ಸೌಜನ್ಯ ಕೊಲೆ ಪ್ರಕರಣ ಮರು ತನಿಖೆ ಕೋರಿದ್ದ ಪಿಐಎಲ್‌ ವಜಾಗೊಳಿಸಿದ ಕರ್ನಾಟಕ ಹೈಕೋರ್ಟ್‌

ಸರ್ಕಾರ, ಮೂಲ ದೂರುದಾರರು ಅಥವಾ ಸಂತ್ರಸ್ತ ಕುಟುಂಬವು ಆರೋಪಿಯನ್ನು ದೋಷಮುಕ್ತಗೊಳಿಸಿದ ವಿಚಾರಣಾಧೀನ ನ್ಯಾಯಾಲಯದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದಿರುವ ನ್ಯಾಯಾಲಯ.
High Court of Karnataka
High Court of Karnataka
Published on

ಸೌಜನ್ಯ ಕೊಲೆ ಮತ್ತು ಅತ್ಯಾಚಾರ ಪ್ರಕರಣದ ಆರೋಪಿ ಖುಲಾಸೆಗೊಂಡಿರುವ ಹಿನ್ನೆಲೆಯಲ್ಲಿ ಮರು ತನಿಖೆಗೆ ಸಾರ್ವಜನಿಕರು ಪ್ರತಿಭಟನೆ ನಡೆಸಿ ಒತ್ತಾಯ ಮಾಡಿರುವ ಕಾರಣ ಕರ್ನಾಟಕ ಹೈಕೋರ್ಟ್ ಮೇಲ್ವಿಚಾರಣೆಯಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ) ಅಥವಾ ವಿಶೇಷ ತನಿಖಾ ತಂಡದಿಂದ (ಎಸ್‌ಐಟಿ) ಹೊಸದಾಗಿ ತನಿಖೆ ನಡೆಸಲು ರಾಜ್ಯ ಸರ್ಕಾರಕ್ಕೆ ಆದೇಶಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್ ಶುಕ್ರವಾರ ವಜಾಗೊಳಿಸಿದೆ.

ಬೆಂಗಳೂರಿನ ಶೇಷಾದ್ರಿಪುರದ ಸಾಮಾಜಿಕ ಕಾರ್ಯಕರ್ತ ಗಿರೀಶ್ ಭಾರದ್ವಾಜ್, ಬೆಳ್ತಂಗಡಿಯ ಜಿ ನವೀನ್ ಕುಮಾರ್ ಮತ್ತು ಬಲ್ವಾಡು ಪುತ್ತೂರಿನ ವಿನಾಯಕ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪಿ ಬಿ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠವು ವಿಚಾರಣೆ ನಡೆಸಿತು. ಅರ್ಜಿದಾರರು ಎತ್ತಿರುವ ಮನವಿ ಕುರಿತು ಕಾನೂನಿನಡಿ ಲಭ್ಯವಿರುವ ಪರ್ಯಾಯ ವಿಧಾನಗಳ ಮೂಲಕ ಪರಿಹಾರ ಪಡೆಯಬಹುದು ಎಂದು ಅಭಿಪ್ರಾಯಪಟ್ಟು ನ್ಯಾಯಾಲಯವು ಅರ್ಜಿ ವಜಾಗೊಳಿಸಿತು.

