ಒಂದು ಶ್ರೇಣಿ ಮತ್ತು ಒಂದು ಪಿಂಚಣಿ (ಒಆರ್‌ಒಪಿ) ಜಾರಿಗೆ ಸಂಬಂಧಿಸಿದಂತೆ ಇರುವ ಸಮಸ್ಯೆಗಳಿಗೆ ಪರಿಹಾರ ಸೂಚಿಸಿರುವ ಏಕಸದಸ್ಯ ನ್ಯಾಯಿಕ ಸಮಿತಿಯ ಶಿಫಾರಸ್ಸುಗಳನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿದ್ದ ಮನವಿಯನ್ನು ಈಚೆಗೆ ಕರ್ನಾಟಕ ಹೈಕೋರ್ಟ್ ವಜಾ ಮಾಡಿದೆ (ನಿವೃತ್ತ ವಿಂಗ್ ಕಮಾಂಡರ್ ಜಿ ಬಿ ಅತ್ರಿ ವರ್ಸಸ್ ಭಾರತ ಸರ್ಕಾರ ಮತ್ತು ಇತರರು).
ನಿವೃತ್ತ ವಿಂಗ್ ಕಮಾಂಡರ್ ಜಿ ಬಿ ಅತ್ರಿ ಅವರು ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಎಸ್ ಆರ್ ಕೃಷ್ಣ ಕುಮಾರ್ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.
“ವಾಸ್ತವಿಕ ಸ್ಥಿತಿ ಮತ್ತು ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ಸುಪ್ರೀಂ ಕೋರ್ಟ್ ಈಗಾಗಲೇ ತೀರ್ಪು ನೀಡಿರುವುದರಿಂದ ಹಾಲಿ ಮನವಿಯಲ್ಲಿ ಪರಿಗಣಿಸುವಂಥ ಯಾವುದೇ ಅಂಶ ಉಳಿದಿಲ್ಲ. ಹೀಗಾಗಿ ಮನವಿ ವಜಾ ಮಾಡಲಾಗಿದೆ” ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.
ಸಹಾಯಕ ಸಾಲಿಸಿಟರ್ ಜನರಲ್ ಶಾಂತಿಭೂಷಣ್ ಎಚ್ ಅವರು ಸುಪ್ರೀಂ ಕೋರ್ಟ್ ಇಂಡಿಯನ್ ಎಕ್ಸ್‌ಸರ್ವಿಸ್‌ಮೆನ್ ಮೂವ್‌ಮೆಂಟ್ ಮತ್ತು ಇತರರು ವರ್ಸಸ್ ಭಾರತ ಸರ್ಕಾರ ಮತ್ತು ಇತರರು ಪ್ರಕರಣದಲ್ಲಿ ನೀಡಿರುವ ತೀರ್ಪನ್ನು ಒಳಗೊಂಡು ಮಾರ್ಚ್ 24ರಂದು ಮೆಮೊ ಸಲ್ಲಿಸಿದರು. ಹಾಲಿ ಮನವಿಗೆ ಸಂಬಂಧಿಸಿದ ಕೋರಿಕೆಗಳ ಕುರಿತು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಹೀಗಾಗಿ, ಮನವಿಯು ನಿರ್ವಹಣೆ ಅರ್ಹವಾಗಿಲ್ಲ” ಎಂದರು.
ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ಎಸ್ ವಿ ಪ್ರಕಾಶ್ ಅವರು ಕೇಂದ್ರ ಸರ್ಕಾರದ ವಾದಕ್ಕೆ ಯಾವುದೇ ಆಕ್ಷೇಪ ವ್ಯಕ್ತಪಡಿಸಲಿಲ್ಲ.
