ಆಜಾನ್‌ನಲ್ಲಿನ ವಿಚಾರಗಳನ್ನು ನಿರ್ಬಂಧಿಸಲು ಕೋರಿ ಸಲ್ಲಿಸಿದ್ದ ಪಿಐಎಲ್‌ ಆಲಿಸಲು ನಿರಾಕರಿಸಿದ ಕರ್ನಾಟಕ ಹೈಕೋರ್ಟ್‌

ಇತರ ಧರ್ಮಗಳ ಅನುಯಾಯಿಗಳ ಭಾವನೆಗಳಿಗೆ ಆಜಾನ್‌ನಲ್ಲಿರುವ ವಿಚಾರಗಳು ನೋವುಂಟು ಮಾಡುವುದರಿಂದ ಅದನ್ನು ಧ್ವನಿವರ್ದಕಗಳ ಮೂಲಕ ಕೂಗುವುದನ್ನು ತಡೆಯಬೇಕು ಎಂದು ಕೋರಲಾಗಿದ್ದ ಮನವಿ.
Karnataka High Court and Loud Speakers
Karnataka High Court and Loud Speakers

ಮಸೀದಿಗಳಲ್ಲಿ ಧ್ವನಿವರ್ಧಕಗಳ ಮೂಲಕ ಕೂಗಲಾಗುವ ಆಜಾನ್‌ನಲ್ಲಿರುವ ವಿಚಾರಗಳನ್ನು ನಿರ್ಬಂಧಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ಆಲಿಸಲು ಕರ್ನಾಟಕ ಹೈಕೋರ್ಟ್‌ ಸೋಮವಾರ ನಿರಾಕರಿಸಿತು. ಇತರ ಧರ್ಮಗಳ ಅನುಯಾಯಿಗಳ ಭಾವನೆಗಳಿಗೆ ಆಜಾನ್‌ನಲ್ಲಿರುವ ವಿಚಾರಗಳು ನೋವುಂಟು ಮಾಡುವುದರಿಂದ ಅದನ್ನು ಧ್ವನಿವರ್ದಕಗಳ ಮೂಲಕ ಕೂಗುವುದನ್ನು ತಡೆಯಬೇಕು ಎಂದು ಮನವಿಯಲ್ಲಿ ಕೋರಲಾಗಿತ್ತು.

ಬೆಂಗಳೂರಿನ ಭೈರವೇಶ್ವರ ನಗರದ ನಿವಾಸಿ ಚಂದ್ರಶೇಖರ್‌ ಆರ್‌ ಎನ್ನುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್‌ ಆರಾಧೆ ಅವರ ನೇತೃತ್ವದ ಪೀಠವು ನಡೆಸಿತು. ದಿನಂಪ್ರತಿ ಐದು ಬಾರಿ ವರ್ಷವಿಡೀ ಅಜಾನ್‌ ಕೂಗುವುದರಿಂದ ಇತರೆ ಧರ್ಮಾನುಯಾಯಿಗಳ ಭಾವನೆಗೆ ಧಕ್ಕೆಯುಂಟಾಗುತ್ತದೆ ಎಂದು ಅರ್ಜಿದಾರರು ವಾದಿಸಿದ್ದರು.

ಅರ್ಜಿದಾರರ ವಾದವನ್ನು ಒಪ್ಪದ ಪೀಠವು, “ಆಜಾನ್‌ ಅಗತ್ಯ ಧಾರ್ಮಿಕ ಆಚರಣೆ ಎಂದು ಅರ್ಜಿದಾರರೇ ಹೇಳಿದ್ದಾರೆ. ಆದರೆ, ಆಜಾನ್‌ನಲ್ಲಿರುವ ವಿಚಾರವು ಅರ್ಜಿದಾರರು ಹಾಗೂ ಇತರೆ ಧರ್ಮಗಳ ಅನುಯಾಯಿಗಳ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎನ್ನುವ ಅರ್ಜಿದಾರರ ವಾದವನ್ನು ಒಪ್ಪಲು ಸಾಧ್ಯವಿಲ್ಲ. ಅಲ್ಲದೆ, ಅರ್ಜಿದಾರರ ವಿಷಯದಲ್ಲಿಯೂ ಸಹ ಸಂವಿಧಾನದ 25ನೇ ವಿಧಿಯಡಿ ನೀಡಲಾಗಿರುವ ಮೂಲಭೂತ ಹಕ್ಕುಗಳನ್ನು ಅತಿಕ್ರಮಿಸಲಾಗಿಲ್ಲ ಎನ್ನುವುದನ್ನು ಇಲ್ಲಿ ಗಮನಿಸಬೇಕಿದೆ,” ಎಂದಿತು.

ಮುಂದುವರೆದು, ಸಂವಿಧಾನದ 25 ಮತ್ತು 26ನೇ ವಿಧಿಗಳು ಭಾರತೀಯ ಸಂಸ್ಕೃತಿಯ ಸಹನಶೀಲತೆಯ ಮೂರ್ತರೂಪವಾಗಿವೆ. 25(1) ವಿಧಿಯು ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಧರ್ಮದಲ್ಲಿ ಶ್ರದ್ಧೆ ಇರಿಸಲು, ಆಚರಿಸಲು ಮತ್ತು ಪಸರಿಸಲು ಅನುವು ಮಾಡಿಕೊಡುತ್ತದೆ ಎಂದಿತು.

ಶಬ್ದ ಮಾಲಿನ್ಯಕ್ಕೆ ಸಂಬಂಧಿಸಿದ ವರದಿ ಕೇಳಿದ ಹೈಕೋರ್ಟ್‌

ಇದೇ ವೇಳೆ ನ್ಯಾಯಾಲಯವು,ಶಬ್ದ ಮಾಲಿನ್ಯ (ನಿಯಂತ್ರಣ) ನಿಯಮಾವಳಿಗಳನ್ನು ಉಲ್ಲಂಘಿಸಿರುವ ಪ್ರಕರಣಗಳ ಮಾಹಿತಿಯನ್ನು ಎಂಟು ವಾರಗಳ ಒಳಗೆ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿತು. ಧಾರ್ಮಿಕ ಹಕ್ಕು ಪರಿಪೂರ್ಣ ಹಕ್ಕಲ್ಲ; ಇದು ಸಾರ್ವಜನಿಕ ಸುವ್ಯವಸ್ಥೆ, ಆರೋಗ್ಯ ಮತ್ತು ನೈತಿಕತೆ ಹಾಗೂ ಸಂವಿಧಾನದ ಮೂರನೇ ಭಾಗದಲ್ಲಿರುವ ಹಕ್ಕುಗಳಿಗೆ ಪೂರಕವಾಗಿ ನಿರ್ಬಂಧಗಳಿಗೆ ಒಳಪಟ್ಟಿರುತ್ತದೆ ಎಂದು ಹೇಳಿತು.

Related Stories

No stories found.
Kannada Bar & Bench
kannada.barandbench.com