ಹದಿನಾರು ಕಾರ್ಮಿಕರನ್ನು ಕಾಯಂಗೊಳಿಸಲು ಮಂಗಳೂರು ಮಹಾನಗರ ಪಾಲಿಕೆಗೆ ಹೈಕೋರ್ಟ್‌ ನಿರ್ದೇಶನ

ಭಗವಾನ್‌ ದಾಸ್‌ ಮತ್ತಿತರ ಕಾರ್ಮಿಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌ ಸುನಿಲ್‌ ದತ್‌ ಯಾದವ್‌ ಅವರ ಏಕಸದಸ್ಯ ಪೀಠವು ಆದೇಶದ ಪ್ರತಿ ಲಭ್ಯವಾದ 60 ದಿನದಲ್ಲಿ ಅರ್ಜಿದಾರರನ್ನು ಖಾಯಂಗೊಳಿಸುವಂತೆ ಆದೇಶಿಸಿದೆ.
Karnataka High Court and Justice S Sunil Dutt Yadav
Karnataka High Court and Justice S Sunil Dutt Yadav
Published on

ಮಂಗಳೂರು ಮಹಾನಗರ ಪಾಲಿಕೆಯಲ್ಲಿ ನೀರು ಸರಬರಾಜು ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದ 16 ಕಾರ್ಮಿಕರ ನೆರವಿಗೆ ಧಾವಿಸಿರುವ ಕರ್ನಾಟಕ ಹೈಕೋರ್ಟ್‌ ಅವರ ಸೇವೆಯನ್ನು ಕಾಯಂಗೊಳಿಸುವಂತೆ ನಿರ್ದೇಶಿಸಿದೆ.

ಭಗವಾನ್‌ ದಾಸ್‌ ಮತ್ತಿತರ ಕಾರ್ಮಿಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌ ಸುನಿಲ್‌ ದತ್‌ ಯಾದವ್‌ ಅವರ ಏಕಸದಸ್ಯ ಪೀಠವು ಆದೇಶದ ಪ್ರತಿ ಲಭ್ಯವಾದ 60 ದಿನದಲ್ಲಿ ಅರ್ಜಿದಾರರನ್ನು ಖಾಯಂಗೊಳಿಸುವಂತೆ ಆದೇಶಿಸಿದೆ.

ನೇರ ನೇಮಕಾತಿಯನ್ನು ತಪ್ಪಿಸುವುದಕ್ಕಾಗಿ ಹೊರ ಗುತ್ತಿಗೆ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂಬುದಾಗಿ ಸುಪ್ರೀಂ ಕೋರ್ಟ್‌ ನೀಡಿರುವ ವಿವಿಧ ಆದೇಶಗಳನ್ನು ಉಲ್ಲೇಖಿಸಿರುವ ಪೀಠವು ಅರ್ಜಿದಾರರನ್ನು ಕಾಯಂಗೊಳಿಸುವ ಮನವಿ ತಿರಸ್ಕರಿಸಿ 2025ರ ಜನವರಿ 31 ರಂದು ಜಿಲ್ಲಾಧಿಕಾರಿ ಹೊರಡಿಸಿದ್ದ ಆದೇಶವನ್ನು ರದ್ದುಪಡಿಸಿದೆ. 16 ಮಂದಿ ಕಾರ್ಮಿಕರನ್ನು ಸೇವೆ ಸಲ್ಲಿಸಿದ್ದ ಹತ್ತು ವರ್ಷಗಳ ಪೂರ್ಣಗೊಂಡ ದಿನಾಂಕದಿಂದ ಕಾಯಂಗೊಳಿಸಿ ಆದೇಶ ಹೊರಡಿಸುವಂತೆ ಜಿಲ್ಲಾಧಿಕಾರಿಗೆ ನಿರ್ದೇಶಿಸಿದೆ.

ಅರ್ಜಿದಾರರ ಪರ ವಕೀಲರು “ಸುಮಾರು 28 ವರ್ಷಗಳಿಂದ ವಾಲ್ವ್‌ ಮೆನ್‌ ಮತ್ತು ಪಂಪ್‌ ಆಪರೇಟರ್‌ಗಳಾಗಿ ಅರ್ಜಿದಾರರು ಗುತ್ತಿಗೆ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದರು. ಪಾಲಿಕೆಯಲ್ಲಿ ಖಾಲಿ ಹುದ್ದೆಗಳಿದ್ದರೂ ಗುತ್ತಿಗೆ ಆಧಾರದ ಸೇವೆ ಮುಂದುವರಿಸಲಾಗಿದೆ. ಗುತ್ತಿಗೆ ಕಾರ್ಮಿಕರ (ನಿಯಂತ್ರಣ ಮತ್ತು ರದ್ದತಿ) ಕಾಯಿದೆ ಸೆಕ್ಷನ್‌ 10ರ ಅಡಿಯಲ್ಲಿ ಮಂಗಳೂರು ಮಹಾನಗರ ಪಾಲಿಕೆ ನೀರು ಸರಬರಾಜು ವಿಭಾಗದಲ್ಲಿ ಗುತ್ತಿಗೆ ಕಾರ್ಮಿಕರ ಸೇವೆ ರದ್ದುಗೊಳಿಸಿರುವುದಾಗಿ ರಾಜ್ಯ ಸರ್ಕಾರ ಆದೇಶಿಸಿದೆ. ಆದರೂ, ಅರ್ಜಿದಾರರು 2006ರ ಬಳಿಕವೂ ಗುತ್ತಿಗೆ ನೌಕರರಾಗಿ ಸೇವೆ ಮುಂದುವರೆಸಿದ್ದಾರೆ. ಒಂದು ವೇಳೆ ಅರ್ಜಿದಾರರನ್ನು 2006ರ ಬಳಿಕ ಗುತ್ತಿಗೆ ಸೇವೆಯಿಂದ ಮುಂದುವರಿಸದಿದ್ದರೆ ಕಾಯಂಗೊಳಿಸುವ ಕೋರುವ ಹಕ್ಕು ಇರುತ್ತಿರಲಿಲ್ಲ. ಗುತ್ತಿಗೆ ಕಾರ್ಮಿಕರ ಸೇವೆಯನ್ನು 2016ರ ರದ್ದುಪಡಿಸಿರುವ ಹೊರತಾಗಿಯೂ ಪಾಲಿಕೆಯಲ್ಲಿ ಅರ್ಜಿದಾರರು ಗುತ್ತಿಗೆ ಕಾರ್ಮಿಕರಾಗಿ ನಿರಂತರ ಸೇವೆ ಸಲ್ಲಿಸುತ್ತಿದ್ದು, ಕಾಯಂಗೊಳಿಸಬೇಕು” ಎಂದು ಮನವಿ ಮಾಡಿದ್ದರು.

Kannada Bar & Bench
kannada.barandbench.com