2019ರ ಜುಲೈ 1ರಿಂದ ಅನ್ವಯವಾಗುವಂತೆ ನಿವೃತ್ತ ಸೈನಿಕರಿಗೆ ಒಆರ್‌ಒಪಿ ಜಾರಿಗೆ ಸಂಬಂಧಿಸಿದಂತೆ ಕ್ರಮಕೈಗೊಳ್ಳಲು ಭಾರತ ಸರ್ಕಾರಕ್ಕೆ ನಿರ್ದೇಶಿಸಬೇಕು ಮತ್ತು ತಕ್ಷಣ ಈ ಸಂಬಂಧ ಅರಿಯರ್ಸ್ ಅನ್ನು ಪಾವತಿಸಲು ಆದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.
2015ರ ನವೆಂಬರ್ 7ರಂದು ಅಧಿಸೂಚನೆಯ ಮೂಲಕ ಕೇಂದ್ರ ಸರ್ಕಾರವು ಒಆರ್‌ಒಪಿ ಯೋಜನೆ ಜಾರಿ ಮಾಡಿತ್ತು. ಇದನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿತ್ತು. ಒಂದೇ ಶ್ರೇಣಿಯಲ್ಲಿರುವ ಎಲ್ಲ ವ್ಯಕ್ತಿಗಳೂ ಒಂದೇ ಬಗೆಯ ಪಿಂಚಣಿ ಪಡೆಯಬೇಕು ಎನ್ನುವುದಕ್ಕೆ ಯಾವುದೇ ಕಾನೂನಾತ್ಮಕ ಬೆಂಬಲವಿಲ್ಲ ಎಂಬುದಾಗಿ ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್, ಸೂರ್ಯ ಕಾಂತ್ ಹಾಗೂ ವಿಕ್ರಮ್ ನಾಥ್ ಅವರಿದ್ದ ತ್ರಿಸದಸ್ಯ ಪೀಠ ಹೇಳಿತ್ತು.
ಒಆರ್‌ಒಪಿ ಯೋಜನೆ ಕೇಂದ್ರ ಸರ್ಕಾರವು ತೆಗೆದುಕೊಂಡಿರುವ ನೀತಿಯ ನಿರ್ಧಾರವಾಗಿದೆ. ಆ ನಿರ್ಧಾರವು ಸರ್ಕಾರದ ನೀತಿನಿರೂಪಣಾ ಅಧಿಕಾರದ ವ್ಯಾಪ್ತಿಯೊಳಗೆ ಇದೆ. ಇದರಲ್ಲಿ ಯಾವುದೇ ಬಗೆಯ ಸಾಂವಿಧಾನಿಕ ಲೋಪ ನಮಗೆ ಕಂಡಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.
ಒಂದು ಶ್ರೇಣಿ ಒಂದು ಪಿಂಚಣಿಯ ಮೂಲ ಮೌಲ್ಯಗಳಲ್ಲಿ ಒಂದೇ ಬಗೆಯ ಶ್ರೇಣಿ ಮಾತ್ರವೇ ಅಲ್ಲ, ಒಂದೇ ಪ್ರಮಾಣದ ಸೇವಾವಧಿಯೂ ಸಹ ಸೇರಿದೆ ಎನ್ನುವುದನ್ನು ಅರ್ಜಿದಾರರ ವಾದವು ಪರಿಗಣಿಸಲು ಸೋಲುತ್ತದೆ. ಈ ಜೋಡಿ ಅಂಶಗಳನ್ನು ಬೇರ್ಪಡಿಸಲಾಗದು. ಕೇವಲ ಒಂದು ಶ್ರೇಣಿಯನ್ನು ಮಾತ್ರವೇ ಪರಿಗಣಿಸಿ ಸೇವಾವಧಿಯ ದೀರ್ಘತೆಯನ್ನು ನಿರ್ಲಕ್ಷಿಸಲಾಗದು ಎಂದು ಕೇಂದ್ರ ಸರ್ಕಾರವು ತನ್ನ ವಾದದಲ್ಲಿ ಬಲವಾಗಿ ಪ್ರತಿಪಾದಿಸಿತ್ತು.