ಇದಕ್ಕೂ ಮುನ್ನ ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಅರುಣ್ ಶ್ಯಾಮ್ ಅವರು 2012ರಲ್ಲಿ ವಿದ್ಯಾರ್ಥಿನಿ ಸೌಜನ್ಯ ಕೊಲೆ ಮತ್ತು ಅತ್ಯಾಚಾರ ಘಟನೆ ನಡೆದಿದೆ. ಪ್ರಕರಣದ ಆರೋಪಿ ವಿರುದ್ಧ ಸೂಕ್ತ ಸಾಕ್ಷ್ಯಧಾರಗಳು ಇಲ್ಲ ಎಂಬ ಕಾರಣಕ್ಕೆ ಆತನನ್ನು ವಿಚಾರಣಾಧೀನ ನ್ಯಾಯಾಲಯ ಖುಲಾಸೆಗೊಳಿಸಿದೆ. ಆದರೆ, ಘಟನೆ ನಡೆದಿರುವುದು ನಿಜ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ. ಅಂದರೆ ನಿಜವಾದ ದೋಷಿ ಪ್ರಕರಣದಿಂದ ತಪ್ಪಿಸಿಕೊಂಡಿದ್ದಾರೆ. ಪ್ರಕರಣ ನಡೆದ ನಂತರ ತನಿಖಾಧಿಕಾರಿ ಮತ್ತು ವೈದ್ಯರಿಂದ ಕೆಲವೊಂದು ಲೋಪಗಳು ನಡೆದಿವೆ. ಇದರಿಂದ ಮರು ತನಿಖೆ ನಡೆಸಬೇಕು ಎಂಬ ಅಭಿಪ್ರಾಯ ಸಾರ್ವಜನಿಕರಿಂದ ವ್ಯಕ್ತವಾಗಿದೆ. ಹೀಗಾಗಿ, ಸಿಬಿಐ, ಇಲ್ಲವೇ ಸ್ವತಂತ್ರ ತನಿಖಾ ಸಂಸ್ಥೆ ಅಥವಾ ಎಸ್‌ಐಟಿಯಿಂದ ಹೊಸದಾಗಿ/ಮರು ತನಿಖೆ ನಡೆಸುವಂತೆ ಸರ್ಕಾರಕ್ಕೆ ಆದೇಶಿಸಬೇಕು ಎಂದು ಕೋರಿದ್ದರು.

ಅದಕ್ಕೆ ಪ್ರತಿಕ್ರಿಯಿಸಿದ ಪೀಠವು ಪ್ರಕರಣದಲ್ಲಿ ಸರ್ಕಾರ, ಮೂಲ ದೂರುದಾರರು ಅಥವಾ ಸಂತ್ರಸ್ತ ಕುಟುಂಬವು ಆರೋಪಿಯನ್ನು ದೋಷಮುಕ್ತಗೊಳಿಸಿದ ವಿಚಾರಣಾಧೀನ ನ್ಯಾಯಾಲಯದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಕಾನೂನಿನಲ್ಲಿ ಅವಕಾಶವಿದೆ. ಮೇಲ್ಮನವಿಯಲ್ಲಿ ತನಿಖಾ ಲೋಪಗಳನ್ನು ಪರಿಗಣಿಸಬಹುದಾಗಿದೆ ಎಂದು ನುಡಿಯಿತು.

ಇದಕ್ಕೆ ಅರುಣ್ ಶ್ಯಾಮ್ ಅವರು ಸಂತ್ರಸ್ತ ಕುಟುಂಬವು ಮೇಲ್ಮನವಿ ಸಲ್ಲಿಸಿಲ್ಲ ಎಂದು ಪೀಠದ ಗಮನಕ್ಕೆ ತಂದರು.

ಆಗ ಪೀಠವು ಹಾಗಾದರೆ ಮೇಲ್ಮನವಿ ಸಲ್ಲಿಸಲು ಸಂತ್ರಸ್ತ ಕುಟುಂಬಕ್ಕೆ ನೀವು ಸಹಾಯ ಮಾಡಿ ಎಂಬುದಾಗಿ ಸಲಹೆ ನೀಡಿತಲ್ಲದೆ, ಸಭೆ-ಸಮಾರಂಭ, ಧರಣಿ ಹಾಗೂ ಸಾರ್ವಜನಿಕರ ಭಾವನೆಗಳಿಂದ ಕಾನೂನು ಚೌಕಟ್ಟು ಮೀರಲು ಸಾಧ್ಯವಿಲ್ಲ. ಅರ್ಜಿದಾರರ ಉದ್ದೇಶ ಒಳ್ಳೆಯದಿದ್ದರೂ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕಾನೂನಿನ ಮಿತಿ ಅರಿತು ವ್ಯವಹರಿಸಬೇಕಾಗುತ್ತದೆ. ಅದರಂತೆ ಅರ್ಜಿ ಹಿಂಪಡೆದು ನಿಮ್ಮ ಮನವಿಗಳ ಕುರಿತು ಕಾನೂನಿನಡಿ ಲಭ್ಯವಿರುವ ಪರ್ಯಾಯ ವಿಧಾನಗಳ ಮೂಲಕ ಪರಿಹಾರ ಪಡೆದುಕೊಳ್ಳಬಹುದು ಎಂದು ತಿಳಿಸಿತು.

