್ಷೆ ತೆಗೆದುಕೊಳ್ಳಲು ಕೂಡ ಅನರ್ಹಳಾಗಿದ್ದಳು. ಆಕೆಗೆ ಉಳಿದಿದ್ದ ಒಂದೇ ಒಂದು ಮಾರ್ಗವೆಂದರೆ ಹೊಸ ಪಠ್ಯಕ್ರಮದ ಮತ್ತು ಕೋರ್ಸ್ ಅಧ್ಯಯನದ ಅನುಸಾರ ‘ಪೂರ್ಣ ವಿಷಯ ವರ್ಗ’ದಡಿಯಲ್ಲಿ ಪರೀಕ್ಷೆಗೆ ಹಾಜಾರಾಗುವುದಾಗಿತ್ತು. ಇದರಿಂದ ಅವರು ಕೋರ್ಟ್ ಮೆಟ್ಟಿಲೇರಬೇಕಾಯಿತು.
ವಕೀಲರಾದ ಮಹೇಶ್ ಚೌಧರಿ ಮತ್ತು ಧ್ಯಾನ್ ಚಿನ್ನಪ್ಪ ವಿದ್ಯಾರ್ಥಿನಿ ಪರವಾಗಿ ವಾದ ಮಂಡಿಸಿದರು.