ಗೌನ್ ಧರಿಸಿದ ವಕೀಲರ ಜಾಹೀರಾತುಗಳನ್ನು ತೆಗೆದುಹಾಕಲು ಕಾನೂನು ಕಾಲೇಜಿಗೆ ಕರ್ನಾಟಕ ಹೈಕೋರ್ಟ್ ನಿರ್ದೇಶನ

ಆಕ್ಷೇಪಾರ್ಹವಾದ ಚಿತ್ರಗಳನ್ನು ಹೊಂದಿರುವ ಪ್ರಚಾರ ಬ್ಯಾನರ್‌ಗಳನ್ನು ಬದಲಾಯಿಸಲು ನ್ಯಾಯಾಲಯವು ಕಾನೂನು ಶಾಲೆಗಳಿಗೆ ಎಂಟು ವಾರಗಳ ಕಾಲಾವಕಾಶ ನೀಡಿದೆ.
Karnataka High Court and Lawyers' black gowns
Karnataka High Court and Lawyers' black gowns
Published on

ಕಾನೂನು ಶಾಲೆ ನಡೆಸುತ್ತಿರುವ ಶೈಕ್ಷಣಿಕ ಟ್ರಸ್ಟ್‌ಗೆ ವಕೀಲರ ಉಡುಪಿನಲ್ಲಿರುವ ವ್ಯಕ್ತಿಯನ್ನು ಚಿತ್ರಿಸುವ ಪ್ರಚಾರ ಬ್ಯಾನರ್‌ಗಳು ಮತ್ತು ಫ್ಲೆಕ್ಸ್‌ಗಳನ್ನು ತೆಗೆದುಹಾಕುವಂತೆ ಕರ್ನಾಟಕ ಹೈಕೋರ್ಟ್ ಈಚೆಗೆ ನಿರ್ದೇಶನ ನೀಡಿದೆ.

ಜಾಹೀರಾತು ಫಲಕಗಳನ್ನು ತೆರವುಗೊಳಿಸಬೇಕು. ಇಲ್ಲ ಕ್ರಮ ಎದುರಿಸುವಂತೆ ಆದೇಶಿಸಿದ್ದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಿರ್ದೇಶನವನ್ನು ಪ್ರಶ್ನಿಸಿ ಭಾರತಿ ಶೈಕ್ಷಣಿಕ ಸೊಸೈಟಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಬಿ ಎಂ ಶ್ಯಾಮ್‌ಪ್ರಸಾದ್‌ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

“ಭಾರತೀಯ ವಕೀಲರ ಪರಿಷತ್‌ ನಿಯಮಗಳನ್ನು ಗೌನ್‌ ಧರಿಸಿರುವ ವಕೀಲರ ಜಾಹೀರಾತು ಉಲ್ಲಂಘಿಸುತ್ತದೆ ಎಂದು ಸ್ಥಳೀಯ ಆಡಳಿತ ಹೇಳಿರುವುದು ಸರಿಯಾಗಿದೆ. ಜಾಹೀರಾತು ಫಲಕಗಳ ಪಟ್ಟಿಯನ್ನೇ ಸಲ್ಲಿಸಲಾಗಿದೆ. ಈ ಫಲಕಗಳಲ್ಲಿ ವಕೀಲರಿಗೆ ನಿಗದಿಪಡಿಸಿರುವ ಸಮವಸ್ತ್ರ ತೊಡಿಸಲಾಗಿದೆ. ಇಂಥ ಯಾವುದೇ ವ್ಯಕ್ತಿಗತ ಜಾಹೀರಾತು ಬಿಸಿಐ ನಿಯಮಗಳಿಗೆ ವಿರುದ್ಧವಾಗಿದೆ” ಎಂದು ನ್ಯಾಯಾಲಯ ಹೇಳಿದೆ.

ಟ್ರಸ್ಟ್‌ ಪ್ರತಿನಿಧಿಸಿದ್ದ ವಕೀಲ ಕೆ ಬಿ ಮೌನೇಶ್‌ ಅವರು “ಕಾಲಾವಕಾಶ ನೀಡಿದರೆ ಆಕ್ಷೇಪಾರ್ಹವಾದ ಜಾಹೀರಾತು ಫಲಕದ ಭಾಗವನ್ನು ತೆಗೆಯಲಾಗುವುದು” ಎಂದರು. ಇದನ್ನು ಆಲಿಸಿದ ಪೀಠವು ಶೈಕ್ಷಣಿಕ ಸಂಸ್ಥೆಗೆ ಎಂಟು ವಾರಗಳ ಕಾಲಾವಕಾಶ ನೀಡಿತು. ಅಲ್ಲದೇ, ಎರಡು ತಿಂಗಳು ಬಲವಂತದ ಕ್ರಮಕೈಗೊಳ್ಳುವುದನ್ನು ತಡೆಹಿಡಿಯಬೇಕು. ಆನಂತರ ಕ್ರಮದ ಬಗ್ಗೆ ತೀರ್ಮಾನಿಸುವಂತೆ ಪಿಡಿಒಗೆ ನಿರ್ದೇಶಿಸಿದೆ.

ವಕೀಲರ ನಿಲುವಂಗಿಯಲ್ಲಿರುವ ವ್ಯಕ್ತಿಗಳ ಚಿತ್ರಗಳನ್ನು ಹೊಂದಿರುವ ಜಾಹೀರಾತು ಫಲಕಗಳನ್ನು ಸಂಸ್ಥೆಯ ವಿವರಗಳು ಮತ್ತು ಕಾನೂನು ಪದವಿ ಕೋರ್ಸ್‌ನೊಂದಿಗೆ ಬದಲಾಯಿಸಲು ನ್ಯಾಯಾಲಯವು ಟ್ರಸ್ಟ್‌ಗೆ ಸ್ವಾತಂತ್ರ್ಯ ಕಲ್ಪಿಸಿದೆ.

ಹೆಚ್ಚುವರಿ ಸರ್ಕಾರಿ ವಕೀಲ ಬೋಪಣ್ಣ ಬೆಳ್ಳಿಯಪ್ಪ ಸರ್ಕಾರವನ್ನು ಪ್ರತಿನಿಧಿಸಿದ್ದರು.

Kannada Bar & Bench
kannada.barandbench.com