ಅರ್ಜಿ ಹಿಂಪಡೆಯಲು ನಿರಾಕರಿಸಿದ ಅರ್ಜಿದಾರ ಪರ ವಕೀಲರು, ಅರ್ಜಿ ಸಂಬಂಧ ಮೆರಿಟ್ ಮೇಲೆ ನ್ಯಾಯಾಲಯವು ಆದೇಶ ಮಾಡಬೇಕು ಎಂದು ಕೋರಿದರು. ಅದಕ್ಕೆ ಒಪ್ಪಿದ ಪೀಠವು ಅರ್ಜಿಯನ್ನು ವಜಾಗೊಳಿಸಲಾಗಿದೆ. ಆ ಕುರಿತು ವಿವರವಾದ ಆದೇಶ ಹೊರಡಿಸಲಾಗುವುದು ಎಂದಿತು.

Also Read
ಸೌಜನ್ಯ ಪ್ರಕರಣ: ತಿಮ್ಮರೋಡಿ ಅಧೀನ ನ್ಯಾಯಾಲಯದ ಆದೇಶ ಉಲ್ಲಂಘಿಸದಂತೆ ನೋಡಿಕೊಳ್ಳಲು ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ

2012ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯ ಎಸ್‌ಡಿಎಂ ಕಾಲೇಜಿನ ವಿದ್ಯಾರ್ಥಿನಿ ಸೌಜನ್ಯ ಕೊಲೆ ಮತ್ತು ಅತ್ಯಾಚಾರ ಘಟನೆ ನಡೆದಿತ್ತು. ಪ್ರಕರಣವನ್ನು ಮೊದಲಿಗೆ ಬೆಳ್ತಂಗಡಿ ಠಾಣಾ ಪೊಲೀಸರು ತನಿಖೆ ನಡೆಸಿದ್ದರು. ಬಳಿಕ ತನಿಖೆಯನ್ನು ಸಿಐಡಿಗೆ ವಹಿಸಲಾಗಿತ್ತು. 2013ರ ನವೆಂಬರ್‌ 6ರಂದು ಸರ್ಕಾರವು ಸಿಬಿಐಗೆ ತನಿಖೆಗೆ ಆದೇಶಿಸಿತ್ತು. ತನಿಖಾಧಿಕಾರಿಗಳು ಕಾರ್ಕಳ ಮೂಲದ ಸಂತೋಷ್ ರಾವ್ ಎಂಬಾತನನ್ನು ಆರೋಪಿಯಾಗಿ ಗುರುತಿಸಿದ್ದರು. ಸಿಬಿಐ ವಿಶೇಷ ನ್ಯಾಯಾಲಯವು 2023ರ ಜುಲೈ 16ರಂದು ಆರೋಪಿಯನ್ನು ಖುಲಾಸೆಗೊಳಿಸಿತ್ತು. ಇದರಿಂದ ವಿವಿಧ ಸಂಘಟನೆಗಳು ರಾಜಕೀಯ ಪಕ್ಷಗಳು ಪ್ರಕರಣದ ಮರು ತನಿಖೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು. ಹೀಗಾಗಿ, ಮರು ತನಿಖೆಗೆ ಆದೇಶಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಅರ್ಜಿದಾರರು ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಸಿದ್ದರು.

Kannada Bar & Bench
kannada.barandbench.com