

ಐತಿಹಾಸಿಕ ಸ್ಮಾರಕವಾದ ಗುಲ್ಬರ್ಗ (ಕಲಬುರಗಿ) ಕೋಟೆಯ ಹೊರಗಿನ 100 ಮೀಟರ್ ಸಂರಕ್ಷಿತ ಪ್ರದೇಶದೊಳಗೆ ಯಾವುದೇ ಒತ್ತುವರಿಗಳಿವೆಯೇ ಎಂದು ಪರಿಶೀಲಿಸುವಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ಎಎಸ್‌ಐ) ಕರ್ನಾಟಕ ಹೈಕೋರ್ಟ್ ಮಂಗಳವಾರ ನಿರ್ದೇಶಿಸಿದೆ.
ಕಲಬುರಗಿ ಕೋಟೆಯ ಪ್ರದೇಶವನ್ನು ನೂರಾರು ಕುಟುಂಬಗಳು ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡು ವಾಸ ಮಾಡುತ್ತಿವೆ ಎಂದು ಆರೋಪಿಸಿ ಶರಣ್ ದೇಸಾಯಿ ಎಂಬುವರು 2018ರಲ್ಲಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಅನು ಶಿವರಾಮನ್ ಮತ್ತು ಟಿ ಪಿ ವಿವೇಕಾನಂದ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ರಾಜ್ಯ ಸರ್ಕಾರದ ಪರ ವಕೀಲರು, ಕೋಟೆಯೊಳಗಿನ ನಿವಾಸಿಗಳ ಪುನರ್ವಸತಿ ಕಾರ್ಯ ಪ್ರಗತಿಯಲ್ಲಿದೆ. ಪುನರ್ವಸತಿ ಸ್ಥಳದಲ್ಲಿ ಒಳಚರಂಡಿ ಕಾಮಗಾರಿ ಶೀಘ್ರದಲ್ಲೇ ಪೂರ್ಣಗೊಳ್ಳಲಿದ್ದು, ಆ ನಂತರ ಗುರುತಿಸಲಾದ ಕುಟುಂಬಗಳಿಗೆ ನಿವೇಶನಗಳನ್ನು ಹಂಚಲಾಗುವುದು ಎಂದು ಪೀಠಕ್ಕೆ ಮಾಹಿತಿ ನೀಡಿದರಲ್ಲದೆ, ಪುನರ್ವಸತಿಗೆ ಸಂಬಂಧಿಸಿದ ವರದಿ ಸಿದ್ಧವಿದ್ದು, ಅದನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಅರ್ಜಿ ಕುರಿತು ಖುದ್ದು ವಾದ ಮಂಡಿಸಿದ ಶರಣ್ ದೇಸಾಯಿ, ಕೋಟೆಯೊಳಗಿನ ಒತ್ತುವರಿಗಳ ತೆರವಿಗೆ ಕ್ರಮ ಕೈಗೊಳ್ಳಲಾಗುತ್ತಿದ್ದರೂ, ಕೋಟೆಯ ಹೊರಗಿನ 100 ಮೀಟರ್ ವ್ಯಾಪ್ತಿಯ ಸಂರಕ್ಷಿತ ಪ್ರದೇಶದಲ್ಲಿ ಅಕ್ರಮ ವಾಸಿಗಳು ಮುಂದುವರಿದಿದ್ದಾರೆ. ಪುನರ್ವಸತಿಗಾಗಿ ಗುರುತಿಸಲಾಗಿರುವ ಕೋಟೆ ಒಳಗಿನ ಪ್ರದೇಶದ 282 ಕುಟುಂಬಗಳಲ್ಲದೆ, ಕೋಟೆಯ ಹೊರಗೂ 167 ಅಕ್ರಮ ನಿವಾಸಿಗಳಿದ್ದಾರೆ ಎಂದು ಪೀಠಕ್ಕೆ ವಿವರಿಸಿದರು.
ಆಗ ಪೀಠ, ಸಂರಕ್ಷಿತ ಪ್ರದೇಶದ ಭಾಗವಾಗಿರುವ ಕೋಟೆಯ ಹೊರಗಿನ ಒತ್ತುವರಿಗಳಿಗೆ ಸಂಬಂಧಿಸಿದಂತೆ ಯಾವುದಾದರೂ ವರದಿ ಇದೆಯೇ ಎಂದು ಪ್ರಶ್ನಿಸಿತು. ಈ ಕುರಿತು ಪರಿಶೀಲಿಸಬೇಕಾಗಿದೆ ಎಂದು ಸರ್ಕಾರದ ಪರ ವಕೀಲರು ತಿಳಿಸಿದರು.
ಅದಕ್ಕೆ ಪೀಠ, ಕೋಟೆಯ ಹೊರಗೆ 100 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಒತ್ತುವರಿಗಳಿವೆಯೇ ಎಂಬ ಬಗ್ಗೆ ಮಾಹಿತಿ ಪಡೆಯುವಂತೆ ಪುರಾತತ್ವ ಇಲಾಖೆ ಪರವಾಗಿ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಅರವಿಂದ್ ಕಾಮತ್ ಅವರಿಗೆ ನಿರ್ದೇಶಿಸಿತು.
ವಿವಾದಿತ ಪ್ರದೇಶದಲ್ಲಿ ಅಕ್ರಮ ವಾಸಿಗಳು ಕಂಡುಬಂದರೆ, ಅವರನ್ನು ತೆರವುಗೊಳಿಸಲು ಸ್ಥಳೀಯ ಅಧಿಕಾರಿಗಳಿಗೆ ನಿರ್ದೇಶನ ನೀಡಬಹುದು. ಏಕೆಂದರೆ, ಅಂತಹ ಒತ್ತುವರಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಸ್ಥಳೀಯ ಅಧಿಕಾರಿಗಳು ನಿರ್ವಹಿಸಬೇಕೇ ಹೊರತು ಎಎಸ್‌ಐ ಅಲ್ಲ ಎಂದು ಅರವಿಂದ್ ಕಾಮತ್ ಪೀಠಕ್ಕೆ ತಿಳಿಸಿದರು.
ಅಂತಿಮವಾಗಿ ಪೀಠವು ಪ್ರಕರಣದ ವಸ್ತುಸ್ಥಿತಿ ವರದಿ ಸಲ್ಲಿಸಲು ರಾಜ್ಯ ಸರ್ಕಾರ ಹಾಗೂ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ಕಾಲಾವಕಾಶ ನೀಡಿ, ಅರ್ಜಿ ವಿಚಾರಣೆಯನ್ನು ಅಕ್ಟೋಬರ್ 12ಕ್ಕೆ ಮುಂದೂಡಿತು.